Vande Sadharan Train: ಬರಲಿವೆ 'ವಂದೇ ಸಾಧಾರಣ್' ರೈಲುಗಳು- ಏನೇನು ಸೌಲಭ್ಯ? ಯಾರಿಗೆಲ್ಲಾ ಅನುಕೂಲ? ಅಂಕಿಅಂಶ, ವಿವರ
ನವದೆಹಲಿ, ಸೆಪ್ಟೆಂಬರ್ 15: ಸೆಮಿ-ಹೈ ಸ್ಪೀಡ್ ರೈಲು 'ವಂದೇ ಭಾರತ್ ಎಕ್ಸ್‌ಪ್ರೆಸ್' ಭಾರತದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸಿದೆ. ವಂದೇ ಭಾರತ್‌ನಲ್ಲಿ ಒದಗಿಸಲಾದ ಸೌಲಭ್ಯಗಳು ಜನರಿಗೆ ಸುಖಕರ ಪ್ರಯಾಣವನ್ನು ನೀಡುತ್ತವೆ. ಈ ಹಿನ್ನೆಲೆಯಲ್ಲಿ ಜನರು ರೈಲಿನಲ್ಲಿ ಪ್ರಯಾಣಿಸಲು ಹೆಚ್ಚು ಉತ್ಸುಕರಾಗಿದ್ದಾರೆ. ಆದರೆ, ಹೆಚ್ಚಿನ ದರಗಳಿಂದಾಗಿ ಆರ್ಥಿಕವಾಗಿ ಹಿಂದುಳಿದವರು ಇನ್ನೂ ಈ ರೈಲಿನಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು 'ವಂದೇ ಸಾಧಾರಣ್' ರೈಲುಗಳನ್ನು ಪ್ರಾರಂಭಿಸಲು ಭಾರತೀಯ ರೈಲ್ವೆ ಮುಂದಾಗಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪರ್ಯಾಯವಾಗಿ ಬಜೆಟ್ ಸ್ನೇಹಿ 'ವಂದೇ ಸಾಧಾರಣ್' ರೈಲುಗಳನ್ನು ಹೊರ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ರೈಲುಗಳು ಬಜೆಟ್ ಸ್ನೇಹಿಯಾಗಿವೆ. ಪ್ರಯಾಣಿಕರಿಗೆ ಸುಲಭ ಹಾಗೂ ಬಜೆಟ್ ಸ್ನೇಹಿ ಪ್ರಯಾಣವನ್ನು ಒದಗಿಸುವ ಗುರಿಯನ್ನು ಹೊಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ರೈಲುಗಳ ಹೆಸರಿನ ಬಗ್ಗೆ ಅಧಿಕೃತ ಮಾಹಿತಿ ಹೊರಬಂದಿಲ್ಲ. ಪ್ರಮುಖ ಮಾರ್ಗಗಳಲ್ಲಿ ವಂದೇ ಸಾಧಾರಣ್ ರೈಲುಗಳನ್ನು ಓಡಿಸಲು ಸಿದ್ಧತೆಗಳು ನಡೆಯುತ್ತಿವೆ. ವಲಸೆ ಕಾರ್ಮಿಕರು ರೈಲುಗಳಲ್ಲಿ ಹೆಚ್ಚು ಸಂಚರಿಸುತ್ತಾರೆ. ಈ ಹಿನ್ನೆಲೆಯಲ್ಲಿ ರೈಲುಗಳಲ್ಲಿ ಭಾರೀ ಜನಸಂದಣಿ ಇರುತ್ತದೆ. ಇದಕ್ಕಾಗಿ ರೈಲ್ವೇ ಸಮೀಕ್ಷೆಯನ್ನೂ ನಡೆಸಿದೆ. ಈ ರೈಲಿನ ಸೌಲಭ್ಯಗಳ ತಿಳಿಯಬೇಕೆಂದರೆ ಈ ವರದಿ ಓದಿ.
ಒಟ್ಟು 24 ಕೋಚ್‌ಗಳು
ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ (ಐಸಿಎಫ್) ಈ ರೈಲನ್ನು ತಯಾರಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ರೈಲ್ವೆಯ ಅಧಿಕೃತ ಮೂಲಗಳು ತಿಳಿಸಿವೆ. ಇನ್ನು ಕೆಲವೇ ತಿಂಗಳುಗಳಲ್ಲಿ ಇದು ಸಿದ್ಧವಾಗಲಿದೆ. ಇದು ಎಲ್ಲಾ ಎರಡನೇ ದರ್ಜೆಯ ಕೋಚ್‌ಗಳನ್ನು ಹೊಂದಿರುತ್ತದೆ. ಆದ್ದರಿಂದ, ಅದರ ದರವೂ ಕಡಿಮೆ ಎಂದು ನಿರೀಕ್ಷಿಸಲಾಗಿದೆ. ಈ ರೈಲುಗಳಲ್ಲಿ ಒಟ್ಟು 24 ಎಲ್‌ಎಚ್‌ಬಿ ಕೋಚ್‌ಗಳಿದ್ದು, ಎರಡು ಎಂಜಿನ್‌ಗಳನ್ನು ಅಳವಡಿಸಲಾಗುವುದು ಎಂದು ತಿಳಿದುಬಂದಿದೆ.
ವಂದೇ ಭಾರತ್ ರೈಲುಗಳಂತಹ ಸೌಲಭ್ಯಗಳು
ರೈಲುಗಳು 24 ಎಲ್‌ಎಚ್‌ಬಿ ಕೋಚ್‌ಗಳನ್ನು ಹೊಂದಿದ್ದು, ಬಯೋ ವ್ಯಾಕ್ಯೂಮ್ ಟಾಯ್ಲೆಟ್‌ಗಳು ಇರಲಿವೆ. ಪ್ರಯಾಣಿಕರ ಮಾಹಿತಿ ವ್ಯವಸ್ಥೆ ಮತ್ತು ಚಾರ್ಜಿಂಗ್ ಪಾಯಿಂಟ್‌ಗಳಂತಹ ವೈಶಿಷ್ಟ್ಯಗಳೊಂದಿಗೆ ವಿನ್ಯಾಸಗೊಳಿಸಲಾಗುವುದು. ಜತೆಗೆ ಭದ್ರತೆಗಾಗಿ ಸಿಸಿಟಿವಿ ಕ್ಯಾಮೆರಾಗಳನ್ನೂ ಅಳವಡಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದಲ್ಲದೇ ಆಟೋಮ್ಯಾಟಿಕ್ ಡೋರ್ ಸಿಸ್ಟಂ ಕೂಡ ಇರಲಿದೆ. ಈ ರೈಲುಗಳ ದೊಡ್ಡ ವೈಶಿಷ್ಟ್ಯವೆಂದರೆ ಈ ರೈಲುಗಳ ವೇಗವು ಮೇಲ್ ಮತ್ತು ಎಕ್ಸ್‌ಪ್ರೆಸ್‌ಗಿಂತ ಹೆಚ್ಚಾಗಿರುತ್ತದೆ. ನಿಲುಗಡೆಗಳು ಸಹ ಕಡಿಮೆ ಇರುತ್ತದೆ. ವಂದೇ ಭಾರತ್‌ನಂತೆ, ಇದು ಸ್ವಯಂಚಾಲಿತ ಬಾಗಿಲುಗಳನ್ನು ಹೊಂದಿರುತ್ತದೆ.
ಬಡ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಈ ರೈಲುಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದರಿಂದಾಗಿ ಈ ರೈಲು ದರದ ದೃಷ್ಟಿಯಿಂದ ಅತ್ಯಂತ ಅಗ್ಗವಾಗಲಿದೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಇಲ್ಲ. ಅಗ್ಗದ ದರದಲ್ಲಿ ಸಾಮಾನ್ಯ ಜನರ ಅಗತ್ಯಗಳನ್ನು ಪೂರೈಸಲು ರೈಲ್ವೆ ಹೊಸ ವಂದೇ ಭಾರತ್ ರೈಲುಗಳನ್ನು ವಿನ್ಯಾಸಗೊಳಿಸಿರುವುದು ಉತ್ತಮವೆಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.












Click it and Unblock the Notifications