Threat call: ನಿತಿನ್ ಗಡ್ಕರಿಗೆ ಮತ್ತೆ ಬೆದರಿಕೆ ಕರೆ, ₹10 ಕೋಟಿಗೆ ಬೇಡಿಕೆ: ನಾಗ್ಪುರ ಪೊಲೀಸರು ಹೇಳಿದ್ದೇನು?
ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಗೆ ಈ ಹಿಂದೆ ಕೊಲೆ ಬೆದರಿಕೆ ಬಂದಿತ್ತು. ಇದೀಗ ಮತ್ತೊಮ್ಮೆ ಬೆದರಿಕೆ ಕರೆ ಮಾಡಿ ಮನೆ ಮತ್ತು ಕಚೇರಿಯನ್ನು ಸ್ಫೋಟ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ನವದೆಹಲಿ, ಮಾರ್ಚ್, 22: ನಿತಿನ್ ಗಡ್ಕರಿಯವರಿಗೆ ಈ ಹಿಂದೆ ಕೊಲೆ ಬೆದರಿಕೆ ಬಂದಿತ್ತು. ಇದೀಗ ಮತ್ತೊಮ್ಮೆ ಬೆದರಿಕೆ ಕರೆ ಬಂದಿದ್ದು, ಮನೆ ಮತ್ತು ಕಚೇರಿಯನ್ನು ಸ್ಫೋಟ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಯುವತಿಯ ನಂಬರ್‌ನಿಂದ ಕರೆ ಮಾಡಿದ ವ್ಯಕ್ತಿ ತನ್ನ ಹೆಸರು ಜಯೇಶ್ ಪೂಜಾರಿ ಎಂದು ಪರಿಚಯಿಸಿಕೊಂಡಿದ್ದಾನೆ ಅಂತಾ ಪೊಲೀಸರು ತಿಳಿಸಿದ್ದಾರೆ. ಹಾಗಾದರೆ ಆ ಮೊಬೈಲ್ ಸಂಖ್ಯೆಯ ಯುವತಿಯ ಮೂಲದ ಬಗ್ಗೆ ನಾಗ್ಪುರ ಪೊಲೀಸರು ಏನು ಹೇಳಿದ್ದಾರೆ ಎಂದು ಇಲ್ಲಿ ತಿಳಿಯಿರಿ.
ಈ ಹಿಂದೆ ಕರೆ ಮಾಡಿದಾಗ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು 100 ಕೋಟಿ ರೂಪಾಯಿ ನೀಡಬೇಕೆಂದು ಬೆದರಿಕೆ ಹಾಕಿದ್ದರು. ಆದರೆ ಈ ಬಾರಿ 10 ಕೋಟಿ ರೂಪಾಯಿ ನೀಡಬೇಕು ಎಂದು ಬೆದರಿಕೆ ಒಡ್ಡಿದ್ದು, ಈ ಕುರಿತು ಪಶ್ಚಿಮ ನಾಗ್ಪುರದ ಖಮ್ಲಾದಲ್ಲಿರುವ ನಿತಿನ್ ಗಡ್ಕರಿ ಅವರ ಕಚೇರಿ ದೂರು ದಾಖಲಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪ್ರಕರಣ ದಾಖಲಿಸಿಕೊಂಡ ನಾಗ್ಪುರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ನಾಗ್ಪುರ ಪೊಲೀಸರು ಹೇಳಿದ್ದೇನು?
ಪೊಲೀಸರ ನೀಡಿದ ಮಾಹಿತಿಯ ಪ್ರಕಾರ, ನಿತಿನ್ ಗಡ್ಕರಿಯವರ ಖಮ್ಲಾ ಕಚೇರಿಗೆ ಫೋನ್ ಕರೆ ಬಂದಿತ್ತು. ಈ ಬಾರಿ ಕರೆ ಮಾಡಿದವರು ಮನೆ ಮತ್ತು ಕಚೇರಿಯನ್ನು ಸ್ಫೋಟಿಸುವುದಾಗಿ ಬೆದರಿಕೆಯೊಡ್ಡಿದ್ದಾರೆ. ಈ ಕರೆಗೆ ಬಳಸಲಾದ ಸಂಖ್ಯೆ ಬೆಂಗಳೂರಿನ ಯುವತಿಗೆ ಸಂಬಂಧಿಸಿದ್ದು ಎನ್ನಲಾಗಿದೆ. ಈ ಯುವತಿಯು ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಈಕೆಯ ಸ್ನೇಹಿತ ಜೈಲಿನಲ್ಲಿದ್ದಾನೆ ಎಂದು ತಿಳಿಸಿದ್ದಾರೆ. ಹಾಗೆಯೇ ಫೋನ್ ನಂಬರ್ ಜಾಲ ಹಿಡಿದ ನಾಗ್ಪುರ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಕಚೇರಿಯ ಕಾರ್ಯದರ್ಶಿಗಳು ಹೇಳಿದ್ದೇನು?
ನಮಗೆ ಎರಡು ಬೆದರಿಕೆ ಕರೆಗಳು ಬಂದಿವೆ. ಮಂಗಳವಾರ ಕರೆ ಬಂದಿದ್ದು, ಸದ್ಯ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಸಂಸತ್ ಅಧಿವೇಶನಕ್ಕೆ ತೆರಳಿದ್ದಾರೆ. ಬೆದರಿಕೆ ಕರೆ ಬಂದ ತಕ್ಷಣ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ ಎಂದು ಖಮ್ಲಾ ಕಚೇರಿಯ ಹೆಚ್ಚುವರಿ ಖಾಸಗಿ ಕಾರ್ಯದರ್ಶಿ ತಿಳಿಸಿದ್ದಾರೆ.

ಜ. 14ರಂದು ಮೊದಲ ಬೆದರಿಕೆ ಕರೆ
ಜನವರಿ ತಿಂಗಳಿನಲ್ಲಿ ನಿತಿನ್ ಗಡ್ಕರಿಯವರ ನಿವಾಸ ಮತ್ತು ಕಚೇರಿಗೆ ಹೀಗೆ ಬೆದರಿಕೆ ಕರೆಗಳು ಬಂದಿದ್ದವು. ಜನವರಿ 14ರಂದು ಕರೆ ಮಾಡಿದ ವ್ಯಕ್ತಿ ತಾನು ದಾವೂದ್ ಇಬ್ರಾಹಿಂ ಗ್ಯಾಂಗ್ ಸದಸ್ಯ ಎಂದು ಪರಿಚಯಿಸಿಕೊಂಡಿದ್ದು, ಆತ 100 ಕೋಟಿ ರೂಪಾಯಿ ನೀಡಬೇಕು ಎಂದು ಬೇಡಿಕೆಯಿಟ್ಟಿದ್ದ ಎಂದು ಮಾಹಿತಿ ನೀಡಿದ್ದಾರೆ.
ಬೆದರಿಕೆ ಕರೆಗಳು ಬಂದಿದ್ದು ಯಾವಾಗ?
ನಿತಿನ್ ಗಡ್ಕರಿಯವರ ಸಾರ್ವಜನಿಕ ಸಂಪರ್ಕ ಕಚೇರಿಯ ಸ್ಥಿರ ದೂರವಾಣಿ ಸಂಖ್ಯೆಗೆ ಮಂಗಳವಾರ ಮಧ್ಯಾಹ್ನ 11:25 ಮತ್ತು 12.30ರ ನಡುವೆ ಕರೆಗಳು ಬಂದಿದ್ದವು. ಆದ್ದರಿಂದ ನಾಗಪುರ ಸಂಸದರ ಮನೆ ಮತ್ತು ಕಚೇರಿಯ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕರೆ ಮಾಡಿದ ವ್ಯಕ್ತಿ ಹಿಂಡಲಗಾ ಜೈಲಿನಲ್ಲಿ ಕೈದಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಈ ಹಿಂದೆ ಈತನಿಗೆ ಕೊಲೆ ಪ್ರಕರಣದಲ್ಲಿ ನ್ಯಾಯಾಲಯ ಮರಣದಂಡನೆಯನ್ನೂ ವಿಧಿಸಿತ್ತು. ಜೈಲಿನಿಂದಲೇ ಈ ಫೋನ್ ಕರೆ ಮಾಡಲಾಗಿತ್ತು ಎನ್ನುವ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ಮನೆ, ಕಚೇರಿಗೆ ಭದ್ರತೆ ಹೆಚ್ಚಳ
ಬೆದರಿಕೆ ಕರೆಗಳು ಬಂದ ಹಿನ್ನೆಲೆಯಲ್ಲಿ ನಿತಿನ್ ಗಡ್ಕರಿಯವರ ಮನೆ ಮತ್ತು ಕಚೇರಿಗಳಿಗೆ ಹೆಚ್ಚಿನ ಭದ್ರತೆಯನ್ನು ನೀಡಲಾಗಿದೆ. ಈಗಾಗಲೇ ಅವರಿಗೆ ಝಡ್ ಪ್ಲಸ್ ಭದ್ರತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ದೂರು ದಾಖಲಾದ ತಕ್ಷಣ ವಲಯ ಉಪ ಪೊಲೀಸ್ ಆಯುಕ್ತ ರಾಹುಲ್ ಮದನೆ ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದರು.
ಈ ವೇಳೆ ಮಾತನಾಡಿದ ಪೊಲೀಸ್ ಆಯುಕ್ತ ಮದನೆ, ನಾವು ಪ್ರಕರಣದ ಬೆನ್ನು ಹತ್ತಿದ್ದು, ಪ್ರಮುಖ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಕಾರ್ಯನಿರತರಾಗಿದ್ದೇವೆ. ಹಾಗೆಯೇ ಕೇಂದ್ರ ಸಚಿವರ ಸುರಕ್ಷತೆಯ ಬಗ್ಗೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಸಹ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.












Click it and Unblock the Notifications