Tirumala Tirupati: ಶೀಘ್ರ ದರ್ಶನದ ಟಿಕೆಟ್ ಸಂಖ್ಯೆ ಹೆಚ್ಚಿಸಿದ ಟಿಟಿಡಿ- ಯಾವಾಗಿಂದ, ಎಷ್ಟು ಹೆಚ್ಚಳ? ವಿವರ
ತಿರುಪತಿ, ಜುಲೈ 17: ತಿರುಪತಿ ದೇವಸ್ಥಾನಕ್ಕೆ ಪ್ರತಿ ದಿನ ಸಾವಿರಾರು ಭಕ್ತರ ಆಗಮಿಸುತ್ತಾರೆ. ವಿಶೇಷ ದಿನಗಳಲ್ಲಿ ಲಕ್ಷಾಂತರ ಭಕ್ತರು ಆಗಮಿಸುವುದರಿಂದ ದಿನಗಟ್ಟಲೇ ಕಾದು ನಿಲ್ಲಬೇಕಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶೀಘ್ರ ದರ್ಶನ ಪಡೆಯಲು ಬಯಸುವವರಿಗಾಗಿ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಹೊಸ ಪ್ಲ್ಯಾನ್ ಒಂದನ್ನು ರೂಪಿಸುತ್ತಿದೆ. ಆಗಷ್ಟ್‌ನಿಂದ ಶೀಘ್ರ ದರ್ಶನ ಟಿಕೆಟ್ ಸಂಖ್ಯೆಯನ್ನು ಹೆಚ್ಚಿಸಲು ಟಿಟಿಡಿ ನಿರ್ಧರಿಸಿದೆ.
ಶೀಘ್ರ ದರ್ಶನದ ಟಿಕೆಟ್‌ಗಳ ದರವು 300 ರೂಪಾಯಿ ಆಗಿದೆ. ಈ ಟಿಕೆಟ್‌ಗಳ ಸಂಖ್ಯೆ ಆಗಸ್ಟ್‌ನಿಂದ ಹೆಚ್ಚಾಗಲಿದೆ. ಈಗ ಶೀಗ್ರ ದರ್ಶನದ ಟಿಕೆಟ್‌ಗಳ ಸಂಖ್ಯೆ 11,000 ಆಗಿದೆ. ಇದನ್ನು 15,000 ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಟಿಟಿಡಿ ಅಧಿಕಾರಿ ಧರ್ಮ ರೆಡ್ಡಿ ತಿಳಿಸಿದ್ದಾರೆ.

ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೇಸಿಗೆಯಿಂದಾಗಿ ದರ್ಶನ ಟೋಕನ್‌ಗಳ ಸಂಖ್ಯೆ 20 ಸಾವಿರದಿಂದ 11 ಸಾವಿರಕ್ಕೆ ಇಳಿದಿದೆ. ಟೋಕನ್‌ಗಳ ಸಂಖ್ಯೆಯನ್ನು ಹಂತಹಂತವಾಗಿ ಹೆಚ್ಚಿಸಲಾಗುವುದು ಧರ್ಮ ರೆಡ್ಡಿ ಹೇಳಿದ್ದಾರೆ.
ಇದೇ ವೇಳೆ ಜೂನ್ ತಿಂಗಳಲ್ಲಿ ಶ್ರೀವಾರಿ ಹುಂಡಿಗೆ 116 ಕೋಟಿ ರೂಪಾಯಿ ಆದಾಯ ಬಂದಿದೆ. ಒಟ್ಟು 23 ಲಕ್ಷ ಭಕ್ತರು ತಿರುಮಲದ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಸುಮಾರು 1 ಕೋಟಿ ಲಡ್ಡೂಗಳನ್ನು ಮಾರಾಟ ಮಾಡಲಾಗಿದ್ದು, 24 ಲಕ್ಷ ಭಕ್ತರಿಗೆ ಅನ್ನ ಪ್ರಸಾದ ನೀಡಲಾಗಿದೆ. 10.80 ಲಕ್ಷ ಭಕ್ತರು ತಲೆ ಕೂದಲನ್ನು ಬೊಳಿಸಿಕೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಶ್ರೀವಾಣಿ ಟ್ರಸ್ಟ್ ಕುರಿತು ಮಾತನಾಡಿದ ಅವರು, ಟಿಟಿಡಿ ಮಾರ್ಗಸೂಚಿಯಂತೆ ಹಳೆಯ ದೇವಾಲಯಗಳ ಜೀರ್ಣೋದ್ಧಾರ ಮತ್ತು ಹೊಸ ದೇವಾಲಯಗಳ ನಿರ್ಮಾಣಕ್ಕೆ ಶ್ರೀವಾಣಿ ಟ್ರಸ್ಟ್‌ನಿಂದ ಆರ್ಥಿಕ ನೆರವು ನೀಡಲಾಗುವುದು ಎಂದು ಹೇಳಿದ್ದಾರೆ.

ತಿರುಚನೂರು ದೇವಸ್ಥಾನದಲ್ಲಿ ರಾತ್ರಿಯೂ ಭಕ್ತರಿಗೆ ಅನ್ನ ಪ್ರಸಾದ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಈ ವರ್ಷದ ಆರಂಭದಲ್ಲಿ ಅಲಿಪಿರಿ ಪಾದಚಾರಿ ಮಾರ್ಗದಲ್ಲಿ 3 ವರ್ಷದ ಮಗುವಿನ ಮೇಲೆ ಚಿರತೆ ದಾಳಿ ಮಾಡಿತು. ಆ ನಂತರ ಪಾದಚಾರಿ ಯಾತ್ರಾರ್ಥಿಗಳಿಗೆ ಗುಂಪುಗಳಲ್ಲಿ ನಡೆಯುವಂತೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಚಿನ್ನದ ಕಾಣಿಕೆ ನೀಡಿದ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ, ಪತ್ನಿ ಸುಧಾ ಮೂರ್ತಿ
ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಅವರ ಪತ್ನಿ ಸುಧಾ ಮೂರ್ತಿ ಭಾನುವಾರ ತಿರುಮಲ ತಿರುಪತಿ ದೇವಸ್ಥಾನಕ್ಕೆ ಚಿನ್ನದ ಶಂಖ ಮತ್ತು ಚಿನ್ನದ ಆಮೆ ವಿಗ್ರಹವನ್ನು ದಾನ ಮಾಡಿದರು.
ನಾರಾಯಣ ಮೂರ್ತಿ ದಂಪತಿಗಳು ವೆಂಕಟೇಶ್ವರನ ಭಕ್ತರು ಮತ್ತು ಆಗಾಗ್ಗೆ ದೇವಾಲಯಕ್ಕೆ ಭೇಟಿ ನೀಡುತ್ತಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರು ಚಿನ್ನದ ಶಂಖವನ್ನು ಮತ್ತು ಚಿನ್ನದ ಆಮೆಯ ವಿಗ್ರಹವನ್ನು ನೀಡಿದ್ದಾರೆ. ದೇಣಿಗೆಯನ್ನು ಭಾನುವಾರ ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಧರ್ಮ ರೆಡ್ಡಿ ಅವರಿಗೆ ಹಸ್ತಾಂತರಿಸಲಾಯಿತು. ಚಿನ್ನದ ದೇಣಿಗೆ ಸುಮಾರು ಎರಡು ಕೆಜಿಯಷ್ಟಿದೆ.
ಸುಧಾ ಮೂರ್ತಿ ಅವರು ಈ ಹಿಂದೆ ಟಿಟಿಡಿ ಟ್ರಸ್ಟ್‌ನ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಸುಧಾ ಮೂರ್ತಿ ಅವರು ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿರುವ ಸೋಮೇಶ್ವರ ದೇವಸ್ಥಾನ ಸೇರಿದಂತೆ ಕರ್ನಾಟಕದ ವಿವಿಧ ದೇವಾಲಯಗಳಿಗೆ ಕೋಟ್ಯಂತರ ರೂಪಾಯಿಗಳನ್ನು ದೇಣಿಗೆ ನೀಡಿದ್ದಾರೆ.












Click it and Unblock the Notifications