ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷನ ಮಗನಿಗೆ ಬಿಜೆಪಿ ಟಿಕೆಟ್- ವ್ಯಾಪಕ ಆಕ್ರೋಶ
ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಕೈಬಿಟ್ಟು ಅವರ ಪುತ್ರ ಕರಣ್ ಭೂಷಣ್ ಸಿಂಗ್ ಅವರನ್ನು ಉತ್ತರ ಪ್ರದೇಶದ ಕೈಸರ್‌ಗಂಜ್ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ಬಿಜೆಪಿ ನಿರ್ಧಾರದ ಬಗ್ಗೆ ಭಾರತದ ಮಾಜಿ ಕುಸ್ತಿಪಟು ಮತ್ತು ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್ ಅವರು ಕಿಡಿ ಕಾರಿದ್ದಾರೆ.
ಸಾಕ್ಷಿ ಮಲಿಕ್ ಎಕ್ಸ್ ನಲ್ಲಿ ಹೀಗೆ ಬರೆದಿದ್ದಾರೆ- "ದೇಶದ ಹೆಣ್ಣುಮಕ್ಕಳು ಸೋತರು, ಬ್ರಿಜ್ ಭೂಷಣ್ ಗೆದ್ದರು, ನಾವೆಲ್ಲರೂ ನಮ್ಮ ವೃತ್ತಿಜೀವನವನ್ನು ಪಣಕ್ಕಿಟ್ಟು ಅನೇಕ ದಿನಗಳ ಕಾಲ ಬಿಸಿಲು-ಮಳೆಯಲ್ಲಿ ಬೀದಿಯಲ್ಲಿ ಮಲಗಿದ್ದೇವು. ಇಲ್ಲಿಯವರೆಗೆ ಬ್ರಿಜ್ ಭೂಷಣ್ ಅವರನ್ನು ಬಂಧಿಸಲಾಗಿಲ್ಲ. ನಾವು ಏನನ್ನೂ ಕೇಳಲಿಲ್ಲ, ನಾವು ಕೇವಲ ನ್ಯಾಯವನ್ನು ಕೇಳಿದೆವು. ಆದರೆ ಅದು ನಮಗೆ ಸಿಗಲಿಲ್ಲ" ಎಂದು ಸಾಕ್ಷಿ ಮಲಿಕ್ ಎಕ್ಸ್ ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಬ್ರಿಜ್ ಭೂಷಣ್ ಮೇಲೆ ಲೈಂಗಿಕ ಕಿರುಕುಳ ಆರೋಪ
ಆರು ಬಾರಿ ಸಂಸದರಾಗಿದ್ದ ಬ್ರಿಜ್ ಭೂಷಣ್ ಅವರು ಕಳೆದ ವರ್ಷ ಭಾರೀ ರಾಜಕೀಯ ಸಮಸ್ಯೆಯ ಬಿರುಗಾಳಿಯನ್ನು ಎದುರಿಸಿದರು. ಒಲಿಂಪಿಕ್ ಪದಕ ವಿಜೇತರಾದ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪೂನಿಯಾ, ವಿನೇಶ್ ಫೋಗಟ್ ಸೇರಿದಂತೆ ಹಲವಾರು ಕ್ರೀಟಾಪಟುಗಳು ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪದ ಮೇಲೆ ಪ್ರತಿಭಟಿಸಿದರು.
ಭಾರತದ ಕುಸ್ತಿ ಒಕ್ಕೂಟದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅನುಚಿತ ವರ್ತನೆಯ ಆರೋಪದ ಮೇಲೆ ಬ್ರಿಜ್ ಭೂಷಣ್ ಅನ್ನು ಬಂಧಿಸುವಂತೆ ಒತ್ತಾಯಿಸಿ ದೆಹಲಿ ಬೀದಿಗಳಲ್ಲಿ ಪ್ರತಿಭಟನೆ ಮಾಡಿದರು. ಆದರೆ ಬ್ರಿಜ್ ಭೂಷಣ್ ನ್ಯಾಯಾಲಯದಲ್ಲಿರುವ ಪ್ರಕರಣದಲ್ಲಿ ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ.
ಲೈಂಗಿಕ ಕಿರುಕುಳ ಆರೋಪ ತಳ್ಳಿ ಹಾಕಿದ ಬ್ರಿಜ್ ಭೂಷಣ್
ಸೆಪ್ಟೆಂಬರ್ 7, 2022 ರಂದು ಆಪಾದಿತ ಲೈಂಗಿಕ ಕಿರುಕುಳ ಘಟನೆಯ ದಿನಾಂಕದಂದು ಅವರು ಎಲ್ಲಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ಸಾಕ್ಷ್ಯವನ್ನು ಹೆಚ್ಚಿನ ಪರೀಕ್ಷೆಗೆ ಒಳಪಡಿಸುವಂತೆ ಕೋರಿ ಸಿಂಗ್ ಸಲ್ಲಿಸಿದ ಅರ್ಜಿಯನ್ನು ದೆಹಲಿ ನ್ಯಾಯಾಲಯವು ಕಳೆದ ವಾರ ವಜಾಗೊಳಿಸಿದೆ. ದೂರುದಾರ ಕುಸ್ತಿಪಟುಗಳೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದಾಗ ತಾನು ದೆಹಲಿಯಲ್ಲಿ ಇರಲಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.

ಸಿಂಗ್ ಅವರು ಕೈಸರ್‌ಗಂಜ್ ಕ್ಷೇತ್ರದಲ್ಲಿ ಪ್ರಬಲ ಪ್ರಭಾವವನ್ನು ಹೊಂದಿದ್ದಾರೆ. ಅವರು ಉತ್ತರ ಪ್ರದೇಶದ ಗೊಂಡಾ ಮತ್ತು ಬಲರಾಮ್‌ಪುರ ಕ್ಷೇತ್ರಗಳನ್ನು ಪ್ರತಿನಿಧಿಸಿದ್ದಾರೆ. ಆರು ಬಾರಿ ಸಂಸದರಾಗಿರುವ ಅವರು ಕ್ಷೇತ್ರದಲ್ಲಿ ಹೊಂದಿರುವ ರಾಜಕೀಯ ಪ್ರಭಾವ ಬಿಜೆಪಿಗೆ ತಿಳಿದಿದೆ. ಆದ್ದರಿಂದ ಬಿಜೆಪಿ ಅವರ ಬದಲಿಯಾಗಿ ಅವರ ಮಗನನ್ನು ಆಯ್ಕೆ ಮಾಡಿದೆ. ಬ್ರಿಜ್ ಭೂಷಣ್ ಸಿಂಗ್ ಅವರ ಹಿರಿಯ ಪುತ್ರ ಪ್ರತೀಕ್ ಭೂಷಣ್ ಸಿಂಗ್ ಶಾಸಕರಾಗಿದ್ದಾರೆ. ಕರಣ್ ಪ್ರಸ್ತುತ ಉತ್ತರ ಪ್ರದೇಶದ ಕುಸ್ತಿ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ.
ಬ್ರಿಜ್ ಭೂಷಣ್ ಮನೆಯಲ್ಲಿ ಸಂಭ್ರಮ
ಇದೇ ವೇಳೆ ಬಿಜೆಪಿ ತನ್ನ ಪುತ್ರನನ್ನು ಕ್ಷೇತ್ರದ ಅಭ್ಯರ್ಥಿ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಸಂಸದರ ಮನೆಯಲ್ಲಿ ಸಂಭ್ರಮಾಚರಣೆ ನಡೆಯಿತು. ಇಲ್ಲಿನ ಜನರ ಸೇವೆ ಮಾಡಲು ನನಗೆ ಅವಕಾಶ ಮಾಡಿಕೊಟ್ಟ ಪಕ್ಷದ ನಾಯಕತ್ವ ಮತ್ತು ಸಾರ್ವಜನಿಕರಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ಕರಣ್ ಭೂಷಣ್ ಸಿಂಗ್ ಹೇಳಿದ್ದಾರೆ. ನಾನು ಪಕ್ಷಕ್ಕಿಂತ ದೊಡ್ಡವನಲ್ಲ... ಪಕ್ಷದ ನಿರ್ಧಾರವನ್ನು ಸ್ವಾಗತಿಸುತ್ತೇನೆ ಎಂದು ಬ್ರಿಜ್ ಭೂಷಣ್ ಸಿಂಗ್ ಹೇಳಿದ್ದಾರೆ. ಕರಣ್ ಭೂಷಣ್ ಸಿಂಗ್ ಚುನಾವಣೆಗೆ ಸ್ಪರ್ಧಿಸುತ್ತಿರುವುದು ಇದೇ ಮೊದಲು. ಹೀಗಾಗಿ ಚುನಾವಣೆಯಲ್ಲಿ ಅವರು ಗೆಲ್ಲುತ್ತಾರಾ ಕಾದು ನೋಡಬೇಕಿದೆ.












Click it and Unblock the Notifications