ಜಮ್ಮು-ಕಾಶ್ಮೀರದಲ್ಲಿ ಮೂವರು ಭಯೋತ್ಪಾದಕರ ಹತ್ಯೆ: ಅಧಿಕಾರಿಗಳ ಸಾವಿಗೆ ಭಾರತ ಸೇನೆಯಿಂದ ಸೇಡಿನ ಶಪಥ
ಶ್ರೀನಗರ, ಸೆಪ್ಟೆಂಬರ್ 16: ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ಮೂವರು ಭಯೋತ್ಪಾದಕರನ್ನು ಭಾರತದ ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಈ ಮೂಲಕ ಭದ್ರತಾ ಪಡೆಗಳು ಗಡಿ ನಿಯಂತ್ರಣ ರೇಖೆಯಲ್ಲಿ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿವೆ ಎಂದು ಭಾರತೀಯ ಸೇನೆ ಶನಿವಾರ ತಿಳಿಸಿದೆ.
ಹತ್ಯೆಗೀಡಾದ ಇಬ್ಬರು ಭಯೋತ್ಪಾದಕರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ ಮೂರನೇ ದೇಹವನ್ನು ಹಿಂಪಡೆಯಲು ಸಾಧ್ಯವಾಗಿಲ್ಲ. ಕಾರ್ಯಾಚರಣೆ ಪ್ರಕ್ರಿಯೆಯಲ್ಲಿ ಪಾಕಿಸ್ತಾನಿ ಪಡೆಗಳು ಗುಂಡು ಹಾರಿಸುವ ಮೂಲಕ ಹಸ್ತಕ್ಷೇಪ ಮಾಡುತ್ತಿವೆ ಎಂದು ಪೊಲೀಸರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

'ಭಾರತೀಯ ಸೇನೆ, ಜಮ್ಮು-ಕಾಶ್ಮೀರ ಪೊಲೀಸರು ಮತ್ತು ಗುಪ್ತಚರ ಏಜೆನ್ಸಿಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಭಯೋತ್ಪಾಕರು ಹತ್ಯೆಯಾಗಿದ್ದಾರೆ. ಬಾರಾಮುಲ್ಲಾದ ಉರಿ ಸೆಕ್ಟರ್‌ನಲ್ಲಿರುವ ಎಲ್‌ಒಸಿ ಉದ್ದಕ್ಕೂ ಇಂದು ಬೆಳಿಗ್ಗೆ ಒಳನುಸುಳುವಿಕೆಯ ಪ್ರಯತ್ನವನ್ನು ವಿಫಲಗೊಳಿಸಲಾಯಿತು. ಭಯೋತ್ಪಾದಕರು ಒಳನುಸುಳಲು ಪ್ರಯತ್ನಿಸಿದರು. ಆ ವೇಳೆ ಗುಂಡಿನ ದಾಳಿ ನಡೆಸಲಾಗಿದೆ' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
'ಗುಂಡು ಹೊಡೆಯುವ ಮೂಲಕ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲಾಗಿದೆ. ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೂರನೇ ಭಯೋತ್ಪಾದಕನನ್ನು ಕೊಲ್ಲಲಾಗಿದೆ ಆದರೆ ದೇಹವನ್ನು ಹಿಂಪಡೆಯಲು ಸಾಧ್ಯವಾಗಿಲ್ಲ. ಈ ದೇಹವು ಪಾಕ್ ಪೋಸ್ಟ್‌ಗೆ ಸಮೀಪದಲ್ಲಿದೆ. ಎಲ್ಒಸಿಯಲ್ಲಿ ಗುಂಡು ಹಾರಿಸುವ ಮೂಲಕ ಪಾಕಿಸ್ತಾನ ಮಧ್ಯಪ್ರವೇಶಿಸುತ್ತಿದೆ' ಎಂದು ಪೊಲೀಸರು ಹೇಳಿದ್ದಾರೆ.
ಇದೇ ವೇಳೆ, ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಸೇನೆ ತಿಳಿಸಿದೆ.
ಹತ್ಯೆಗೀಡಾದ ಭಯೋತ್ಪಾದಕರ ಗುರುತುಗಳು. ಅವರು ಪ್ರತಿನಿಧಿಸುತ್ತಿರುವ ಸಂಘಟನೆ ಬಗ್ಗೆ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರು ಉಗ್ರಗಾಮಿ ಸಹಚರರನ್ನು ಬಂಧಿಸಿ ಅವರಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಾರಾಮುಲ್ಲಾ ಜಿಲ್ಲೆಯಲ್ಲಿ ಲಷ್ಕರ್-ಎ-ತೈಬಾ (ಎಲ್‌ಇಟಿ) ಭಯೋತ್ಪಾದಕ ಘಟಕವನ್ನು ಪತ್ತೆಹಚ್ಚಲಾಗಿದೆ. ಇದಾದ ಒಂದು ದಿನದ ಬಳಿಕ ಒಳನುಸುಳುವಿಕೆ ಪ್ರಯತ್ನ ಮಾಡಲಾಗಿದೆ.
ಬಂಧಿಸಲಾದ ಇಬ್ಬರನ್ನು ಮೀರ್ ಸಾಹಿಬ್ ಬಾರಾಮುಲ್ಲಾ ನಿವಾಸಿ ಜೈದ್ ಹಸನ್ ಮಲ್ಲಾ ಮತ್ತು ಸ್ಟೇಡಿಯಂ ಕಾಲೋನಿ ಬಾರಾಮುಲ್ಲಾದ ಮೊಹಮ್ಮದ್ ಆರಿಫ್ ಚನ್ನಾ ಎಂದು ಪೊಲೀಸರು ಗುರುತಿಸಿದ್ದಾರೆ.
'ಪಾಕಿಸ್ತಾನ ಮೂಲದ ಭಯೋತ್ಪಾದಕರ ಆಜ್ಞೆಯ ಮೇರೆಗೆ ಅವರು ಗಡಿಯಾಚೆಗಿನ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಕಳ್ಳಸಾಗಣೆಯಲ್ಲಿ ತೊಡಗಿದ್ದರು. ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಎಲ್ಇಟಿ ಭಯೋತ್ಪಾದಕರೊಂದಿಗೆ ಶಾಮೀಲಾಗಿದ್ದರು' ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಏತನ್ಮಧ್ಯೆ, ಅನಂತನಾಗ್ ಜಿಲ್ಲೆಯ ಗುಡ್ಡಗಾಡು ಪ್ರದೇಶದ ಅರಣ್ಯ ಪ್ರದೇಶದಲ್ಲಿ ನೆಲೆ ಕಂಡುಕೊಂಡಿರುವ ಭಯೋತ್ಪಾದಕರನ್ನು ಹತ್ಯೆಗೈಯ್ಯಲು ಕಾರ್ಯಾಚರಣೆ ನಡೆಯುತ್ತಿದೆ. ಉಗ್ರರನ್ನು ಹೊಡೆದುರುಳಿಸುವ ಕಾರ್ಯಾಚರಣೆ ಶನಿವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಭಯೋತ್ಪಾದಕರ ಸ್ಥಳವನ್ನು ಗುರುತಿಸಲು ಭದ್ರತಾ ಪಡೆಗಳು ಡ್ರೋನ್‌ಗಳನ್ನು ನಿಯೋಜಿಸಿವೆ.












Click it and Unblock the Notifications