ಮಳೆಯಲ್ಲಿ ನೆನೆದ ಡೈರಿ ಈಗ ವೈರಲ್! ಸಾವಿರಾರು ಹೃದಯಗಳನ್ನು ತಟ್ಟಿದ ನೆನಪುಗಳ ಕಥೆ
ಕೆಲವು ವಸ್ತುಗಳು ಕೇವಲ ವಸ್ತುಗಳಾಗಿರದೆ ನಮ್ಮ ಜೀವನದ ಒಂದು ಭಾಗವಾಗಿರುತ್ತವೆ. ಹಳೆಯ ಫೋಟೋ, ಅಜ್ಜನ ಕೈಗಡಿಯಾರ, ತಾಯಿಯ ಪತ್ರ, ಬಾಲ್ಯದ ಆಟಿಕೆ... ಇವೆಲ್ಲವೂ ನಮ್ಮನ್ನು ಕ್ಷಣಾರ್ಧದಲ್ಲಿ ವರ್ಷಗಳ ಹಿಂದಿನ ನೆನಪುಗಳ ಲೋಕಕ್ಕೆ ಕರೆದೊಯ್ಯುತ್ತವೆ. ಅಂತಹ ನೆನಪುಗಳ ಖಜಾನೆಯೇ ಡೈರಿ.
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಒಂದು ಸಣ್ಣ ಘಟನೆ ಸಾವಿರಾರು ಜನರ ಮನಸ್ಸನ್ನು ತಟ್ಟಿದೆ. ಅದು ಯಾವ ದೊಡ್ಡ ಅಪಘಾತದ ಸುದ್ದಿಯೂ ಅಲ್ಲ, ಯಾವ ಪ್ರಸಿದ್ಧ ವ್ಯಕ್ತಿಯ ಕಥೆಯೂ ಅಲ್ಲ. ಮಳೆಯಲ್ಲಿ ನೆನೆದು ರಸ್ತೆ ಬದಿಯಲ್ಲಿ ಬಿದ್ದಿದ್ದ ಒಂದು ಡೈರಿಯ ಕಥೆ.

ಒಬ್ಬ ಯುವಕ ತನ್ನ ಸ್ನೇಹಿತರೊಂದಿಗೆ ಹೊರಗೆ ವಾಕಿಂಗ್ ಮಾಡುತ್ತಿದ್ದಾಗ, ರಸ್ತೆ ಬದಿಯಲ್ಲಿ ಮಳೆಯಲ್ಲಿ ಸಂಪೂರ್ಣ ಒದ್ದೆಯಾಗಿ ಬಿದ್ದುಕೊಂಡಿದ್ದ ಒಂದು ಡೈರಿ ಕಾಣಿಸಿತು. ಸಾಮಾನ್ಯವಾಗಿ ಇಂಥದ್ದನ್ನು ಕಂಡರೆ ಹೆಚ್ಚಿನವರು ಗಮನಿಸದೆ ಮುಂದೆ ಸಾಗುತ್ತಾರೆ. ಆದರೆ ಆ ಯುವಕ ಅದನ್ನು ಎತ್ತಿಕೊಂಡ. ಮಳೆಯಿಂದ ತೇವಗೊಂಡಿದ್ದ ಪುಟಗಳನ್ನು ಬಹಳ ಎಚ್ಚರಿಕೆಯಿಂದ ತಿರುಗಿಸಿದ. ಅವನ ಕಣ್ಣಿಗೆ ಬಿದ್ದ ದೃಶ್ಯ ಅವನನ್ನೇ ಭಾವುಕನನ್ನಾಗಿ ಮಾಡಿತು.
ಅದು ಹೃದಯಗಳ ಮಾತು
ಅದು ಲೆಕ್ಕಪತ್ರದ ಪುಸ್ತಕವಾಗಿರಲಿಲ್ಲ. ಕಾಲೇಜಿನ ನೋಟ್ಸ್ ಪುಸ್ತಕವೂ ಅಲ್ಲ. ಪ್ರತಿಯೊಂದು ಪುಟವೂ ಭಾವನೆಗಳಿಂದ ತುಂಬಿತ್ತು. ಸುಂದರ ಕೈಬರಹದಲ್ಲಿ ಬರೆದ ಸಾಲುಗಳು, ಪ್ರೀತಿಯ ಉಲ್ಲೇಖಗಳು, ಪ್ರೇಮಗೀತೆಗಳ ಸಾಹಿತ್ಯ, ಬಣ್ಣದ ಪೆನ್ನುಗಳಿಂದ ಬಿಡಿಸಿದ ಚಿತ್ರಗಳು, ಪುಟ್ಟ ಹೃದಯದ ಚಿಹ್ನೆಗಳು, ನೆನಪಿಗಾಗಿ ಅಂಟಿಸಿದ್ದ ಚಾಕೊಲೇಟ್ ರ್ಯಾಪರ್‌ಗಳು... ಯಾರೋ ಒಬ್ಬರು ತಮ್ಮ ಬದುಕಿನ ಅತ್ಯಂತ ಅಮೂಲ್ಯ ಕ್ಷಣಗಳನ್ನು ಈ ಪುಟಗಳಲ್ಲಿ ಜೋಪಾನವಾಗಿ ಸಂಗ್ರಹಿಸಿದ್ದರು.
ಮಳೆ ಆ ಪುಟಗಳನ್ನು ಹಾಳು ಮಾಡಿತ್ತು. ಆದರೆ ಆ ಪುಟಗಳಲ್ಲಿ ತುಂಬಿದ್ದ ಪ್ರೀತಿಯನ್ನು ಅಳಿಸಲು ಸಾಧ್ಯವಾಗಿರಲಿಲ್ಲ.
ಡೈರಿಯನ್ನು ನೋಡಿದ ಯುವಕ, "ಇದನ್ನು ಸಿದ್ಧಪಡಿಸಲು ಎಷ್ಟು ದಿನಗಳ ಶ್ರಮ ಬೇಕಾಗಿರಬಹುದು? ಎಷ್ಟು ಪ್ರೀತಿಯಿಂದ ಇದನ್ನು ಮಾಡಿರಬಹುದು?" ಎಂದು ಯೋಚಿಸಿದ. ಅದು ಬಹುಶಃ ಒಬ್ಬ ಯುವತಿಯ ಖಾಸಗಿ ನೆನಪುಗಳ ಸಂಗ್ರಹವಾಗಿರಬಹುದು ಎಂದು ಊಹಿಸಿದ. ಆದ್ದರಿಂದಲೇ ಅದರ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, "ಈ ಡೈರಿ ಅದರ ನಿಜವಾದ ಮಾಲೀಕರಿಗೆ ಮತ್ತೆ ಸಿಗಬೇಕು. ದಯವಿಟ್ಟು ಈ ವಿಡಿಯೊವನ್ನು ಹೆಚ್ಚು ಜನರಿಗೆ ತಲುಪಿಸಿ," ಎಂದು ಮನವಿ ಮಾಡಿದ.
ಆ ಒಂದು ವಿಡಿಯೊ ಈಗ ಲಕ್ಷಾಂತರ ಜನರ ಹೃದಯ ಮುಟ್ಟಿದೆ. ಕೆಲವರು, "ಇದು ಆಕಸ್ಮಿಕವಾಗಿ ಕಳೆದು ಹೋಗಿರಬಹುದು" ಎಂದಿದ್ದಾರೆ. ಇನ್ನೂ ಕೆಲವರು, "ಬಹುಶಃ ಒಂದು ಪ್ರೇಮಕಥೆಯ ಅಂತ್ಯದಲ್ಲಿ ನೋವಿನಿಂದ ಯಾರೋ ಇದನ್ನು ಎಸೆದಿರಬಹುದು" ಎಂದು ಊಹಿಸಿದ್ದಾರೆ. ನಿಜ ಏನೇ ಆಗಿರಲಿ, ಆ ಡೈರಿಯ ಪ್ರತಿಯೊಂದು ಪುಟದಲ್ಲೂ ಆಕೆಯ ಬದುಕಿನ ಒಂದು ತುಣುಕು ಇತ್ತು.
ಮೊಬೈಲ್‌ನಲ್ಲಿ ಭಾವನೆಗಳಿವೆಯೇ?
ಇಂದು ನಾವು ದಿನಕ್ಕೆ ಹತ್ತಾರು ಫೋಟೋಗಳನ್ನು ತೆಗೆಯುತ್ತೇವೆ. ನೂರಾರು ಸಂದೇಶಗಳನ್ನು ಕಳುಹಿಸುತ್ತೇವೆ. ಸಾವಿರಾರು ಚಿತ್ರಗಳು ಕ್ಲೌಡ್‌ನಲ್ಲಿ ಉಳಿಯುತ್ತವೆ. ಆದರೆ ಹತ್ತು ವರ್ಷಗಳ ನಂತರ ಅವುಗಳಲ್ಲಿ ಎಷ್ಟು ನೆನಪಿರುತ್ತವೆ?
ಹಳೆಯ ಫೋಟೋ ನೋಡಿದಾಗ ಒಂದು ಘಟನೆ ನೆನಪಾಗಬಹುದು. ಆದರೆ ಆ ದಿನ ನಮ್ಮ ಮನಸ್ಸಿನಲ್ಲಿ ಏನಿತ್ತು? ಯಾರ ಮಾತು ನಮ್ಮನ್ನು ನೋಯಿಸಿತ್ತು? ಯಾವ ಕನಸು ನಮ್ಮನ್ನು ಉತ್ಸಾಹಗೊಳಿಸಿತ್ತು? ಯಾವ ಸಣ್ಣ ಘಟನೆ ನಮ್ಮನ್ನು ನಗಿಸಿತ್ತು? ಇವೆಲ್ಲವನ್ನೂ ಒಂದು ಫೋಟೋ ಹೇಳುವುದಿಲ್ಲ. ಅದನ್ನು ಹೇಳಬಲ್ಲದ್ದು ನಮ್ಮ ಕೈಬರಹದ ಡೈರಿಯಷ್ಟೇ.
ಕೈಯಿಂದ ಬರೆದ ಪದಗಳಲ್ಲಿ ಒಂದು ಜೀವಂತಿಕೆ ಇರುತ್ತದೆ. ಆ ಬರಹದಲ್ಲಿ ಆ ದಿನದ ಭಾವನೆ ಇರುತ್ತದೆ. ಕೆಲವೊಮ್ಮೆ ಕಣ್ಣೀರಿನ ಹನಿ ಇರುತ್ತದೆ. ಕೆಲವೊಮ್ಮೆ ಸಂತೋಷದ ನಗು ಇರುತ್ತದೆ. ಕೆಲವೊಮ್ಮೆ ಆತ್ಮವಿಶ್ವಾಸದ ಘೋಷಣೆ ಇರುತ್ತದೆ. ಅದಕ್ಕಾಗಿಯೇ ಹಳೆಯ ಡೈರಿಗಳನ್ನು ಓದಿದಾಗ ನಾವು ಮತ್ತೆ ಆ ದಿನಗಳಿಗೆ ಹಿಂತಿರುಗಿದ ಅನುಭವವಾಗುತ್ತದೆ.
ಡೈರಿ ಮನಸ್ಸಿಗೂ ಔಷಧ
ಮನೋವಿಜ್ಞಾನ ತಜ್ಞರು ಹಲವು ವರ್ಷಗಳಿಂದ ಒಂದು ಸಲಹೆ ನೀಡುತ್ತಿದ್ದಾರೆ. ಪ್ರತಿದಿನ ಕೆಲವೇ ನಿಮಿಷ ಡೈರಿ ಬರೆಯುವ ಅಭ್ಯಾಸ ಬೆಳೆಸಿಕೊಳ್ಳಿ. ಏಕೆಂದರೆ, ಮನಸ್ಸಿನಲ್ಲಿರುವ ಭಾವನೆಗಳನ್ನು ಬರೆಯುವಾಗ ಒತ್ತಡ ಕಡಿಮೆಯಾಗುತ್ತದೆ. ಸಮಸ್ಯೆಗಳು ಸ್ಪಷ್ಟವಾಗಿ ಕಾಣಿಸುತ್ತವೆ. ನಮ್ಮ ತಪ್ಪುಗಳ ಅರಿವಾಗುತ್ತದೆ. ಕೃತಜ್ಞತೆಯ ಭಾವನೆ ಬೆಳೆಯುತ್ತದೆ. ಮುಂದಿನ ದಿನವನ್ನು ಹೆಚ್ಚು ಆತ್ಮವಿಶ್ವಾಸದಿಂದ ಆರಂಭಿಸಲು ಸಹಾಯವಾಗುತ್ತದೆ.
ಡೈರಿ ಬರೆಯಲು ದೊಡ್ಡ ಸಾಹಿತಿಗಳಾಗಕಿಲ್ಲ. ಪ್ರತಿದಿನ ಐದು ನಿಮಿಷ ಸಾಕು. ಇಂದಿನ ದಿನ ಹೇಗಿತ್ತು? ಯಾರು ನನ್ನ ಮುಖದಲ್ಲಿ ನಗು ಮೂಡಿಸಿದರು? ನಾನು ಯಾರಿಗೆ ಧನ್ಯವಾದ ಹೇಳಬೇಕು? ನಾಳೆ ನಾನು ಚೆನ್ನಾಗಿ ಏನು ಮಾಡಬಹುದು? ಇಷ್ಟು ಬರೆದರೆ ಸಾಕು. ಕೆಲವು ವರ್ಷಗಳ ನಂತರ ಅದೇ ಡೈರಿ ನಿಮ್ಮ ಬದುಕಿನ ಅತ್ಯಂತ ಅಮೂಲ್ಯ ಪುಸ್ತಕವಾಗಿರುತ್ತದೆ.
ಇಂದು ಕೃತಕ ಬುದ್ಧಿಮತ್ತೆ (AI) ಲೇಖನಗಳನ್ನು ಬರೆಯುತ್ತಿದೆ. ಮೊಬೈಲ್‌ಗಳು ನಮ್ಮ ನೆನಪುಗಳನ್ನು ಸಂಗ್ರಹಿಸುತ್ತಿವೆ. ತಂತ್ರಜ್ಞಾನ ದಿನದಿಂದ ದಿನಕ್ಕೆ ಮುಂದುವರಿಯುತ್ತಿದೆ. ಆದರೆ ನಮ್ಮ ಕೈಯಿಂದ ಬರೆದ ಪುಟಕ್ಕೆ ಇಂದಿಗೂ ಪರ್ಯಾಯ ಸಿಕ್ಕಿಲ್ಲ. ಅಮ್ಮ ಬರೆದ ಒಂದು ಚೀಟಿ, ಅಪ್ಪನ ಸಹಿ, ಪ್ರೀತಿಪಾತ್ರರ ಪತ್ರ ಅಥವಾ ನಮ್ಮದೇ ಹದಿನೈದು ವರ್ಷಗಳ ಹಿಂದಿನ ಡೈರಿಯ ಪುಟ- ಇವುಗಳನ್ನು ಓದಿದಾಗ ಮೂಡುವ ಭಾವನೆಗಳನ್ನು ಯಾವುದೇ ಡಿಜಿಟಲ್ ಕಡತ ನೀಡಲಾರದು.
ಬಹುಶಃ ಮಳೆಯಲ್ಲಿ ನೆನೆದ ಆ ಡೈರಿ ತನ್ನ ಮಾಲೀಕರ ಕೈಗೆ ಮತ್ತೆ ಸೇರಿರಬಹುದು. ಅಥವಾ ಇನ್ನೂ ಯಾರನ್ನೋ ಹುಡುಕುತ್ತಿರಬಹುದು. ಆದರೆ ಅದು ಬರೆಯುವಾಗ ಆ ವ್ಯಕ್ತಿಗೆ ನೀಡಿದ ಆನಂದದ ಕಣ್ಣೀರು ಅಮೂಲ್ಯ. ಜೀವನದಲ್ಲಿ ನೆನಪುಗಳನ್ನು ಕೇವಲ ಮೊಬೈಲ್‌ನಲ್ಲಿ ಉಳಿಸಬೇಡಿ. ಕೆಲವೊಮ್ಮೆ ಅವುಗಳನ್ನು ನಿಮ್ಮ ಕೈಬರಹದಲ್ಲೂ ದಾಖಲಿಸಿ. ಏಕೆಂದರೆ ಕಾಲ ಕಳೆದರೂ ಮಸುಕಾಗದ ಕೆಲವು ನೆನಪುಗಳು, ಕಾಗದದ ಪುಟಗಳಲ್ಲಿ ಮಾತ್ರ ಜೀವಂತವಾಗಿರುತ್ತವೆ.
ಬರಹ : ಭವಾನಿ ಭಟ್














Click it and Unblock the Notifications