Nitish Kumar: 'ಟೈಗರ್ ಜಿಂದಾ ಹೈ': ಪಟ್ನಾದಲ್ಲಿ ರಾರಾಜಿಸುತ್ತಿವೆ ನಿತೀಶ್ ಕುಮಾರ್ ಪೋಸ್ಟರ್‌ಗಳು
Bihar Election Results 2025: ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶಗಳು ಹೊರಬರುತ್ತಿವೆ. ಇದೇ ವೇಳೆ, ಗೆಲುವಿನ ವಿಶ್ವಾಸದಲ್ಲಿ ನಿತೀಶ್ ಕುಮಾರ್ ಬೆಂಬಲಿಗರು ಇರುವುದು ಕಂಡುಬಂದಿದೆ. 'ಟೈಗರ್ ಜಿಂದಾ ಹೈ' ಎಂಬ ನಿತೀಶ್ ಕುಮಾರ್ ಅವರ ಚಿತ್ರವನ್ನು ಹೊಂದಿರುವ ಪೋಸ್ಟರ್‌ಗಳು ಬಿಹಾರ ರಾಜಧಾನಿ ಪಟ್ನಾದಲ್ಲಿ ಕಾಣಿಸಿಕೊಂಡಿವೆ. ಪಟ್ನಾದ ಬೀರ್ ಚಂದ್ ಪಟೇಲ್ ಮಾರ್ಗದಲ್ಲಿರುವ ಜನತಾದಳ ( ಯುನೈಟೆಡ್ ) ಕಚೇರಿಯ ಹೊರಗೆ ಈ ಪೋಸ್ಟರ್‌ಗಳನ್ನು ಹಾಕಲಾಗಿದೆ.
ಬಿಜೆಪಿ ನೇತೃತ್ವದ ಎನ್‌ಡಿಎ ಬಿಹಾರದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ. ನಿತೀಶ್ ನೇತೃತ್ವದ ಸರ್ಕಾರಕ್ಕೆ ಸತತ ಐದನೇ ಅವಧಿಗೆ ಭಾರಿ ಬಹುಮತ ದೊರೆಯಲಿದೆ ಎಂದು ಭವಿಷ್ಯ ನುಡಿದಿವೆ. ಒಂದು ವೇಳೆ, ಬಿಹಾರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದರೆ, ಮತ್ತೆ ನಿತೀಶ್ ಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೇರುವುದು ನಿಚ್ಚಳವಾಗಿದೆ.

ಇದೇ ವೇಳೆ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಮಹಾಘಟಬಂಧನವು ಬಹುಮತ ಪಡೆಯಲಿದೆ ಎಂಬ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ತೇಜಸ್ವಿ ಯಾದವ್ ಅವರ ಬೆಂಬಲಿಗರು ಸಹ ಗೆಲುವಿನ ಭರವಸೆಯಲ್ಲಿದ್ದಾರೆ.
'ನಾವು ಚುನಾವಣೋತ್ತರ ಸಮೀಕ್ಷೆಗಳಲ್ಲಿ ನಂಬಿಕೆ ಹೊಂದಿಲ್ಲ. ಚುನಾವಣೋತ್ತರ ಫಲಿತಾಂಶಗಳಲ್ಲಿ ನಂಬಿಕೆ ಹೊಂದಿದ್ದೇವೆ' ಎಂದು ಆರ್‌ಜೆಡಿ ವಕ್ತಾರೆ ಪ್ರಿಯಾಂಕಾ ಭಾರ್ತಿ ಹೇಳಿದ್ದಾರೆ. ಮುಂದುವರಿದ ಅವರು, ಕೊನೆಯ ಮತ ಎಣಿಕೆಯಾಗುವವರೆಗೆ ತಮ್ಮ ಪಕ್ಷದ ಪ್ರತಿಯೊಬ್ಬ ಸದಸ್ಯರು ಎಣಿಕೆ ಕೇಂದ್ರಗಳಲ್ಲಿ ಕಾವಲು ಕಾಯುವಂತೆ ಕೇಳಿಕೊಂಡಿದ್ದಾರೆ. ಈ ಬಾರಿ, ಯಾವುದೇ ಮತ ಕಳ್ಳತನಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಬಿಹಾರ್ ಕಿಂಗ್ ನಿತೀಶ್ ಕುಮಾರ್
ಸತತ 9 ಬಾರಿ ಮುಖ್ಯಮಂತ್ರಿಯಾಗಿ ಜೆಡಿಯುನ ನಿತೀಶ್ ಕುಮಾರ್ ಅಧಿಕಾರವನ್ನು ಅನುಭವಿಸಿದ್ದಾರೆ. ಒಂದು ವೇಳೆ, ಈ ಬಾರಿ ಎನ್‌ಡಿಎ ಬಹುಮತ ಪಡೆದರೆ 10 ಬಾರಿ ಮುಖ್ಯಮಂತ್ರಿಯಾಗಿ ನಿತೀಶ್ ಅವರು ಅಧಿಕಾರದ ಗದ್ದುಗೆ ಏರಲಿದ್ದಾರೆ. ಇದು ಭಾರತದ ಇತಿಹಾಸದಲ್ಲೇ ದೀರ್ಘಾವದಿ ಮುಖ್ಯಮಂತ್ರಿಯಾಗಿ ನಿತೀಶ್ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಹೊರಹೊಮ್ಮಲಿದ್ದಾರೆ.
ಎಣಿಕೆ ಸಮಯ
ನವೆಂಬರ್ 14 ರಂದು, 243 ವಿಧಾನಸಭಾ ಕ್ಷೇತ್ರಗಳ ಮತಗಳ ಎಣಿಕೆಯು ರಾಜ್ಯದ ಎಲ್ಲಾ 46 ಎಣಿಕೆ ಕೇಂದ್ರಗಳಲ್ಲಿ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಿದೆ. ಅಂಚೆ ಮತಪತ್ರಗಳನ್ನು ಮೊದಲು ಎಣಿಸಲಾಗುತ್ತದೆ. ನಂತರ ಬೆಳಿಗ್ಗೆ 8.30 ರಿಂದ ಇವಿಎಂಗಳ ಮೂಲಕ ಚಲಾಯಿಸಲಾದ ಮತಗಳನ್ನು ಎಣಿಸಲಾಗುತ್ತದೆ.












Click it and Unblock the Notifications