ತಮಿಳುನಾಡಿನಲ್ಲಿ ರೈಲಿಗೆ ಸಿಲುಕಿ ಕರ್ನಾಟಕದ ಮೂವರು ವಿಕಲಚೇತನ ಮಕ್ಕಳು ಸಾವು!
ಚೆನ್ನೈ ಅಕ್ಟೋಬರ್ 25: ರೈಲು ಹಳಿ ಮೇಲೆ ಆಟವಾಡುತ್ತಿದ್ದ ಕರ್ನಾಟಕದ ಮೂವರು ವಿಕಲಚೇತನ ಮಕ್ಕಳ ಮೇಲೆ ರೈಲು ಹರಿದು ಸಾವನ್ನಪ್ಪಿದ ದಾರುಣ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ವಿಕಲಚೇತನರು ಎನ್ನಲಾದ ಇಬ್ಬರು ಸಹೋದರರು ಸೇರಿದಂತೆ ಮೂವರು ಮಕ್ಕಳು ಮಂಗಳವಾರ ನಗರದ ಹೊರವಲಯದ ಉರಪಕ್ಕಂ ಬಳಿ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.
ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯಲ್ಲಿ ರೈಲ್ವೇ ಹಳಿಯಲ್ಲಿ ಆಟವಾಡುತ್ತಿದ್ದ ಶ್ರವಣ ಮತ್ತು ವಾಕ್ ನ್ಯೂನತೆ ಹೊಂದಿರುವ ಮೂವರು ಬಾಲಕರು ಕಳೆದ ದಿನ ಬೆಳಿಗ್ಗೆ ದುರಂತ ಅಂತ್ಯ ಕಂಡಿದ್ದಾರೆ. ಮೃತರನ್ನು ಸುರೇಶ್ (15), ಮತ್ತು ಅವರ ಸಹೋದರ ರವಿ (12) ಮತ್ತು ಮಂಜುನಾಥ್ (11) ಎಂದು ಗುರುತಿಸಲಾಗಿದೆ. ಕರ್ನಾಟಕದ ನಿವಾಸಿಗಳಾದ ಇವರು ದಸರಾ ರಜಾದಿನ ಇರುವುದರಿಂದ ಚೆನ್ನೈ ಸಮೀಪದ ಉರಪಕ್ಕಂನಲ್ಲಿ ಕೆಲಸ ಮಾಡುತ್ತಿದ್ದ ತಮ್ಮ ಪೋಷಕರನ್ನು ಭೇಟಿ ಮಾಡಲು ಬಂದಿದ್ದರು. ಈ ವೇಳೆ ಘಟನೆ ನಡೆದಿದೆ.

ಸುರೇಶ್ ಮತ್ತು ರವಿಗೆ ಶ್ರವಣ ದೋಷವಿತ್ತು. ಅವರ ಸ್ನೇಹಿತ ಮಂಜುನಾಥ್ ಮಾತನಾಡುವ ದೋಷ ಹೊಂದಿದ್ದನು. ತಂದೆ-ತಾಯಿ ಕೆಲಸಕ್ಕೆ ಹೋದ ತಕ್ಷಣ ಮಕ್ಕಳು ಬೆಳಗಿನ ಉಪಾಹಾರ ಸೇವಿಸಿ ಆಟವಾಡಲು ಸಮೀಪದ ರೈಲ್ವೇ ಟ್ರ್ಯಾಕ್‌ಗೆ ತೆರಳಿದ್ದರು. ಪೋಷಕರು ಮಂಗಳವಾರ ಕೆಲಸಕ್ಕೆ ಹೋಗಿದ್ದಾಗ ಮಕ್ಕಳು ರೈಲು ಹಳಿಯಲ್ಲಿ ಆಟವಾಡುತ್ತಿದ್ದರು.
ರೈಲು ಬರುವುದನ್ನು ಗಮನಿಸದೆ ಮೂವರು ಮಕ್ಕಳು ರೈಲು ಹಳಿ ದಾಟಲು ಮುಂದಾದಾಗ ಚೆಂಗಲ್ಪಟ್ಟುದಿಂದ ತಾಂಬರಂ ಕಡೆಗೆ ಹೋಗುತ್ತಿದ್ದ ಉಪನಗರ ಇಎಂಯು (ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್) ರೈಲು ಬೆಳಿಗ್ಗೆ 11.45 ರ ಸುಮಾರಿಗೆ ಅವರ ಮೇಲೆ ಹರಿದಿದೆ.
ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಸಿಬ್ಬಂದಿ ಅವರ ದೇಹಗಳನ್ನು ಹಳಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಕ್ರೋಮ್‌ಪೇಟೆ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮರಣೋತ್ತರ ಪರೀಕ್ಷೆ ಬಳಿಕ ಶವಗಳನ್ನು ಪೋಷಕರಿಗೆ ಒಪ್ಪಿಸಿದ್ದಾರೆ.
ಸ್ಥಳೀಯ ವರದಿಗಳ ಪ್ರಕಾರ ವಂಡಲೂರು ಮತ್ತು ಉರಪಕ್ಕಂ ನಡುವಿನ ರೈಲ್ವೆ ಮಾರ್ಗವನ್ನು ಯಾವುದೇ ಗೋಡೆಯಿಂದ ರಕ್ಷಿಸಲಾಗಿಲ್ಲ. ಇಲ್ಲಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತವೆ ಎಂದು ಸ್ಥಳೀಯರು ದೂರಿದ್ದಾರೆ.












Click it and Unblock the Notifications