ಅಯೋಧ್ಯೆಗೂ ತಿರುಪತಿ ಲಾಡು ಪೂರೈಕೆ; ಪ್ರಧಾನಿ ಮೋದಿಗೂ ಹೋಗಿತ್ತು ಲಾಡು ಪ್ರಸಾದ
ತಿರುಪತಿ ಲಾಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು, ಮೀನಿನ ಎಣ್ಣೆ ಇರುವ ಆಘಾತಕಾರಿ ವಿಚಾರ ಬಹಿರಂಗವಾದ ಹಿನ್ನಲೆಯಲ್ಲಿ, ಭಕ್ತರಿಂದ ತೀವ್ರವಾದ ಆಕ್ರೋಶ ಎದುರಾಗಿದೆ. ಜಗನ್ ಮೋಹನ್ ರೆಡ್ಡಿ ಅವರ ಅಧಿಕಾರಾವಧಿಯಲ್ಲಿ ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬೆರೆಸಿದ ಗುಣಮಟ್ಟವಿಲ್ಲದ ತುಪ್ಪವನ್ನು ಬಳಸಲಾಗಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ಎನ್ ಚಂದ್ರಬಾಬು ನಾಯ್ಡು ಆರೋಪಿಸಿದ್ದರು.
ಲ್ಯಾಬ್ ವರದಿಯಲ್ಲಿ ಕೂಡ ಲಾಡು ಪ್ರಸಾದದಲ್ಲಿ ಕಲಬೆರಕೆ ಇರುವುದನ್ನು ದೃಢಪಡಿಸಿದೆ. ದೇವಾಲಯದ ಆಡಳಿತ ಮಂಡಳಿಯಾದ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಕೂಡ ತುಪ್ಪ ಪೂರೈಕೆದಾರರ ಮೇಲೆ ಆರೋಪ ಮಾಡಿತ್ತು. ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರು ಆಂಧ್ರ ಪ್ರದೇಶ ಸರ್ಕಾರದಿಂದ ವಿವರವಾದ ವರದಿ ಕೇಳಿದ್ದಾರೆ. ಫಲಿತಾಂಶಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನಡ್ಡಾ ಭರವಸೆ ನೀಡಿದ್ದಾರೆ.

ದೇವಾಲಯದ ಆಡಳಿತ ಮಂಡಳಿಯಾದ ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಲ್ಯಾಬ್ ವರದಿಗಳನ್ನು ಉಲ್ಲೇಖಿಸಿ ಕಲಬೆರಕೆಯನ್ನು ದೃಢಪಡಿಸಿದೆ. ಕಾರ್ಯನಿರ್ವಹಣಾಧಿಕಾರಿ ಜೆ.ಶ್ಯಾಮಲಾ ರಾವ್ ಮಾತನಾಡಿ, ತುಪ್ಪ ಪೂರೈಕೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದ್ದು, ಕಾನೂನು ಹೋರಾಟ ನಡೆಸಲಾಗುವುದು ಎಂದರು.
ಮೋದಿಗೂ ಉಡುಗೊರೆ, ಅಯೋಧ್ಯೆಗೂ ಪೂರೈಕೆ
ತಿರುಪತಿ ಲಡ್ಡು ಭೌಗೋಳಿಕ ಸೂಚಕ (ಜಿಐ) ಟ್ಯಾಗ್ ಅನ್ನು ಪಡೆದಿದೆ ಮತ್ತು ಅದರ ವಿಶಿಷ್ಟ ರುಚಿಗೆ ಹೆಸರಾಗಿದೆ. ಶತಮಾನಗಳಿಂದಲೂ ಕೂಡ ಪ್ರಸಾದ ತನ್ನದೇ ಆದ ರುಚಿಗೆ ಭಕ್ತರ ಮೆಚ್ಚುಗೆ ಪಡೆದುಕೊಂಡಿದೆ. ಕೋಟ್ಯಂತರ ಭಕ್ತರು ಭಕ್ತಿಯಿಂದ ಸ್ವೀಕರಿಸುವ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು, ಮೀನಿನ ಎಣ್ಣೆಯ ಅಂಶಗಳು ಪತ್ತೆಯಾಗಿರುವುದು ವಿವಾದಕ್ಕೆ ಕಾರಣವಾಗಿದೆ.
ಆಂಧ್ರಪ್ರದೇಶದ ಮುಖ್ಯಮಂತ್ರಿಗಳು, ಯಾವುದೇ ಪಕ್ಷ ಭೇದವಿಲ್ಲದೆ, ಸಭೆಗಳಲ್ಲಿ ಪ್ರಧಾನ ಮಂತ್ರಿ ಮತ್ತು ಇತರ ಗಣ್ಯರಿಗೆ ವಿಗ್ರಹಗಳು ಮತ್ತು ದೇವಾಲಯದ ಬ್ರಾಂಡ್ ಶಾಲುಗಳ ಜೊತೆಗೆ ಲಾಡು ಪ್ರಸಾದವನ್ನು ನೀಡುವ ಸಂಪ್ರದಾಯ ಪಾಲಿಸುತ್ತಿದ್ದಾರೆ. 2019 ಮತ್ತು 2024 ರ ನಡುವೆ ಆಂಧ್ರ ಪ್ರದೇಶ ಮುಖ್ಯಮಂತ್ರಿಯಾಗಿದ್ದ ವೈಎಸ್ ಜಗನ್ ಮೋಹನ್ ರೆಡ್ಡಿ ದೆಹಲಿಗೆ ಭೇಟಿ ನೀಡಿದ ಪ್ರತಿ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿರುಮಲ ದೇವಸ್ಥಾನದ ಲಾಡು ಪ್ರಸಾದವನ್ನು ಉಡುಗೊರೆಯಾಗಿ ನೀಡಿದ್ದರು ಎಂದು ಪಿಟಿಐ ವರದಿ ಮಾಡಿದೆ.
ಜನವರಿಯಲ್ಲಿ ನಡೆದ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕಾಗಿ ಒಂದು ಲಕ್ಷಕ್ಕೂ ಹೆಚ್ಚು ತಿರುಪತಿ ಲಡ್ಡುಗಳನ್ನು ಸರಕು ವಿಮಾನದಲ್ಲಿ ಅಯೋಧ್ಯೆಗೆ ಸಾಗಿಸಲಾಗಿತ್ತು. ರಾಮನ ಭಕ್ತರಿಗೂ ತಿರುಪತಿಯ ಪ್ರಸಾದವನ್ನು ಹಂಚಲಾಗಿತ್ತು.












Click it and Unblock the Notifications