Telangana: ತೆಲುಗು ಪತ್ರಿಕೆಗಳಲ್ಲಿ ಕರ್ನಾಟಕ ಗ್ಯಾರಂಟಿಗಳ ಜಾಹೀರಾತಿಗೆ ಚುನಾವಣೆ ಆಯೋಗ ಬ್ರೇಕ್
ಹೈದರಾಬಾದ್, ನವೆಂಬರ್ 28: ತೆಲಂಗಾಣದಲ್ಲಿ ಗ್ಯಾರಂಟಿ ಯೋಜನೆಗಳ ಹವಾ ಎಬ್ಬಿಸಿರುವ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಆಗಿದೆ. ಹೌದು, ಕರ್ನಾಟಕ ರಾಜ್ಯದ ಮಾದರಿಯಲ್ಲಿ ತೆಲಂಗಾಣದಲ್ಲಿ ಗ್ಯಾರಂಟಿ ಯೋಜನೆ ಜಾರಿ ಮಾಡುವುದಾಗಿ ಹೇಳಿದ್ದ ಕಾಂಗ್ರೆಸ್, ಅದಕ್ಕೆ ಸಂಬಂಧಿಸಿಂತೆ ತೆಲುಗು ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ನೀಡಿತ್ತು. ಇದಕ್ಕೆ ಚುನಾವಣೆ ಆಯೋಗ ತಡೆ ನೀಡಿದ್ದಲ್ಲದೇ ಕಾಂಗ್ರೆಸ್ ಎಚ್ಚರಿಕೆ ಸಹ ನೀಡಿದೆ.
ಕರ್ನಾಟಕದಂತೆ ತೆಲಂಗಾಣ ವಿಧಾನಸಭಾ ಚುನಾವಣೆಗೂ (Telangana Assembly Election 2023) ಮುನ್ನ ಆರು ಗ್ಯಾರಂಟಿಗಳನ್ನು ಕಾಂಗ್ರೆಸ್ ಘೋಷಿಸಿದೆ. ಇದಕ್ಕೆ ಸಂಬಂಧಿಸಿದಂತೆ ತೆಲುಗಿನ ಸಾಕ್ಷಿ, ಆಂಧ್ರಜ್ಯೋತಿ, ಈ ನಾಡು ಪತ್ರಿಕೆಗಳಲ್ಲಿ ಮೊದಲ ಪೇಜಿನಲ್ಲಿ ದೊಡ್ಡ ಜಾಹೀರಾತುಗಳನ್ನು ನೀಡಿತ್ತು. ಕರ್ನಾಟಕದ ಹಣ ತೆಲಂಗಾಣದಲ್ಲಿ ಪೋಲಾಗುತ್ತಿದೆ ಎಂದು ಕಾಂಗ್ರೆಸ್ ನಡೆಯನ್ನು ಬಿಜೆಪಿ ವಿರೋಧಿಸಿತ್ತು.

ಕರ್ನಾಟಕ ರಾಜ್ಯದ ಸಚಿವರನ್ನು ತೆಲಂಗಾಣದಲ್ಲಿ ಚುನಾವಣೆಗಾಗಿ ನಿಯೋಜಿಸಿರುವ ಪಕ್ಷ ಮತ್ತು ಸಿಎಂ ಸಿದ್ದರಾಮಯ್ಯ ಅವರು, ಇದೀಗ ಇಲ್ಲಿನ ಜನರ ತೆರಿಗೆ ಹಣದಲ್ಲಿ ತೆಲುಗು ರಾಜ್ಯದಲ್ಲಿ ಜಾಹೀರಾತು ನೀಡಿವೆ. ಇದಕ್ಕೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಕರ್ನಾಟಕವನ್ನು ಆರ್ಥಿಕವಾಗಿ ದಿವಾಳಿ ಮಾಡಲಾಗಿದೆ ಎಂದು ಆರೋಪಿಸಿದ್ದರು. ಜೊತೆಗೆ ಬಿಜೆಪಿ ಚುನಾವಣೆ ಆಯೋಗಕ್ಕೆ ದೂರು ನೀಡಿತ್ತು.
ಗ್ಯಾರಂಟಿ ಜಾಹೀರಾತಿನ ಮೂಲಕ ಗೆಲ್ಲಲು ತಂತ್ರ
ಇದೀಗ ಚುನಾವಣೆ ಆಯೋಗವು ಕಾಂಗ್ರೆಸ್ ತೆಲಂಗಾಣದ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡದಂತೆ ಕರ್ನಾಟಕ ಕಾಂಗ್ರೆಸ್‌ಗೆ ತಾಕೀತು ಮಾಡಿದೆ. ಸದ್ಯ ಸೋಮವಾರ ಇಡೀ ದಿನ ಕರ್ನಾಟಕ ಸರ್ಕಾರದ ಜಾಹೀರಾತಿನದ್ದೆ ಸುದ್ದಿ ಆಗಿತ್ತು. ಜಾಹೀರಾತು ನೀಡಿ ನಾವು ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನು ಸಾಕಾರಗೊಳಿಸಿದ್ದೇವೆ. ಆರೇ ತಿಂಗಳಲ್ಲಿ ನೀಡಿದ ಭರವಸೆ ಪೂರೈಸಿದ್ದೇವೆ ಎಂದು ಚುನಾವಣೆ ಗೆಲ್ಲುವ ತಂತ್ರ ಹೂಡಿದೆ.
ಇದಷ್ಟೇ ಅಲ್ಲದೇ ಅಲ್ಪಸಂಖ್ಯಾತ ಸಮುದಾಯದವರ ಓಲೈಕೆಗೆ ಕರ್ನಾಟಕ ಸರ್ಕಾರ ಅರ್ಹರನ್ನು ತೆಲಂಗಾಣದಲ್ಲಿ ಪ್ರಚಾರ ಕಾರ್ಯದಲ್ಲಿ ನಿಯೋಜಿಸಿದೆ. ಕರ್ನಾಟಕ ಮಾದರಿಯಲ್ಲಿಯೇ ತೆಲಂಗಾಣದಲ್ಲಿ ಗೆಲ್ಲಲು ಯೋಜನೆ ರೂಪಿಸಿದೆ.

ಅಲ್ಪಸಂಖ್ಯಾತರ ಆಕರ್ಷಣೆ ಸಚಿವರ ನಿಯೋಜನೆ
ಕರ್ನಾಟಕದ ಬಿ.ನಾಗೇಂದ್ರ, ಬಿಝಡ್ ಜಮೀರ್ ಅಹ್ಮದ್, ರಾಮಲಿಂಗಾ ರೆಡ್ಡಿ, ಡಿ.ಸುಧಾಕರ್, ಎನ್.ಎಸ್.ಬೋಸ್‌ರಾಜು ಸೇರಿದಂತೆ ಅನೇಕರು ಮತದಾರರನ್ನು ಸಳೆಯುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಪ್ರಮುಖ ನಾಯಕರು ತೆಲಂಗಾಣದ ವಿವಿಧ ಕ್ಷೇತ್ರಗಳಲ್ಲಿ ಗ್ಯಾರಂಟಿಗಳ ಮೇಲೆಯೆ ಪ್ರಚಾರ ಮಾಡಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿಗಳ ಮೂಲಕ ಭಾರತ್ ರಾಷ್ಟ್ರೀಯ ಸಮಿತಿ (ಬಿಆರ್‌ಎಸ್) ಗೆ ಹೊಡೆತ ನೀಡಲು ಮುಂದಾಗಿದೆ. ಬಿಆರ್‌ಎಸ್ ಸದ್ಯ ತೆಲಂಗಾಣದಲ್ಲಿ ಆಡಳಿತ ಪಕ್ಷವಾಗಿದ್ದು, ಕೆ ಚಂದ್ರಶೇಖರ್ ರಾವ್ ಅವರು ಮುಖ್ಯಮಂತ್ರಿ ಆಗಿದ್ದರು. ಅವರು ಇದೀಗ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಇಳಿದಿದ್ದಾರೆ. ಅವರ ವಿರುದ್ಧ ಕಾಮರೆಡ್ಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ರೇವಂತ್ ರೆಡ್ಡಿಯನ್ನು ಕೈಪಡೆ ಅಖಾಡಕ್ಕೆ ಇಳಿಸಿದೆ.
ಬಿಆರ್‌ಎಸ್ ಓಟಕ್ಕೆ ಬ್ರೇಕ್ ಹಾಕುತ್ತಾ ಕಾಂಗ್ರೆಸ್?
ಈ ಹಿಂದೆ ಎರಡು ಭಾರಿ ಅಧಿಕಾರ ಹಿಡಿದಿರುವ ಬಿಆರ್‌ಎಸ್ ಪಕ್ಷ ಮೂರನೇ ಬಾರಿಯೂ ಅಧಿಕಾರ ಹಿಡಿಯುವ ತವಕದಲ್ಲಿದೆ. ಆದರೆ ಈ ಸಲದ ಚುನಾವಣೆಯಲ್ಲಿ ಬಿಆರ್‌ಎಸ್ ಓಟಕ್ಕೆ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು, ಭಾವನಾತ್ಮಕ ತಂತ್ರಗಳು ಬ್ರೇಕ್ ಹಾಕುವ ಸಾಧ್ಯತೆಗಳು ಇವೆ. ಈಗಾಗಲೇ ತೆಲಂಗಾಣ ಚುನಾವಣೆ ಪೂರ್ವ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಲಿದೆ ಎಂದು ತಿಳಿಸಿದೆ. ಸದ್ಯ ಇದೆಲ್ಲದ್ದಕ್ಕೂ ಉತ್ತರ ಸಿಗಲು ಡಿಸೆಂಬರ್ 3ತನಕ ಕಾಯಬೇಕಿದೆ.












Click it and Unblock the Notifications