Tirupati Rain: ತಿರುಮಲಯಲ್ಲಿ ಆಲಿಕಲ್ಲು ಮಳೆ- ಆನಂದಿಸಿದ ಭಕ್ತರು
ಸುಡು ಬಿಸಿಲಿನಿಂದ ಬಿಸಿಯಾಗಿದ್ದ ತಿರುಪತಿ ತಿಮ್ಮಪ್ಪನನ್ನು ಮಳೆರಾಯ ತಂಪಾಗಿಸಿದ್ದಾನೆ. ಆಂಧ್ರಪ್ರದೇಶದಲ್ಲಿ ವಿಭಿನ್ನ ಹವಾಮಾನ ಪರಿಸ್ಥಿತಿ ಚಾಲ್ತಿಯಲ್ಲಿದ್ದು ಒಂದೆಡೆ ಬಿಸಿಲ ಧಗೆ, ಮತ್ತೊಂದೆಡೆ ವರುಣನ ಅರ್ಭಟ ಜೋರಾಗಿದೆ.
ತಿರುಮಲದಲ್ಲಿ ಕಳೆದ ಮೂರು ದಿನಗಳಿಂದ ಧಾರಾಕಾರವಾಗಿ ಮಳೆಯಾಗುತ್ತಿದೆ. ಮಧ್ಯಾಹ್ನದವರೆಗೆ ಬಿಸಿಲು, ಮಧ್ಯಾಹ್ನದಿಂದ ಮಳೆಯ ವಾತಾವರಣ ನಿರ್ಮಾಣವಾಗುತ್ತಿದೆ. ಶನಿವಾರ ತಿರುಮಲದಲ್ಲಿ ಆಲಿಕಲ್ಲು ಮಳೆಯಾಗಿದ್ದು ಇದರಿಂದ ಇಲ್ಲಿಯವರೆಗೆ ಬಿಸಿಲಿನ ಝಳದಿಂದ ಬಳಲುತ್ತಿದ್ದ ಭಕ್ತರಿಗೆ ಮಳೆಯಿಂದ ನೆಮ್ಮದಿ ಸಿಕ್ಕಂತಾಗಿದೆ.

ಆದರೆ ತಿರುಮಲದಲ್ಲಿ ಆಲಿಕಲ್ಲು ಮಳೆಯಾಗಲು ಕಾರಣವಿದೆ ಎನ್ನುತ್ತಾರೆ ಹವಾಮಾನ ತಜ್ಞರು. ಹಗಲಿನಲ್ಲಿ ಹೆಚ್ಚಿನ ತಾಪಮಾನ ದಾಖಲಾಗುವುದರಿಂದ ತಿರುಮಲ ಬಿಸಿ ವಾತಾವರಣವನ್ನು ಅನುಭವಿಸುತ್ತಿದೆ. ಈ ಬಿಸಿ ವಾತಾವರಣಕ್ಕೆ ತಣ್ಣನೆಯ ಗಾಳಿ ಸೇರಿಕೊಂಡು ಕ್ಯುಮುಲೋನಿಂಬಸ್ ಮೋಡಗಳು ಉಂಟಾಗುತ್ತವೆ. ಈ ಮೋಡಗಳು ಗುಡುಗು, ಮಿಂಚು ಸಮೇತ ಆಲಿಕಲ್ಲು ಮಳೆಯನ್ನು ತರಿಸುತ್ತವೆ.
ಭೂಮಿಯು ತುಂಬಾ ಬಿಸಿಯಾದಾಗ ಮತ್ತು ಬಿಸಿ ಗಾಳಿಯೊಂದಿಗೆ ತೇವಾಂಶ ಸಾಗಿಸಿದಾಗ ಈ ಕ್ಯುಮುಲೋನಿಂಬಸ್ ಮೋಡಗಳು ರೂಪುಗೊಳ್ಳುತ್ತವೆ. ಮೋಡಗಳಲ್ಲಿ ತೇವಾಂಶದಿಂದ ಮಂಜುಗಡ್ಡೆಗಳು ರೂಪುಗೊಳ್ಳುತ್ತವೆ. ಪ್ರಸ್ತುತ ತಾಪಮಾನ ದಾಖಲೆ ಮಟ್ಟದಲ್ಲಿರುವುದೇ ಈ ಆಲಿಕಲ್ಲು ಮಳೆಗೆ ಕಾರಣ ಎನ್ನುತ್ತಾರೆ ಹವಾಮಾನ ತಜ್ಞರು.

ಇನ್ನೊಂದೆಡೆ ಆಂಧ್ರಪ್ರದೇಶದಾದ್ಯಂತ ಬಿಸಿಲಿದ್ದರೂ ಅರಣ್ಯ ಪ್ರದೇಶದಿಂದ ಬೀಸುವ ಗಾಳಿಗೆ ತಿರುಮಲದಲ್ಲಿನ ಬಿಸಿ ವಾತಾವರಣ ಬೆರೆತಾಗ ಈ ಕ್ಯುಮುಲೋನಿಂಬಸ್ ಮೋಡಗಳು ನಿರ್ಮಾಣವಾಗುತ್ತವೆ. ಅದಕ್ಕಾಗಿಯೇ ತಿರುಮಲದಲ್ಲಿ ಬೇಸಿಗೆಯಲ್ಲಿ ಆಲಿಕಲ್ಲು ಮಳೆಯಾಗುತ್ತಿದೆ ಎಂದು ಹವಾಮಾನ ತಜ್ಞರು ಹೇಳುತ್ತಾರೆ. ಕಳೆದ ದಿನ ಸುರಿದ ಆಲಿಕಲ್ಲು ಮಳೆಗೆ ತಿರುಪತಿ ಕೊಂಚ ತಣ್ಣಗಾಗಿದೆ. ಬಿಸಿ ಝಳಕ್ಕೆ ಕಂಗೆಟ್ಟಿದ್ದ ಭಕ್ತರು ಮಳೆಯನ್ನು ಆನಂದಿಸಿದ್ದಾರೆ.
ಕ್ಯುಮುಲೋನಿಂಬಸ್ ಮೋಡಗಳು ಎಂದರೇನು?
ಅನೇಕ ಜನರು ಬಿಳಿ ಮೋಡಗಳು ಬೇರೆ ಮತ್ತು ಕಪ್ಪು ಮೋಡಗಳು ಬೇರೆ ಎಂದು ಭಾವಿಸುತ್ತಾರೆ. ವೈಜ್ಞಾನಿಕ ದೃಷ್ಟಿಕೋನದಿಂದ, ಎರಡೂ ಮೋಡಗಳು ಒಂದೇ ಆಗಿರುತ್ತವೆ. ಬಿಳಿ ಮೋಡಗಳು, ಮಳೆಯ ಮೊದಲು ಇರುತ್ತವೆ ನಂತರ ಅದು ಕಪ್ಪು ಮೋಡಗಳಾಗಿ ಬದಲಾಗುತ್ತವೆ. ಇದಕ್ಕೆ ವಿಶೇಷ ಕಾರಣಗಳಿವೆ. ಮಳೆಯ ಮೊದಲು ಕಪ್ಪು ಮೋಡಗಳು ಬರುತ್ತವೆ. ಅದಕ್ಕೂ ಮೊದಲು, ಅದೇ ಮೋಡಗಳು ಬಿಳಿ ಮತ್ತು ಬೆಳ್ಳಿ ಬಣ್ಣಗಳಲ್ಲಿ ಕಾಣಿಸಿಕೊಳ್ಳುತ್ತವೆ. ಕಪ್ಪು ಮತ್ತು ಕಡು ಬಣ್ಣದ ಮೋಡಗಳನ್ನು ಕ್ಯುಮುಲೋನಿಂಬಸ್ ಮೋಡಗಳು ಎಂದು ಕರೆಯಲಾಗುತ್ತದೆ.

ಕಪ್ಪು ಮೋಡಗಳು ಮಂಜುಗಡ್ಡೆಯ ಸಮೀಪವಿರುವ ನೀರಿನ ಹನಿಗಳಿಂದ ದಟ್ಟವಾಗಿ ತುಂಬಿರುತ್ತವೆ. ಹಾಗಾಗಿ ಆ ಮೋಡಗಳು ಕಪ್ಪಾಗಿ ಕಾಣುತ್ತವೆ. ಸೂರ್ಯನ ಕಿರಣಗಳು ಈ ಮೋಡಗಳ ಮೂಲಕ ಹಾದುಹೋಗಲು ಸಾಧ್ಯವಿಲ್ಲ. ಹಾಗಾಗಿ ಇವು ನಮಗೆ ಕಪ್ಪಾಗಿ ಕಾಣುತ್ತವೆ. ವಾತಾವರಣದಲ್ಲಿ ಮಳೆಯಿಲ್ಲದಿದ್ದಾಗ, ಮೋಡಗಳಲ್ಲಿನ ನೀರಿನ ಹನಿಗಳು ಒಟ್ಟಿಗೆ ಇರುವುದಿಲ್ಲ. ಇದಲ್ಲದೆ, ಸೂರ್ಯನ ಕಿರಣಗಳು ಮೋಡಗಳಿಂದ ಹೊರಬರುತ್ತವೆ. ಹಾಗಾಗಿ ಮೋಡಗಳು ಬಿಳಿಯಾಗಿ ಹೊಳೆಯುತ್ತವೆ.
ನೀರಿನ ಹೊರತಾಗಿ, ಕಪ್ಪು ಮೋಡಗಳು ಧೂಳಿನ ಕಣಗಳು ಮತ್ತು ಮಾಲಿನ್ಯಕಾರಕಗಳನ್ನು ಒಳಗೊಂಡಿರುತ್ತವೆ. ಮೋಡವು ಗಾಢವಾದಷ್ಟೂ ಅದರಲ್ಲಿ ಹೆಚ್ಚು ನೀರು ಇರುತ್ತದೆ. ಅದಕ್ಕಾಗಿಯೇ ಕ್ಯುಮುಲೋನಿಂಬಸ್ ಮೋಡಗಳಿರುವಾಗ ಎಚ್ಚರಿಕೆ ವಹಿಸಬೇಕು. ಅವುಗಳಿಂದ ಗುಡುಗು, ಮಿಂಚು, ಸಿಡಿಲು ಸಹ ಉಂಟಾಗುವ ಅಪಾಯವಿದೆ.
ತಿರುಪತಿಯಲ್ಲಿ ಇಂದೂ ಭಾರೀ ಮಳೆ
ತಿರುಪತಿಯಲ್ಲಿ ಇಂದೂ ಭಾರೀ ಮಳೆಯಾಗುವ ಸೂಚನೆ ನೀಡಲಾಗಿದೆ. ಬೆಳಿಗ್ಗೆಯಿಂದಲೂ ಭಾರೀ ಬಿಸಿಲು ಇರಲಿದ್ದು ಮಧ್ಯಾಹ್ನದ ಬಳಿಕ ತಿರುಪತಿಯಲ್ಲಿ ಅಧಿಕ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಇದರಿಂದಾಗಿ ತಿರುಪತಿಗೆ ಆಗಮಿಸುವ ಭಕ್ತರು ಈ ಬಗ್ಗೆ ಗಮನ ಹರಿಸಬೇಕು ಎಂದು ಸೂಚಿಸಿದ್ದಾರೆ.












Click it and Unblock the Notifications