ಭಾರತದಲ್ಲಿ ಕಲ್ಲಿದ್ದಲು ಕೊರತೆಗೆ ಮಳೆಯ ಕಾರಣ ಕೊಟ್ಟ ಸಚಿವ ಪ್ರಹ್ಲಾದ್ ಜೋಶಿ!
ನವದೆಹಲಿ, ಅಕ್ಟೋಬರ್ 12: ಭಾರತದಲ್ಲಿ ಕಲ್ಲಿದ್ದಲು ಕೊರತೆ ಸೃಷ್ಟಿಯಾಗುವುದರ ಹಿಂದಿನ ಕಾರಣವೇನು ಎಂಬುದನ್ನು ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ತೆರೆದಿಟ್ಟಿದ್ದಾರೆ. ದೇಶದಲ್ಲಿ ಮಳೆ ಹೆಚ್ಚಾಗಿರುವುದರಿಂದ ಕಲ್ಲಿದ್ದಲು ಅಭಾವ ಸೃಷ್ಟಿಯಾಯಿತು ಎಂದು ಹೇಳಿದ್ದಾರೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಲ್ಲಿದ್ದಲು ಬೆಲೆಯು ಪ್ರತಿ ಟನ್‌ಗೆ 60 ರೂ.ನಿಂದ 190 ರೂಪಾಯಿ ಹೆಚ್ಚಳವಾಯಿತು. ಈ ಮೊದಲು ಆಮದು ಮಾಡಿಕೊಂಡಿದ್ದ ಕಲ್ಲಿದ್ದಲು ಪ್ರಮಾಣವು 15 ರಿಂದ 20 ದಿನಗಳವರೆಗೆ ಸಾಕಾಗುವಷ್ಟಿದ್ದು, ತದನಂತರದಲ್ಲಿ ವಿದ್ಯುತ್ ಉತ್ಪಾದನೆ ಪ್ರಮಾಣ ಕೆಲವೆಡೆ ಇಳಿಮುಖವಾದರೆ ಇನ್ನು ಕೆಲವೆಡೆ ಸ್ಥಗಿತಗೊಂಡಿತು. ಇದರಿಂದಾಗಿ ದೇಶೀಯ ಕಲ್ಲಿದ್ದಲು ಉತ್ಪಾದನೆ ಮೇಲೆ ಒತ್ತಡ ಹೆಚ್ಚಾಗುವಂತೆ ಮಾಡಿದೆ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
"ಪ್ರಸ್ತುತ ಕೋಲ್ ಇಂಡಿಯಾ ಲಿಮಿಟೆಡ್ 22 ದಿನಗಳ ಕಲ್ಲಿದ್ದಲು ದಾಸ್ತಾನು ಹೊಂದಿದೆ. ಸೋಮವಾರ 1.95 ದಶಲಕ್ಷ ಟನ್ ಕಲ್ಲಿದ್ದಲು ಪೂರೈಕೆಯಾಗಿದ್ದು ಇದು ಇಲ್ಲಿಯವರೆಗಿನ ಹೊಸ ದಾಖಲೆಯಾಗಿದೆ. ನಾವು ಕಲ್ಲಿದ್ದಲು ಪೂರೈಕೆ ವೇಗ ಹೆಚ್ಚಿಸುವುದನ್ನು ಮುಂದುವರಿಸುತ್ತೇವೆ. ಮುಂಗಾರು ಮುಗಿದ ನಂತರ ಕಲ್ಲಿದ್ದಲು ಪೂರೈಕೆಯು ಶೀಘ್ರವಾಗಿ ಸುಧಾರಿಸುತ್ತದೆ," ಎಂದು ಸಚಿವ ಪ್ರಹ್ಲಾದ್ ಜೋಶಿ ಆಶಿಸಿದ್ದಾರೆ.

20 ಲಕ್ಷ ಟನ್‌ಗಳಷ್ಟು ಕಲ್ಲಿದ್ದಲು ಪೂರೈಕೆ ಪ್ರಯತ್ನ:
ಕಲ್ಲಿದ್ದಲು ಕೊರತೆ ಕುರಿತು ಚರ್ಚೆಗೆ ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಉನ್ನತ ಮಟ್ಟದ ಸಭೆ ನಡೆಸಿದರು. ಕೇಂದ್ರ ವಿದ್ಯುತ್ ಸಚಿವ ಆರ್ ಕೆ ಸಿಂಗ್, ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಮತ್ತು ಉತ್ತರ ವಿಭಾಗದಲ್ಲಿ ಎರಡೂ ಸಚಿವಾಲಯಗಳ ಉನ್ನತ ಅಧಿಕಾರಿಗಳೊಂದಿಗೆ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಚರ್ಚೆ ನಡೆಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ನಂತರ ಪ್ರತಿಕ್ರಿಯೆ ನೀಡಿರುವ ಸಚಿವ ಪ್ರಹ್ಲಾದ್ ಜೋಶಿ, "ಅಕ್ಟೋಬರ್ 21ರ ನಂತರ, ನಾವು 2 ಮಿಲಿಯನ್ ಟನ್‌ಗಳಷ್ಟು ಕಲ್ಲಿದ್ದಲನ್ನು ಪೂರೈಸಲು ಪ್ರಯತ್ನಿಸುತ್ತೇವೆ" ಎಂದು ಹೇಳಿದರು.
ದೇಶದಲ್ಲಿ ಕಲ್ಲಿದ್ದಲು ಕೊರತೆ ಸೃಷ್ಟಿಯಾಗದು:
ಕಲ್ಲಿದ್ದಲು ಕೊರತೆಯಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ಕೊರತೆ ಸೃಷ್ಟಿಯಾಗಲಿದೆ ಎಂಬ ಆರೋಪವನ್ನು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ತಳ್ಳಿ ಹಾಕಿದ್ದಾರೆ. ದೇಶದಲ್ಲಿ ಅಗತ್ಯಕ್ಕೆ ತಕ್ಕಂತೆ ಕಲ್ಲಿದ್ದಲು ಸಿಗಲಿದೆ ಎಂಬ ಭರವಸೆಯನ್ನು ನೀಡಲು ಬಯಸುತ್ತೇನೆ ಎಂದು ಹೇಳಿದರು.
ಲೋಡ್ ಶೆಡ್ಡಿಂಗ್ ಕಳವಳ:
ಭಾರತದಲ್ಲಿ 6ಕ್ಕೂ ಹೆಚ್ಚು ರಾಜ್ಯಗಳು ಲೋಡ್ ಶೆಡ್ಡಿಂಗ್ ಬಗ್ಗೆ ಕಳವಳ ವ್ಯಕ್ತಪಡಿಸಿದ ಹಿನ್ನೆಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕಚೇರಿಯು ಮಂಗಳವಾರ ಕಲ್ಲಿದ್ದಲು ಪೂರೈಕೆ ವಸ್ತುಸ್ಥಿತಿಯನ್ನು ಪರಿಶೀಲಿಸಿತು. ದೆಹಲಿಯಲ್ಲದೆ, ಪಂಜಾಬ್, ರಾಜಸ್ಥಾನ, ಬಿಹಾರ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ತಮ್ಮ ವಿದ್ಯುತ್ ಸ್ಥಾವರಗಳಲ್ಲಿ ಇಂಧನ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಹೇಳಿವೆ.
ಕಲ್ಲಿದ್ದಲು ಮತ್ತು ಅನಿಲ ಪೂರೈಕೆ ಪ್ರಮಾಣವನ್ನು ಹೆಚ್ಚಿಸುವಂತೆ ಕೋರಿ ಪಂಜಾಬ್ ಮುಖ್ಯಮಂತ್ರಿ ಚರಣ್ ಸಿಂಗ್ ಚನ್ನಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಕಲ್ಲಿದ್ದಲು ಕೊರತೆ ಸಮಸ್ಯೆ ಬಗೆಹರಿಸುವುದಕ್ಕೆ ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.












Click it and Unblock the Notifications