ಕರೆಂಟ್ ಬೇಡ, ಬ್ಯಾಟರಿಯೂ ಬೇಡ: ಕೇವಲ ಉಪ್ಪು ನೀರಿನಿಂದ ಕೆಲಸ ಮಾಡುವ ಫ್ರಿಡ್ಜ್ ಕಂಡುಹಿಡಿದ 3 ವಿದ್ಯಾರ್ಥಿಗಳು
ವಿಜ್ಞಾನದ ಅನ್ವೇಷಣೆಗಳು ಕೇವಲ ದೊಡ್ಡ ದೊಡ್ಡ ಪ್ರಯೋಗಾಲಯಗಳಿಗೆ ಮಾತ್ರ ಸೀಮಿತವಲ್ಲ, ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ಮನಸ್ಸಿದ್ದರೆ ಅದ್ಭುತ ಆವಿಷ್ಕಾರಗಳನ್ನ ಮಾಡಬಹುದು ಎಂಬುದನ್ನ ಭಾರತದ ಮೂವರು ಹದಿಹರೆಯದ ವಿದ್ಯಾರ್ಥಿಗಳು ಸಾಬೀತುಪಡಿಸಿದ್ದಾರೆ.
ವಿದ್ಯುತ್ ಸಂಪರ್ಕವೇ ಇಲ್ಲದ ದೂರದ ಹಳ್ಳಿಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜೀವ ರಕ್ಷಕ ಲಸಿಕೆಗಳನ್ನ ಹಾಳಾಗದಂತೆ ಕಾಪಾಡಲು ಇವರು ಕೇವಲ ಉಪ್ಪು ಮತ್ತು ನೀರನ್ನ ಬಳಸಿಕೊಂಡು ತಂಪಾಗಿಸುವ ವಿನೂತನ ವಿದ್ಯುತ್ ರಹಿತ ರೆಫ್ರಿಜರೇಟರ್ ಸಿದ್ಧಪಡಿಸಿದ್ದಾರೆ. ಈ ನವೀನ ಉಪಕರಣಕ್ಕೆ 'ಥರ್ಮಾವಾಲ್ಟ್' ಎಂದು ಹೆಸರಿಡಲಾಗಿದ್ದು, ಜಾಗತಿಕ ಮಟ್ಟದಲ್ಲಿ ಭಾರಿ ಪ್ರಶಂಸೆಗೆ ಕಾರಣವಾಗಿದೆ.

ಸಾಮಾನ್ಯವಾಗಿ ಆಸ್ಪತ್ರೆಗಳಲ್ಲಿ ಬಳಸುವ ಲಸಿಕೆಗಳು ಹಾಗೂ ಔಷಧಗಳು ನಿರ್ದಿಷ್ಟ ತಂಪಾದ ತಾಪಮಾನದಲ್ಲಿರಬೇಕು. ಇದನ್ನ ವೈದ್ಯಕೀಯ ಭಾಷೆಯಲ್ಲಿ 'ಕೋಲ್ಡ್ ಚೈನ್' ಎನ್ನಲಾಗುತ್ತದೆ. ಈ ತಾಪಮಾನ ನಿಯಂತ್ರಣ ತಪ್ಪಿದರೆ ಲಸಿಕೆಗಳು ತಮ್ಮ ಪವರ್ ಕಳೆದುಕೊಂಡು ನಿರುಪಯುಕ್ತವಾಗುತ್ತವೆ. ನಗರಗಳಲ್ಲಿ ಫ್ರಿಡ್ಜ್‌ಗಳ ಮೂಲಕ ಇದನ್ನು ಸುಲಭವಾಗಿ ನಿರ್ವಹಿಸಬಹುದು.
ಆದರೆ ಮೂಲಸೌಕರ್ಯವಿಲ್ಲದ ಸಣ್ಣ ಹಳ್ಳಿಗಳಲ್ಲಿ ಹಾಗೂ ವಿದ್ಯುತ್ ಸಂಪರ್ಕವಿಲ್ಲದ ಆಸ್ಪತ್ರೆಗಳಲ್ಲಿ ಫ್ರಿಡ್ಜ್ ನಡೆಸುವುದು ದೊಡ್ಡ ಸವಾಲು. ಜನರೇಟರ್ ಬಳಸಲು ಇಂಧನ ಬೇಕು, ಬ್ಯಾಟರಿಗಳೂ ಸಹ ಕೆಲವೇ ಗಂಟೆಗಳಲ್ಲಿ ಖಾಲಿಯಾಗುತ್ತವೆ. ಈ ಗಂಭೀರ ಸಮಸ್ಯೆಯನ್ನ ಸೂಕ್ಷ್ಮವಾಗಿ ಗಮನಿಸಿದ ಈ ಮೂವರು ವಿದ್ಯಾರ್ಥಿಗಳು, "ವಿದ್ಯುತ್ ಇಲ್ಲದೆಯೇ ಲಸಿಕೆಗಳನ್ನ ತಂಪಾಗಿಡುವುದು ಹೇಗೆ?" ಎಂಬ ಪ್ರಶ್ನೆಯನ್ನು ತಮಗೆ ತಾವೇ ಹಾಕಿಕೊಂಡು ಪರಿಹಾರ ಕಂಡುಕೊಳ್ಳಲು ಮುಂದಾದರು.
ಉಪ್ಪು ಮತ್ತು ನೀರಿನ ವಿಜ್ಞಾನ: ಥರ್ಮಾವಾಲ್ಟ್ ಕಾರ್ಯವೈಖರಿ
ಈ ವಿದ್ಯಾರ್ಥಿಗಳು ಬಳಸಿದ ತಂತ್ರಜ್ಞಾನ ಅತ್ಯಂತ ಸರಳ ಹಾಗೂ ನೈಸರ್ಗಿಕ ವಿಜ್ಞಾನದ ತತ್ವವನ್ನ ಒಳಗೊಂಡಿದೆ. ನಿರ್ದಿಷ್ಟ ಗುಣಲಕ್ಷಣಗಳನ್ನ ಹೊಂದಿರುವ ಕೆಲವು ಲವಣಗಳು (ಉಪ್ಪು) ನೀರಿನಲ್ಲಿ ಕರಗುವಾಗ ಸುತ್ತಲಿನ ಶಾಖವನ್ನು ಹೀರಿಕೊಳ್ಳುತ್ತವೆ. ಈ ನೈಸರ್ಗಿಕ ತಂಪಾಗಿಸುವ ಪರಿಣಾಮವನ್ನು ಬಳಸಿಕೊಂಡ ವಿದ್ಯಾರ್ಥಿಗಳು, ಯಾವುದೇ ಕಂಪ್ರೆಸರ್ ಅಥವಾ ಪ್ಲಗ್ ಪಾಯಿಂಟ್ ಇಲ್ಲದ ಇನ್ಸುಲೇಟೆಡ್ ಕಂಟೈನರ್ ಸಿದ್ಧಪಡಿಸಿದ್ದಾರೆ.
ಈ ಬಾಕ್ಸ್ ಲಸಿಕೆಗಳನ್ನ ಸುರಕ್ಷಿತ ತಾಪಮಾನದಲ್ಲಿ ಇರಿಸುವ ಸಾಮರ್ಥ್ಯ ಹೊಂದಿದೆ. ಇದು ಸುಲಭವಾಗಿ ಸಾಗಿಸಬಹುದಾದ, ಮರುಬಳಕೆ ಮಾಡಬಹುದಾದ ಮತ್ತು ಅತ್ಯಂತ ಕಡಿಮೆ ವೆಚ್ಚದಲ್ಲಿ ದೊರೆಯುವ ಸಾಧನವಾಗಿದ್ದು, ಗ್ರಾಮೀಣ ಆಸ್ಪತ್ರೆಗಳಿಗೆ ಅತ್ಯಂತ ಸೂಕ್ತವಾಗಿದೆ.
ದಿ ಅರ್ಥ್ ಪ್ರೈಜ್ ಮನ್ನಣೆ
ವಿದ್ಯಾರ್ಥಿಗಳ ಈ ಮಹತ್ವದ ಸಂಶೋಧನೆಯನ್ನ ಜಾಗತಿಕ ಮಟ್ಟದ ಪರಿಸರ ವೇದಿಕೆಯಾದ ದಿ ಅರ್ಥ್ ಪ್ರೈಜ್' ಗುರುತಿಸಿ ಬೆಂಬಲ ನೀಡಿದೆ. ಈ ಬೆಂಬಲದ ಮೂಲಕ ತಮ್ಮ ವಿನ್ಯಾಸವನ್ನ ಮತ್ತಷ್ಟು ಸುಧಾರಿಸಿರುವ ವಿದ್ಯಾರ್ಥಿ ತಂಡ, ಸದ್ಯ 200 ಯೂನಿಟ್‌ಗಳನ್ನ ತಯಾರಿಸುತ್ತಿದೆ.
ಒಂದು ಸಣ್ಣ ಲಸಿಕೆಯ ಹಿಂದೆ ಅಮೂಲ್ಯ ಜೀವಗಳ ಪ್ರಾಣ ಇರುತ್ತದೆ. ಅಂತಹ ಜೀವನ್ಮರಣದ ಸಮಸ್ಯೆಗೆ ಸಣ್ಣ ವಯಸ್ಸಿನಲ್ಲಿಯೇ ವಿಜ್ಞಾನದ ಮೂಲಕ ಅತ್ಯಂತ ಪ್ರಾಯೋಗಿಕ ಪರಿಹಾರ ಒದಗಿಸಿದ ಈ ಭಾರತೀಯ ಯುವಕರ ಸಾಧನೆ ಇಡೀ ದೇಶವೇ ಹೆಮ್ಮೆಪಡುವಂತದ್ದಾಗಿದೆ.


Click it and Unblock the Notifications
