Terror Attack: ಮದುವೆಯಾದ 7 ದಿನದಲ್ಲಿ ಪತ್ನಿ ಎದುರು ಪತಿ ಮೇಲೆ ಗುಂಡಿನ ದಾಳಿ
ಚಂಡೀಗಢ ಏಪ್ರಿಲ್ 23: ಮದುವೆ ಆಗಿ 7 ದಿನದಲ್ಲಿ ಕೊನೆಯವರೆಗೂ ಜೊತೆಯಲ್ಲಿ ಇರಬೇಕಾಗಿದ್ದ ಪತಿಯನ್ನ ಪತ್ನಿಯ ಕಣ್ಣೆದುರು ಗುಂಡಿಕ್ಕಿ ಕೊಲ್ಲುವುದನ್ನು ಯಾವ ಹೆಣ್ಣು ನೋಡಲು ಸಾಧ್ಯ. ಇಂತಹ ಸಂದರ್ಭ ಯಾವ ಹೆಣ್ಣಿಗೂ ಕೂಡ ಬರಬಾರದು. ಇಂತಹ ಕೃತ್ಯ ಎಸಗುವವರನ್ನು ಕಂಡ ಕಂಡಲ್ಲಿ ಗುಂಡು ಹಾರಿಸಿ ಕೊಲ್ಲಬೇಕು. ಹೀಗಂತ ಇಡೀ ದೇಶವೇ ಸಾರಿ ಸಾರಿ ಹೇಳುತ್ತಿದೆ. ನಮ್ಮ ದೇಶದ ಜನರ ಪ್ರಾಣವನ್ನು ತೆಗೆದವರ ಪ್ರಾಣವನ್ನು ನೀವು ತೆಗೆಯಿರಿ ಎಂದು ಇಡೀ ದೇಶವೇ ಕೂಗಿ ಹೇಳುತ್ತಿದೆ.
ಹೌದು ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಎಲ್ಲೆ ಮೀರಿದೆ. ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ಹೇಡಿತನದ ದಾಳಿಯಲ್ಲಿ ಹಲವಾರು ಜನ ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರವಾಸಿಗರನ್ನೇ ಗುರಿಯಾಗಿಸಿಕೊಂಡು ಭಯೋತ್ಪಾದಕರು ಗುಂಡಿನ ದಾಳಿ ಮಾಡಿದ್ದು ಭಾರತೀಯ ನೌಕಾಪಡೆಯ ಅಧಿಕಾರಿ ವಿನಯ್ ನರ್ವಾಲ್ ಈ ದಾಳಿಯಲ್ಲಿ ಉಸಿರು ಚೆಲ್ಲಿದ್ದಾರೆ. ಇನ್ನೂ ಬಾಳಿ ಬದುಕಬೇಕಿದ್ದ ವಿನಯ್ ನರ್ವಾಲ್ ಅವರನ್ನು ಪತ್ನಿ ಎದುರು ಗುಂಡಿಕ್ಕಿ ಕೊಲ್ಲಲಾಗಿದೆ.

ಕೊಚ್ಚಿಯಲ್ಲಿ ನಿಯೋಜನೆಗೊಂಡಿದ್ದ ಭಾರತೀಯ ನೌಕಾಪಡೆಯ ಅಧಿಕಾರಿ ವಿನಯ್ ನರ್ವಾಲ್ ಅವರು ಏಪ್ರಿಲ್ 16 ರಂದು ವಿವಾಹವಾದರು. ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ಪತ್ನಿಯೊಂದಿಗೆ ಪ್ರವಾಸದಲ್ಲಿ ಇದ್ದಾಗ ಅವರ ಮೇಲೆ ಉಗ್ರರು ಗುಂಡು ಹಾರಿಸಿ ಅಟ್ಟಹಾಸ ಮೆರೆದಿದ್ದಾರೆ.
ಭಯೋತ್ಪಾದಕರ ಈ ದಾಳಿಯಲ್ಲಿ 16 ಜನರು ಸಾವನ್ನಪ್ಪಿದ್ದು, ಹೈದರಾಬಾದ್‌ನಲ್ಲಿ ನಿಯೋಜಿತವಾಗಿದ್ದ ಐಬಿ ಸೆಕ್ಷನ್ ಅಧಿಕಾರಿ ಮನೀಶ್ ರಂಜನ್ ಕೂಡ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಹೀಗೆ ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ವಿನಯ್ ನರ್ವಾಲ್ ಮೂಲತಃ ಕರ್ನಾಲ್ ಜಿಲ್ಲೆಯ ಭುಸ್ಲಿ ಗ್ರಾಮದ ನಿವಾಸಿ. ಅವರ ಕುಟುಂಬ ಸೆಕ್ಟರ್ -7 ರಲ್ಲಿ ವಾಸಿಸುತ್ತಿದೆ. ಬಿ.ಟೆಕ್ ಮಾಡಿದ ನಂತರ ಅವರು ಭಾರತೀಯ ನೌಕಾಪಡೆಗೆ ಸೇರಿದರು. 3 ವರ್ಷಗಳ ಹಿಂದೆ ಲೆಫ್ಟಿನೆಂಟ್ ಆಗಿ ನೌಕಾಪಡೆಗೆ ಸೇರಿದರು. ಕೊಚ್ಚಿಯಲ್ಲಿ ಅವರ ಕರ್ತವ್ಯವಿತ್ತು. ವಿನಯ್ ಅವರ ತಂದೆ ಪಾಣಿಪತ್‌ನ ಕಸ್ಟಮ್ಸ್ ಇಲಾಖೆಯಲ್ಲಿ ಸೂಪರಿಂಟೆಂಡೆಂಟ್ ಆಗಿ ನೇಮಕಗೊಂಡಿದ್ದಾರೆ. ಅಜ್ಜ ಹವಾ ಸಿಂಗ್ ಹರಿಯಾಣ ಪೊಲೀಸ್ ಆಗಿದ್ದಾರೆ.
ವಿನಯ್ ನರ್ವಾಲ್ ಕುಟುಂಬದಲ್ಲಿ ಬಹುತೇಕ ಎಲ್ಲರೂ ಕೂಡ ಒಂದೊಳ್ಳೆ ಹುದ್ದೆಯಲ್ಲಿ ಇದ್ದಾರೆ. ಹರಿಯಾಣದ ಲೆಫ್ಟಿನೆಂಟ್ ಅಧಿಕಾರಿಯಾದ ಬಳಿಕ ವಿನಯ್ ನರ್ವಾಲ್ ಅವರು ಏಪ್ರಿಲ್ 16 ರಂದು ಮದುವೆ ಮಾಡಿಕೊಂಡರು. ನಂತರ ಪತ್ನಿಯೊಂದಿಗೆ ಪಹಲ್ಗಾಮ್‌ಗೆ ತೆರಳಿದ್ದರು. ಈ ವೇಳೆ ಬಂದ ಉಗ್ರರು ಅವರ ಹೆಸರು ಕೇಳಿದ್ದಾರೆ. ಅವರು ಹಿಂದೂ ಎಂದು ಗೊತ್ತಾದ ಬಳಿಕ ಶೂಟ್ ಮಾಡಿ ಕಾಲ್ಕಿತ್ತಿದ್ದಾರೆ.
ವಿನಯ್ ನರ್ವಾಲ್ ಅವರ ಪತ್ನಿ ಈ ಬಗ್ಗೆ ಹೇಳಿಕೊಂಡಿದ್ದಾರೆ. 'ನಾನು ನನ್ನ ಪತಿಯೊಂದಿಗೆ ಭೇಲ್ಪುರಿ ತಿನ್ನುತ್ತಿದ್ದೆ, ಅಷ್ಟರಲ್ಲಿ ಒಬ್ಬ ವ್ಯಕ್ತಿ ಬಂದನು. ನೀವು ಮುಸ್ಲಿಂ ಅಥವಾ ಹಿಂದೂನಾ' ಎಂದು ಹೇಳುತ್ತಿದ್ದಾರೆ. ನನ್ನ ಪತಿ ಮುಸ್ಲಿಂ ಅಲ್ಲ ಎಂದು ಹೇಳಿದರು. ನಂತರ ಅವನು ಪತಿಗೆ ಗುಂಡು ಹಾರಿಸಿದ. ಪ್ರಸ್ತುತ ವಿನಯ್ ಕುಟುಂಬ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿದೆ.
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಕಾಶ್ಮೀರದಲ್ಲಿನ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ರೀನಗರಕ್ಕೆ ಆಗಮಿಸಿದ್ದಾರೆ. ಪ್ರವಾಸಿಗರ ಮೇಲೆ ದಾಳಿ ನಡೆದ ಕೆಲವು ಗಂಟೆಗಳ ನಂತರ ಶಾ ಶ್ರೀನಗರ ತಲುಪಿದರು ಮತ್ತು ವಿಮಾನ ನಿಲ್ದಾಣದಿಂದ ನೇರವಾಗಿ ರಾಜಭವನಕ್ಕೆ ಹೋದರು.
ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ನಳಿನ್ ಪ್ರಭಾತ್ ಅವರು ಗೃಹ ಸಚಿವರು ಸ್ಥಳಕ್ಕೆ ಆಗಮಿಸಿದಾಗ ಘಟನೆಯ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ ಮೋಹನ್ ಮತ್ತು ಗುಪ್ತಚರ ಬ್ಯೂರೋ ನಿರ್ದೇಶಕ ತಪನ್ ದೇಕಾ ಉಪಸ್ಥಿತರಿದ್ದರು.
ಕಾಶ್ಮೀರದ ಪಹಲ್ಗಾಮ್ ಪಟ್ಟಣದ ಪ್ರಸಿದ್ಧ ಮೈದಾನದಲ್ಲಿ ಮಂಗಳವಾರ ಮಧ್ಯಾಹ್ನ ಭಯೋತ್ಪಾದಕರು ಗುಂಡು ಹಾರಿಸಿ 26 ಜನರನ್ನು ಕೊಂದಿದ್ದಾರೆ. ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಪ್ರವಾಸಿಗರಾಗಿದ್ದರು. ಈ ದಾಳಿಯನ್ನು 2019 ರ ಪುಲ್ವಾಮಾ ದಾಳಿಯ ನಂತರ ಕಣಿವೆಯಲ್ಲಿ ನಡೆದ ಅತ್ಯಂತ ಮಾರಕ ದಾಳಿ ಎನ್ನಲಾಗಿದೆ. ಮೃತರಲ್ಲಿ ಇಬ್ಬರು ವಿದೇಶಿಯರು ಮತ್ತು ಇಬ್ಬರು ಸ್ಥಳೀಯರು ಸೇರಿದ್ದಾರೆ.












Click it and Unblock the Notifications