ಮತ್ತೊಬ್ಬ ಕಾರ್ಮಿಕನ ಮೇಲೆ ಉಗ್ರರ ಗುಂಡಿನ ದಾಳಿ: ರಾಜಭವನದಲ್ಲಿಂದು ಸಭೆ
ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಬಟ್‌ಗುಂಡ್‌ನಲ್ಲಿ ಮತ್ತೊಬ್ಬ ಕಾರ್ಮಿಕನ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಕಾರ್ಮಿಕ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಉತ್ತರ ಪ್ರದೇಶದ ಶುಭಂ ಕುಮಾರ್ (19) ಗಾಯಗೊಂಡ ವ್ಯಕ್ತಿ. ಈ ಘಟನೆಯ ನಂತರ ಪೊಲೀಸರು ಆ ಪ್ರದೇಶದಲ್ಲಿ ಉಗ್ರರಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಮತ್ತೊಂದೆಡೆ ಶ್ರೀನಗರದ ಗುನ್‌ಬಾಗ್ ಪ್ರದೇಶದಲ್ಲಿ ಕಾಶ್ಮೀರೇತರ ಯುವಕನ ಶವ ಪತ್ತೆಯಾಗಿದೆ. ಪೊಲೀಸರು ಈ ವ್ಯಕ್ತಿಯನ್ನು ಬಂಗಾಳದ ನಿವಾಸಿ ಎಂಡಿ ಜಾಹುದ್ ಎಂದು ಗುರುತಿಸಿದ್ದಾರೆ. ಕಳೆದ ಒಂದು ವಾರದಲ್ಲಿ ಕಾಶ್ಮೀರೇತರರ ಮೇಲೆ ನಡೆದ ಮೂರನೇ ದಾಳಿ ಇದಾಗಿದೆ. ಇದಕ್ಕೂ ಮೊದಲು, ಅಕ್ಟೋಬರ್ 20 ರಂದು ಗಂದರ್‌ಬಾಲ್ ಮತ್ತು ಅಕ್ಟೋಬರ್ 18 ರಂದು ಶೋಪಿಯಾನ್‌ನಲ್ಲಿ ಭಯೋತ್ಪಾದಕರು ಹತ್ಯೆಯನ್ನು ನಡೆಸಿದ್ದರು.

ನಿರಂತರ ದಾಳಿ ಹಿನ್ನೆಲೆಯಲ್ಲಿ ಇಂದು ರಾಜಭವನದಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದೆ. ಇದರಲ್ಲಿ ನಾರ್ತ್ ವಿಂಗ್ ಕಮಾಂಡರ್, ಜಮ್ಮು ಮತ್ತು ಕಾಶ್ಮೀರ ಡಿಜಿಪಿ, ಕಾರ್ಪ್ಸ್ ಕಮಾಂಡರ್ ಮತ್ತು ಗುಪ್ತಚರ ಏಜೆನ್ಸಿಗಳ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಒಂದು ವಾರದೊಳಗೆ ಭಯೋತ್ಪಾದಕರಿಂದ 3 ದಾಳಿಗಳು ನಡೆದಿದ್ದು 8 ಜನರು ಸಾವನ್ನಪ್ಪಿದ್ದಾರೆ. ಅಕ್ಟೋಬರ್ 20ರ ರಾತ್ರಿ ಜಮ್ಮು ಮತ್ತು ಕಾಶ್ಮೀರದ ಗಂದರ್‌ಬಾಲ್‌ನಲ್ಲಿ ನಡೆದ ದಾಳಿಯಲ್ಲಿ, ಕಾಶ್ಮೀರದ ಒಬ್ಬ ವೈದ್ಯ, ಎಂಪಿಯ ಇಂಜಿನಿಯರ್ ಮತ್ತು ಪಂಜಾಬ್ ಹಾಗೂ ಬಿಹಾರದ 5 ಕಾರ್ಮಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದರು.
ಇದರ ಹೊಣೆಯನ್ನು ಲಷ್ಕರ್ ಸಂಘಟನೆ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ವಹಿಸಿಕೊಂಡಿದೆ. ಬುಧವಾರ ಈ ದಾಳಿಯಲ್ಲಿ ಭಾಗಿಯಾಗಿರುವ ಉಗ್ರನ ಚಿತ್ರ ಬಹಿರಂಗವಾಗಿದೆ. ಕೈಯಲ್ಲಿ AK-47 ನಂತಹ ರೈಫಲ್ ಅನ್ನು ಹೊತ್ತ ಭಯೋತ್ಪಾದಕನು ಕಟ್ಟಡವನ್ನು ಪ್ರವೇಶಿಸುತ್ತಿರುವುದು ಕಂಡು ಬಂದಿದೆ.
ಇಂದು ನಡೆದ ದಾಳಿಯ ಮಾಸ್ಟರ್ ಮೈಂಡ್ ಟಿಆರ್‌ಎಫ್ ಮುಖ್ಯಸ್ಥ ಶೇಖ್ ಸಜ್ಜದ್ ಗುಲ್ ಎಂದು ಮೂಲಗಳು ತಿಳಿಸಿವೆ. ಉಗ್ರರ ದಾಳಿಯಲ್ಲಿ ಮೃತಪಟ್ಟ ಕಾರ್ಮಿಕ ಕೇಂದ್ರ ಸರ್ಕಾರದ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದರು. ದಾಳಿಯ ಹೊಣೆಯನ್ನು ಲಷ್ಕರ್-ಎ-ತೊಯ್ಬಾ ಸಂಘಟನೆಯ ಟಿಆರ್‌ಎಫ್ ಮುಖ್ಯಸ್ಥ ಶೇಖ್ ಸಜ್ಜದ್ ವಹಿಸಿಕೊಂಡಿದ್ದಾನೆ. ವರದಿಗಳ ಪ್ರಕಾರ, ಕಳೆದ ಒಂದೂವರೆ ವರ್ಷಗಳಲ್ಲಿ TRF ತನ್ನ ತಂತ್ರವನ್ನು ಬದಲಾಯಿಸಿದೆ. ಈ ಹಿಂದೆ ಟಿಆರ್‌ಎಫ್ ಕಾಶ್ಮೀರ ಪಂಡಿತರನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡುತ್ತಿತ್ತು. ಈಗ ಈ ಸಂಘಟನೆಯು ಕಾಶ್ಮೀರೇತರರು ಮತ್ತು ಸಿಖ್ಖರನ್ನು ಗುರಿಯಾಗಿಸಿಕೊಂಡು ಕೊಲ್ಲುತ್ತಿದೆ.
370 ಅನ್ನು ತೆಗೆದುಹಾಕಿದ ನಂತರ ಟಿಆರ್‌ಎಫ್ ಸಕ್ರಿಯ
370 ಅನ್ನು ತೆಗೆದುಹಾಕಿದ ನಂತರ ಟಿಆರ್‌ಎಫ್ ಸಕ್ರಿಯವಾಗಿದೆ. ಟಿಆರ್‌ಎಫ್ ಭಾರತದಲ್ಲಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲಾಗಿದೆ. ಟಿಆರ್‌ಎಫ್ ಅನ್ನು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಲಷ್ಕರ್ ಸೃಷ್ಟಿಸಿದೆ. ಲಷ್ಕರ್ ಮತ್ತು ಜೈಶ್ ಉಗ್ರಗಾಮಿಗಳನ್ನು ಒಟ್ಟುಗೂಡಿಸಿ ಇದನ್ನು ರಚಿಸಲಾಗಿದೆ. ಈ ಸಂಘಟನೆ ಕಾಶ್ಮೀರಿಗಳು, ಕಾಶ್ಮೀರಿ ಪಂಡಿತರು ಮತ್ತು ಹಿಂದೂಗಳ ಹತ್ಯೆಯ ಅನೇಕ ಘಟನೆಗಳಲ್ಲಿ ಭಾಗಿಯಾಗಿದೆ. 2019 ರಲ್ಲಿ ಜಮ್ಮು ಮತ್ತು ಕಾಶ್ಮೀರದಿಂದ ಸೆಕ್ಷನ್ 370 ಅನ್ನು ತೆಗೆದುಹಾಕಿದ ನಂತರ ಟಿಆರ್‌ಎಫ್ ಹೆಚ್ಚು ಸಕ್ರಿಯವಾಗಿದೆ.
ಟಿಆರ್‌ಎಫ್ ನ ಉದ್ದೇಶ:
2020ರ ನಂತರ ಟಿಆರ್‌ಎಫ್ ಹತ್ಯೆಯ ಹೆಚ್ಚಿನ ಘಟನೆಗಳಲ್ಲಿ ತೊಡಗಿಸಿಕೊಂಡಿದೆ. ಕಾಶ್ಮೀರಿ ಪಂಡಿತರು, ವಲಸೆ ಕಾರ್ಮಿಕರು, ಸರ್ಕಾರಿ ಅಧಿಕಾರಿಗಳು, ನಾಯಕರು ಮತ್ತು ಭದ್ರತಾ ಪಡೆಗಳನ್ನು ಗುರಿಯಾಗಿಸಿ ಹತ್ಯೆ ಮಾಡುತ್ತಿದೆ. 370 ಅನ್ನು ತೆಗೆದುಹಾಕಿದ ನಂತರ, ಕಾಶ್ಮೀರಿ ಪಂಡಿತರ ಸರ್ಕಾರದ ಯೋಜನೆಗಳು ಮತ್ತು ಪುನರ್ವಸತಿ ಯೋಜನೆಗಳನ್ನು ಹಾಳು ಮಾಡುವುದು ಮತ್ತು ಅಸ್ಥಿರತೆಯನ್ನು ಹರಡುವುದು ಇದರ ಉದ್ದೇಶವಾಗಿದೆ. ಇದರ ಉದ್ದೇಶ ಭಾರತೀಯರು ಅಥವಾ ಗಡಿ ಭಾಗದ ಸೈನ್ಯ, ಸ್ಥಳೀಯರನ್ನು ಕೊಲ್ಲುವುದಾಗಿದೆ.












Click it and Unblock the Notifications