Tirupati: ಸನಾತನ ಧರ್ಮ ರಕ್ಷಣಾ ಮಂಡಳಿಗೆ ಡಿಮ್ಯಾಂಡ್, ಏನಿದು ಬೋರ್ಡ್
ಮುಸ್ಲಿಂ ಸಮುದಾಯಕ್ಕೆ ವಕ್ಫ್ ಬೋರ್ಡ್ ಇರುವಂತೆಯೇ ಹಿಂದೂಗಳಿಗೂ ಒಂದು ಬೋರ್ಡ್ (ಸನಾತನ ಧರ್ಮ ರಕ್ಷಣಾ ಮಂಡಳಿ) ರಚನೆಯಾಗಬೇಕು ಎನ್ನುವ ಆಗ್ರಹ ಕೇಳಿ ಬರುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಇದಕ್ಕೆ ಆಂಧ್ರಪ್ರದೇಶದಲ್ಲಿ ಆಗಿರುವ ಬೆಳವಣಿಗೆಯೂ ಕಾರಣವಾಗಿದೆ. ಈ ರೀತಿಯ ಒಂದು ಚರ್ಚೆಯನ್ನು ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಪ್ರಾರಂಭಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರು ಸನಾತನ ಧರ್ಮದ ಬಗ್ಗೆ ಹಾಗೂ ಹಿಂದೂ ಧರ್ಮದ ರಕ್ಷಣೆಯ ಬಗ್ಗೆ ಮಾತನಾಡುತ್ತಿದ್ದಾರೆ. ದೇಶದಲ್ಲಿ ಹಿಂದೂಗಳಿಗೂ ಒಂದು ಬೋರ್ಡ್ ಬೇಕಿದೆ ಎನ್ನುವ ಆಗ್ರಹ..
ಸೋಷಿಯಲ್ ಮೀಡಿಯಾದಲ್ಲಿ ಈ ರೀತಿಯ ಒಂದು ಚರ್ಚೆ ಪ್ರಾರಂಭವಾಗಿದೆ. ಕೆಲವು ಮುಸ್ಲಿಂ ರಾಷ್ಟ್ರಗಳಲ್ಲೇ ಇಲ್ಲದ ವಕ್ಫ್ ಬೋರ್ಡ್ ನಮ್ಮ ಭಾರತದಲ್ಲಿದೆ. ಆದರೆ, ಹಿಂದೂಗಳಿಗೆ ಇರುವ ಏಕೈಕ ರಾಷ್ಟ್ರವೆಂದರೆ ಅದು ಭಾರತ. ನಮ್ಮ ಭಾರತದಲ್ಲಿ ಹಿಂದೂಗಳೆಲ್ಲ ಒಂದಾಗಬೇಕು ಎನ್ನುವ ಅಭಿಪ್ರಾಯ ಹೆಚ್ಚಾಗುತ್ತಿದೆ. ಈ ರೀತಿಯ ಹೊಸ ಚರ್ಚೆಗೆ ಕಾರಣವಾಗಿರುವುದು ಮತ್ತದೇ ತಿರುಪತಿ ಲಡ್ಡು ವಿವಾದ. ಹೌದು ದೇಶದಲ್ಲಿ ಹಿಂದೂ ಧರ್ಮದ ಮೇಲೆ ದಾಳಿ ನಡೆಯುತ್ತಿದೆ ಹಾಗೂ ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ತರಲಾಗುತ್ತಿದೆ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಕೆಲವರು ವಾದ ಮಾಡಿದ್ದಾರೆ. ತಿರುಪತಿ ತಿರುಮಲ ದೇವಸ್ಥಾನದ ಪಾವಿತ್ರ್ಯತೆಯನ್ನು ಹಾಳು ಮಾಡಲಾಗಿದೆ ಇದನ್ನು ಸಹಿಸುವುದಿಲ್ಲ ಎಂದು ಪವನ್ ಕಲ್ಯಾಣ್ ಹೇಳಿದ್ದರು. ಅಲ್ಲದೇ ದೇಶದಲ್ಲೇ ಈ ನಿಟ್ಟಿನಲ್ಲಿ ಚರ್ಚೆಯಾಗಬೇಕು ಎಂದಿದ್ದರು.

ಸನಾತನ ಧರ್ಮ ರಕ್ಷಣಾ ಮಂಡಳಿ ರಚನೆಗೆ ಆಗ್ರಹ
ಹಿಂದೂಗಳ ಹಾಗೂ ಹಿಂದೂ ದೇವಾಲಯಗಳ ರಕ್ಷಣೆಗಾಗಿ ಭಾರತದಲ್ಲಿ ಸನಾತನ ಧರ್ಮ ರಕ್ಷಣಾ ಮಂಡಳಿ ಸ್ಥಾಪನೆಯಾಗಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಈ ರೀತಿ ಒಂದು ಮಂಡಳಿಯನ್ನು ರಾಷ್ಟ್ರಮಟ್ಟದಲ್ಲಿ ರೂಪಿಸಬೇಕು. ಹಿಂದೂ ದೇವಾಲಯಗಳ ನಿರ್ವಹಣೆಯ ಅಧಿಕಾರವನ್ನು ಹಿಂದೂಗಳಿಗೆ ನೀಡಬೇಕು. ಹಿಂದೂ ದೇವಾಲಯ ಹಾಗೂ ಸಂಸ್ಕೃತಿಯನ್ನು ಕಾಪಾಡಬೇಕು ಎನ್ನುವ ಪೋಸ್ಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿವೆ. ಆದರೆ, ಇದಕ್ಕೆ ಅನ್ಯ ಧರ್ಮದ ಉದಾಹರಣೆಯನ್ನೂ ನೀಡಲಾಗುತ್ತಿದೆ.

ಪವನ್ ಕಲ್ಯಾಣ್ ಹೇಳಿದ್ದೇನು ?
ಈ ರೀತಿಯ ಒಂದು ಪ್ರಸ್ತಾವನೆಯನ್ನು ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರೇ ಜನರ ಮುಂದಿಟ್ಟಿದ್ದಾರೆ. ಸನಾತನ ಧರ್ಮ ರಕ್ಷಣಾ ಮಂಡಳಿ ಸ್ಥಾಪನೆಯಾಗಬೇಕು. ಈ ನಿಟ್ಟಿನಲ್ಲಿ ದೇಶದಾದ್ಯಂತ ಚರ್ಚೆಯಾಗಬೇಕು ಎಂದೂ ಅವರು ಒತ್ತಾಯಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಅವರು, ತಿರುಪತಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡುವ ಲಡ್ಡಿನಲ್ಲಿ ಕಲಬೆರಕೆ ತುಪ್ಪವನ್ನು ಬಳಸಲಾಗಿದೆ. ಈ ಬೆಳವಣೆಗೆಯು ಹಿಂದೂ ದೇವಾಲಯಗಳನ್ನು ಅಪವಿತ್ರಗೊಳಿಸುವುದು, ದೇವಸ್ಥಾನದ ಭೂಮಿ ಸಮಸ್ಯೆ ಸೃಷ್ಟಿ ಹಾಗೂ ಇತರ ಧಾರ್ವಿುಕ ಆಚರಣೆಗಳ ಬಗ್ಗೆ ಇರುವ ಕೆಲವು ನಿರ್ದಿಷ್ಟ ಸಮಸ್ಯೆಗಳ ಮೇಲೂ ಬೆಳಕು ಚೆಲ್ಲುತ್ತದೆ ಎಂದಿದ್ದಾರೆ. ಈಗ ನಮ್ಮ ದೇಶದಲ್ಲೇ ಹಿಂದೂ ದೇವಾಲಯಗಳಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಪರಿಶೀಲನೆ ಮಾಡುವ ನಿಟ್ಟಿನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ 'ಸನಾತನ ಧರ್ಮ ರಕ್ಷಣಾ ಮಂಡಳಿ'ಯನ್ನು ಸ್ಥಾಪಿಸುವ ಸಮಯ ಬಂದಾಗಿದೆ ಎಂದು ಅವರು ಹೇಳಿದ ಮೇಲೆ ಸನಾತನ ಧರ್ಮ ರಕ್ಷಣಾ ಮಂಡಳಿಯ ಚರ್ಚೆ ಹೆಚ್ಚಾಗಿದೆ.












Click it and Unblock the Notifications