ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ: ವಿರುದ್ಧವಾಗಿ ಮತ ಹಾಕಿದ ಇಬ್ಬರು ಸಂಸದರು ಇವರೇ ನೋಡಿ
ಲೋಕಸಭೆಯಲ್ಲಿ ಬಹು ನಿರೀಕ್ಷಿತ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಲಾಗಿದೆ. ಮಂಗಳವಾರ ಮತದಾನದ ಮೂಲಕ ಮಸೂದೆಯನ್ನು ಅಂಗೀಕರಿಸಲಾಯಿತು. 454 ಮತಗಳು ಮಸೂದೆಯ ಪರವಾಗಿ ಬಂದರೆ, ಎರಡು ಮತಗಳು ಮಾತ್ರ ಮಸೂದೆಗೆ ವಿರುದ್ಧವಾಗಿ ಬಂದವು.
2024ರ ಲೋಕಸಭಾ ಚುನಾವಣೆ ನಂತರ ಜನಗಣತಿ ಮತ್ತು ಡಿಲಿಮಿಟೇಶನ್ ನಡೆಯಲಿದ್ದು ಆ ನಂತರ ಮಸೂದೆಯನ್ನು ಜಾರಿ ಮಾಡಲಾಗುವುದು ಎಂದು ಸರ್ಕಾರ ಮಾಹಿತಿ ನೀಡಿದೆ. ಶೇ. 33ರಷ್ಟು ಮಹಿಳೆಯರಿಗೆ ಮೀಸಲಾತಿ ನೀಡುವ ಮಸೂದೆ ಇದಾಗಿದೆ.

ಮಹಿಳಾ ವಿಧೇಯಕದ ವಿರುದ್ಧ ಇಬ್ಬರು ಸಂಸದರು ಮಾತ್ರ ಮತ ಚಲಾಯಿಸಿದರು. ಇಬ್ಬರೂ ಕೂಡ ಎಐಎಂಐಎಂ ಪಕ್ಷದ ಸಂಸದರು ಎನ್ನುವುದು ಗಮನಾರ್ಹ. ಹೈದರಾಬಾದ್ ಲೋಕಸಭಾ ಕ್ಷೇತ್ರದ ಸಂಸದ ಅಸಾದುದ್ದೀನ್ ಓವೈಸಿ ಮತ್ತು ಔರಂಗಾಬಾದ್ ಲೋಕಸಭಾ ಕ್ಷೇತ್ರದ ಸಂಸದ ಇಮ್ತಿಯಾಜ್ ಜಲೀಲ್ ಸಯ್ಯದ್ ಮಹಿಳಾ ವಿಧೇಯಕದ ವಿರುದ್ಧ ಮತ ಚಲಾಯಿಸಿದ್ದಾರೆ.
ವಿರೋಧ ವ್ಯಕ್ತಪಡಿಸಿದ್ದ ಓವೈಸಿ
ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಮಹಿಳಾ ಮೀಸಲಾತಿ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದರು. ಈಗ ಮಸೂದೆಗೆ ವಿರುದ್ಧವಾಗಿ ಮತ ಚಲಾಯಿಸುವ ಮೂಲಕ ತಮ್ಮ ವಿರೋಧವನ್ನು ತೋರಿಸಿದ್ದಾರೆ.
ಮಸೂದೆಯನ್ನು ವಿರೋಧಿಸಲು ಕಾರಣಗಳನ್ನು ನೀಡಿರುವ ಅವರು, ಮಹಿಳಾ ಮೀಸಲಾತಿ ಮಸೂದೆಯಲ್ಲಿ ಮುಸ್ಲಿಮರು ಮತ್ತು ಒಬಿಸಿ ಸಮುದಾಯಗಳಿಗೆ ಪ್ರಾತಿನಿಧ್ಯ ಇಲ್ಲದ ಕಾರಣ ವಿರುದ್ಧವಾಗಿ ಮತ ಚಲಾಯಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಮಂಗಳವಾರ ಮಸೂದೆ ಜಾರಿಗೆ ಮುನ್ನ ಎಎನ್‌ಐ ಜೊತೆ ಮಾತನಾಡಿದ್ದ ಅವರು, "ಸರ್ಕಾರ ಕಾನೂನನ್ನು ಮಾಡುತ್ತದೆ. ಭಾರತದಲ್ಲಿ ಈವರೆಗೆ 17 ಬಾರಿ ಲೋಕಸಭಾ ಚುನಾವಣೆ ನಡೆದಿವೆ. 8,990 ಸಂಸದರು ಇದುವರೆಗೂ ಆಯ್ಕೆಯಾಗಿದ್ದು, ಇದರಲ್ಲಿ ಕೇವಲ 520 ಸಂಸದರು ಮಾತ್ರ ಮುಸ್ಲಿಮರಾಗಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ.
ಈ 520 ಮುಸ್ಲಿಂ ಸಂಸದರಲ್ಲಿ ಮಹಿಳಾ ಮುಸ್ಲಿಮರ ಸಂಖ್ಯೆ ಬೆರಳೆಣಿಕೆಯಷ್ಟೂ ಇಲ್ಲ. ಹಾಗಾದರೆ ಮಹಿಳೆಯರಿಗೆ ಪ್ರಾತಿನಿಧ್ಯ ಎಲ್ಲಿದೆ. ಈ ಮಸೂದೆಯಲ್ಲಿ ಮುಸ್ಲಿಂ ಮತ್ತು ಒಬಿಸಿ ಮಹಿಳೆಯರಿಗೆ ಯಾವುದೇ ಪ್ರಾತಿನಿಧ್ಯ ಇಲ್ಲ ಎಂದು ಅವರು ಆರೋಪಿಸಿದ್ದಾರೆ.












Click it and Unblock the Notifications