ಪ್ರಧಾನಿ ಮೋದಿ, ಸಿಎಂ ಯೋಗಿ ಸೇರಿ ಗಣ್ಯರ ಹತ್ಯೆಗೆ ಸಂಚು: ಚಿಕ್ಕಬಳ್ಳಾಪುರದಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ
ರಾಜ್ಯದಲ್ಲಿ ಭಾರಿ ವಿಧ್ವಂಸಕ ಕೃತ್ಯ ಎಸಗಲು ಹಾಗೂ ದೇಶದ ಪ್ರಮುಖ ರಾಜಕೀಯ ನಾಯಕರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಇಬ್ಬರು ಶಂಕಿತ ಭಯೋತ್ಪಾದಕರನ್ನ ಚಿಕ್ಕಬಳ್ಳಾಪುರ ನಗರ ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗುಪ್ತಚರ ಇಲಾಖೆಯ ಖಚಿತ ಮಾಹಿತಿಯ ಮೇರೆಗೆ ನಡೆದ ಈ ಕಾರ್ಯಾಚರಣೆಯು ರಾಜ್ಯದಲ್ಲಿ ನಡೆಯಲಿದ್ದ ಬಹುದೊಡ್ಡ ಅನಾಹುತವೊಂದನ್ನ ತಪ್ಪಿಸಿದೆ ಎನ್ನಲಾಗಿದೆ.

ಪ್ರಧಾನಿ ಮೋದಿ ಸೇರಿ ಗಣ್ಯರ ಹತ್ಯೆಗೆ ಸ್ಕೆಚ್
ಬಂಧಿತ ಆರೋಪಿಗಳು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ರಾಜ್ಯದ ಪ್ರಮುಖ ಬಿಜೆಪಿ ನಾಯಕರಾದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನ ಹತ್ಯೆ ಮಾಡಲು ವ್ಯವಸ್ಥಿತ ಯೋಜನೆ ರೂಪಿಸಿದ್ದರು ಎಂಬ ಆಘಾತಕಾರಿ ಅಂಶ ಪೊಲೀಸ್ ತನಿಖೆಯಿಂದ ಬಯಲಾಗಿದೆ.
ಉಗ್ರವಾದಿ ಚಟುವಟಿಕೆಗಳಿಗೆ ಭಾರಿ ಪ್ರಮಾಣದ ಹಣ ಹೊಂದಿಸಲು ಉದ್ಯಮಿಗಳು ಹಾಗೂ ಶ್ರೀಮಂತರನ್ನು ಅಪಹರಿಸಿ, ಸುಲಿಗೆ ಮಾಡುವ ಮೂಲಕ ದೇಶಾದ್ಯಂತ ಗೊಂದಲ ಸೃಷ್ಟಿಸಲು ಇವರು ಪ್ಲಾನ್ ಮಾಡಿದ್ದರು.
ಟೆಲಿಗ್ರಾಂ ಆ್ಯಪ್ ತನಿಖೆ ಮೂಲಕ ಸಿಕ್ಕಿಬಿದ್ದ ಮಾಸ್ಟರ್ ಮೈಂಡ್
ಈ ಕೃತ್ಯದ ಪ್ಲಾನ್‌ನ ರೂವಾರಿ ಎನ್ನಲಾದ ಚಿಕ್ಕಬಳ್ಳಾಪುರದ ಬಾಪೂಜಿನಗರದ ನಿವಾಸಿ ಶಬ್ಬೀರ್‌ನನ್ನ ಪೊಲೀಸರು ಮೊದಲಿಗೆ ಬಂಧಿಸಿದ್ದಾರೆ. ಈತ ಟೆಲಿಗ್ರಾಂ ಆ್ಯಪ್‌ನಲ್ಲಿ ಒಂದು ಗ್ರೂಪ್ ಮಾಡಿಕೊಂಡು, ಅದರಲ್ಲಿ ಪ್ರತಿದಿನ ಭಯೋತ್ಪಾದಕ ಕೃತ್ಯಗಳ ಬಗ್ಗೆ ಚರ್ಚೆ ನಡೆಸುತ್ತಿದ್ದ. ದೇಶದ ವಿವಿಧ ಭಾಗಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸುವುದು ಹಾಗೂ ಅದಕ್ಕಾಗಿ ಆರ್ಥಿಕ ಸಂಪನ್ಮೂಲ ಕಲೆಹಾಕುವ ಬಗ್ಗೆ ಈ ಗ್ರೂಪ್‌ನಲ್ಲಿ ತಂತ್ರ ಹೆಣೆಯಲಾಗುತ್ತಿತ್ತು.
ಶಬ್ಬೀರ್ ಇನ್‌ಸ್ಟಾಗ್ರಾಮ್‌ನಲ್ಲಿ ಉಗ್ರಗಾಮಿ ವಿಚಾರಧಾರೆಗಳ ಪೋಸ್ಟ್‌ಗಳಿಗೆ ಲೈಕ್ ಮತ್ತು ಕಾಮೆಂಟ್ ಮಾಡುವ ಮೂಲಕ ಬೆಂಬಲ ಸೂಚಿಸುತ್ತಿದ್ದ. ಈತನ ಚಟುವಟಿಕೆಗಳ ಬಗ್ಗೆ ಅನುಮಾನಗೊಂಡ ರಾಜ್ಯ ಗುಪ್ತಚರ ಇಲಾಖೆ, ಆತನ ಸಾಮಾಜಿಕ ಜಾಲತಾಣಗಳ ಖಾತೆಗಳ ಮೇಲೆ ಹದ್ದಿನ ಕಣ್ಣಿಟ್ಟಿತ್ತು. ಈ ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಚಿಕ್ಕಬಳ್ಳಾಪುರ ಪೊಲೀಸರು ಶಬ್ಬೀರ್‌ನನ್ನು ಬಂಧಿಸಿ, ಮೊಬೈಲ್ ಪರಿಶೀಲಿಸಿದಾಗ ಈ ಭಯಾನಕ ಪ್ಲಾನ್ ಬೆಳಕಿಗೆ ಬಂದಿದೆ.
ಮತ್ತೊಬ್ಬ ಆರೋಪಿಯ ಬಂಧನ
ಶಬ್ಬೀರ್ ನಡೆಸುತ್ತಿದ್ದ ವಾಟ್ಸಾಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳಲ್ಲಿ ಬಿಹಾರ ಮೂಲದ ಸಲಾಮಿನ್ ಎಂಬಾತ ಕೂಡ ಸಕ್ರಿಯನಾಗಿದ್ದ. ಶಬ್ಬೀರ್ ಹಂಚಿಕೊಳ್ಳುತ್ತಿದ್ದ ಉಗ್ರವಾದಿ ಪೋಸ್ಟ್‌ಗಳನ್ನು ಸಲಾಮಿನ್ ಇತರರಿಗೆ ಫಾರ್ವರ್ಡ್ ಮಾಡುತ್ತಿದ್ದ. ವೃತ್ತಿಯಲ್ಲಿ ರಸ್ತೆ ಕಾಮಗಾರಿ ಕಾರ್ಮಿಕನಾಗಿದ್ದ ಸಲಾಮಿನ್, ತನ್ನ ಅಣ್ಣನ ಜೊತೆ ಇತ್ತೀಚೆಗಷ್ಟೇ ಹಾವೇರಿಯಿಂದ ಹಾಸನ ಜಿಲ್ಲೆಯ ಅರಕಲಗೂಡಿಗೆ ಕಾಂಟ್ರಾಕ್ಟ್ ಕೆಲಸದ ನಿಮಿತ್ತ ಬಂದಿದ್ದ.
ಶುಕ್ರವಾರ ಅರಕಲಗೂಡಿನ ಸಂತೇಮಾರು ವೃತ್ತದಲ್ಲಿ ಟೀ ಕುಡಿಯುತ್ತಿದ್ದಾಗ ಚಿಕ್ಕಬಳ್ಳಾಪುರ ಪೊಲೀಸರು ಆತನನ್ನ ಅರೆಸ್ಟ್ ಮಾಡಿದ್ದಾರೆ. ಪ್ರಸ್ತುತ ಪೊಲೀಸರು ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 113 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಈ ಜಾಲದಲ್ಲಿರುವ ಇತರ ಸದಸ್ಯರ ಪತ್ತೆಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.
ರಾಜಕೀಯ ನಾಯಕರ ಪ್ರತಿಕ್ರಿಯೆ: ಭದ್ರತೆಗೆ ಆಗ್ರಹ
ಈ ಆಘಾತಕಾರಿ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ಎಂಎಲ್‌ಸಿ ಸಿ.ಟಿ.ರವಿ, "ನಾನು ಸದಾ ಭಯೋತ್ಪಾದನೆ ಮತ್ತು ಲವ್ ಜಿಹಾದ್ ವಿರುದ್ಧ ಕಟುವಾಗಿ ಮಾತನಾಡುತ್ತೇನೆ. ಹಾಗಾಗಿ ನನ್ನನ್ನು ಟಾರ್ಗೆಟ್ ಮಾಡಲಾಗಿದೆ. ಸಾವಿಗೆ ಹೆದರಿ ಓಡಿಹೋಗುವ ಹೇಡಿ ನಾನಲ್ಲ, ನನ್ನ ಹೋರಾಟ ಮುಂದುವರಿಯುತ್ತದೆ," ಎಂದಿದ್ದಾರೆ ಎಂದು ಕನ್ನಡಪ್ರಭ ವರದಿ ಮಾಡಿದೆ.
ಮತ್ತೊಂದೆಡೆ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, "ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇಂತಹ ದೇಶದ್ರೋಹಿಗಳ ಹಾವಳಿ ಹೆಚ್ಚಾಗಿದೆ. ಹತ್ಯೆ ಬೆದರಿಕೆ ಎದುರಿಸುತ್ತಿರುವ ನಮ್ಮ ನಾಯಕರಿಗೆ ಸರ್ಕಾರ ತಕ್ಷಣವೇ ಸೂಕ್ತ ಭದ್ರತೆ ಒದಗಿಸಬೇಕು," ಎಂದು ಆಗ್ರಹಿಸಿದ್ದಾರೆ.


Click it and Unblock the Notifications
