Telangana Polls: ಕಾಂಗ್ರೆಸ್‌ನಿಂದ ಪ್ರಬಲ ಸ್ಫರ್ಧೆ ಎದುರಿಸುತ್ತಿರುವ ಬಿಆರ್‌ಎಸ್
ಹೈದರಾಬಾದ್, ನವೆಂಬರ್ 29: ಪಂಚರಾಜ್ಯ ಚುನಾವಣೆಗಳ ಪೈಕಿ ತೆಲಂಗಾಣದ ವಿಧಾನಸಭೆ ಚುನಾವಣೆಯತ್ತ ಎಲ್ಲರ ಚಿತ್ತ ಹರಿದಿದೆ. ಕಾರಣ ಅಲ್ಲಿ ಆಡಳಿತ ಪಕ್ಷವಾದ ಭಾರತ್ ರಾಷ್ಟ್ರೀಯ ಸಮಿತಿ (ಬಿಆರ್‌ಎಸ್) ಕಾಂಗ್ರೆಸ್‌ನಿಂದ ಪ್ರಬಲ ಪೈಪೋಟಿ ಎದುರಿಸುತ್ತಿದೆ. ಇತ್ತ ಚುನಾವಣೆ ಪೂರ್ವ ಸಮೀಕ್ಷೆಗಳು ಸಹಿತ ಈ ಭಾರಿ ಕಾಂಗ್ರೆಸ್ ಬಹುಮತ ಪಡೆಯುವುದಾಗಿ ಭವಿಷ್ಯ ನುಡಿದಿವೆ. ಸದ್ಯ ತೆಲಂಗಾಣದಲ್ಲಿನ ಒಟ್ಟು 119 ಕ್ಷೇತ್ರಗಳಲ್ಲಿ ನವೆಂಬರ್ 30 ರಂದು ಚುನಾವಣೆ ನಡೆಯಲಿದೆ.
ಬಿಆರ್‌ಎಸ್ ಮುಖ್ಯಸ್ಥ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ (ಕೆಸಿಆರ್) ಮತ್ತು ಅವರ ಪಕ್ಷವು ಕಾಂಗ್ರೆಸ್‌ನಿಂದ ತೀವ್ರ ಸವಾಲು ಎದುರಿಸುತ್ತಿದೆ. ಮತ್ತೆ ಅಧಿಕಾರ ಹಿಡಿಯಲು ರೈತ ಬಂಧು (ರೈತರಿಗೆ ಹೂಡಿಕೆ ಬೆಂಬಲ), ದಲಿತ ಬಂಧು (ದಲಿತ ಕುಟುಂಬಗಳಿಗೆ ಆರ್ಥಿಕ ನೆರವು), ಕಲ್ಯಾಣ ಲಕ್ಷ್ಮಿ ಮತ್ತು ಶಾದಿ ಮುಬಾರಕ್ (ಮದುವೆ ಬೆಂಬಲ) ಮತ್ತು ಪಿಂಚಣಿ ಯೋಜನೆಗಳನ್ನು ಜಾರಿಯ ಭರವಸೆ ಮೂಲಕ ಮತದಾರರನ್ನು ಆಕರ್ಷಿಸುತ್ತಿದೆ.

ಕರ್ನಾಟಕದಲ್ಲಿ ಭಾರೀ ಬಹುಮತದಿಂದ ಗೆದ್ದು ಬಂದು ಅದರಿಂದ ಉತ್ತೇಜಿತವಾಗಿರುವ ಕಾಂಗ್ರೆಸ್, ತೆಲಂಗಾಣದಲ್ಲಿ ಬದಲಾವಣೆ ತರುವುದಾಗಿ ಘೋಷಿಸಿದೆ. ಈ ಸಂಬಂಧವೇ ಕೆಲವು ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಇದು ಸಹ ಕಾಂಗ್ರೆಸ್ ಕೈ ಹಿಡಿಯುವ ವಿಶ್ವಾಸ ವ್ಯಕ್ತವಾಗುತ್ತಿದೆ. ಅಲ್ಲದೇ ಚುನಾವಣೆಯ ಪೂರ್ವದಲ್ಲಿ, ಅನೇಕ ಬಿಆರ್‌ಎಸ್ ನಾಯಕರು ಕಾಂಗ್ರೆಸ್‌ನತ್ತ ಮುಖಮಾಡಿದ್ದು, ಸಹ ಕಾಂಗ್ರೆಸ್‌ಗೆ ವರದಾನವಾದರೆ, ಕೆಸಿಆರ್‌ಗೆ ಶಾಪವಾಗಿದೆ. ಇದು ಸಹ ಚುನಾವಣೆ ಮೇಲೆ ಪ್ರಭಾವ ಬೀರಲಿದೆ.
ಬಿಜೆಪಿ ಪ್ರಧಾನಿ ಮೇಲೆ ಅವಲಂಬಿತ
ಭಾರತೀಯ ಜನತಾ ಪಕ್ಷವು (ಬಿಜೆಪಿ) ಹಲವು ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಕಳೆದ ಕೆಲವು ವಾರಗಳಿಂದ ರಾಜ್ಯಕ್ಕೆ ಹಲವು ಬಾರಿ ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ನೀಡಿದ್ದು, ಮತದಾರರಲ್ಲಿ ಮನವಿ ಮಾಡಿದ್ದಾರೆ. ಈ ಮೂಲಕ ಬಿಜೆಪಿ ಮತ್ತೆ ಪ್ರಧಾನಿ ಅವರ ವರ್ಚಸ್ಸಿನ ಮೇಲೆ ಅವಲಂಬಿತವಾಗಿದೆ ಎಂಬುದು ಸಾಬೀತಾಗಿದೆ. ಬಿಜೆಪಿ ಹೈದರಾಬಾದ್ ಅನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡುತ್ತೇವೆ. ಭಾರಿ ಬದಲಾವಣೆ ಮಾಡುತ್ತೇವೆ ಎಂದು ಕೆಲವು ಭರವಸೆ ನೀಡಿದೆ. ಈ ಮೂಲಕ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ.

ತೆಲಂಗಾಣದಲ್ಲಿ ಒಟ್ಟು 119 ಕ್ಷೇತ್ರಗಳ ಪೈಕಿ ಬಿಜೆಪಿ 111 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು, ಉಳಿದ ಎಂಟು ಕ್ಷೇತ್ರಗಳನ್ನು ನಟ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷಕ್ಕೆ ಬಿಟ್ಟು ಕೊಟ್ಟಿದೆ.
ಅಸಾದುದ್ದೀನ್ ಓವೈಸಿಯ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಈ ಬಾರಿ 9 ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಇಳಿದಿದೆ. ಹೈದರಾಬಾದ್‌ನ ಹಳೆಯ ನಗರದಲ್ಲಿರುವ ಸ್ವಕ್ಷೇತ್ರಗಳ ಮೇಲೆ ಈ ಪಕ್ಷ ಕಣ್ಣಿಟ್ಟಿದೆ. ತೆಲಂಗಾಣದ ಕೆಲವು ಭಾಗಗಳಲ್ಲಿ ಅದರಲ್ಲೂ ಉತ್ತರದಲ್ಲಿ AIMIM ಕಣ್ಣಿಟ್ಟಿದೆ. ಆದರೆ ಇಲ್ಲಿ ಬಿಆರ್‌ಎಸ್ ಜೊತೆ ಪರೋಕ್ಷ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ.
ಸ್ನೇಹಿತನ ವಿರುದ್ಧ ಗಜ್ವೇಲ್ನಲ್ಲಿ ಕೆಸಿಆರ್ ಸ್ಪರ್ಧೆ
ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯಲ್ಲಿರುವ ಈ ಗಜ್ವೇಲ್ ಕ್ಷೇತ್ರದಲ್ಲಿ ಕೆ ಚಂದ್ರಶೇಖರ್ ರಾವ್ ಅವರ ತವರು ಕ್ಷೇತ್ರವಾಗಿದೆ. 2014 ಮತ್ತು 2018 ಎರಡರಲ್ಲೂ ಕ್ರಮವಾಗಿ ಸುಮಾರು 20,000 ಮತ್ತು 50,000 ಮತಗಳ ಅಂತರದಿಂದ ಕೆಸಿಆರ್ ಗೆದ್ದು ಬೀಗಿದ್ದರು. ಆದರೆ 1985ರ ನಂತರ ಯಾವತ್ತೂ ಚುನಾವಣೆಯಲ್ಲಿ ಸೋಲನುಭವಿಸದ ನಾಯಕ ಈ ಬಾರಿ ಗಜ್ವೇಲ್‌ನಲ್ಲಿ ತನ್ನ ಸ್ನೇಹಿತ-ವೈರಿ ಈಟಾಳ ರಾಜೇಂದರ್ ಅವರ ವಿರುದ್ಧ ಸೆಣಸಲು ಸಜ್ಜಾಗಿದ್ದಾರೆ.
ಕೆಸಿಆರ್‌ನಿಂದಾಗಿ ಈಟಾಳ ಪ್ರಭಾವ
ಕೆಸಿಆರ್ ಅವರ ಸಂಪುಟದಲ್ಲಿ ಸಚಿವರಾಗಿದ್ದ ರಾಜೇಂದರ್ ಅವರು 2021 ರಲ್ಲಿ ಭೂಕಬಳಿಕೆ ವಿವಾದದಲ್ಲಿ ಭಾಗಿಯಾಗಿ ಅವರನ್ನು ಪದಚ್ಯುತಗೊಳಿಸಲಾಯಿತು. ಒಮ್ಮೆ ಕಮ್ಯುನಿಸ್ಟ್ ನಾಯಕರಾಗಿದ್ದ ರಾಜೇಂದರ್ ಕೆಸಿಆರ್ ಅವರೊಂದಿಗಿನ ಜಗಳದ ನಂತರ ಬಿಜೆಪಿಗೆ ಬದಲಾಯಿಸಿದರು ಮತ್ತು ಶಾಸಕರಾಗಿ ಮರು ಆಯ್ಕೆಯಾದರು. ಇದೀಗ ವಿಧಾನಸಭಾ ಚುನಾವಣೆಯಲ್ಲಿ
ಬಿಜೆಪಿ ಪಾಲಿಗೆ ರಾಜೇಂದರ್ ಈಟಾಳ ಪ್ರಮುಖ ವ್ಯಕ್ತಿಯಾಗಿದ್ದಾರೆ. ಅಲ್ಲದೇ ಅವರು ಕೆಸಿಆರ್ ಅವರಿಂದ ಕ್ಷೇತ್ರದಲ್ಲಿ ಪ್ರಭಾವಿತ ವ್ಯಕ್ತಿಯು ಆಗಿದ್ದಾರೆ. ಹೀಗಾಗಿ ಇವರು ಸಹ ಕೆಸಿಆರ್‌ಗೆ ಸವಾಲಾಗಿ ಪರಿಣಮಿಸಲಿದ್ದಾರೆ.
ತೆಲಂಗಾಣ, ಮಧ್ಯ ಪ್ರದೇಶ ಸೇರಿದಂತೆ ಒಟ್ಟು ನಾಲ್ಕು ರಾಜ್ಯಗಳಲ್ಲಿ ನಾಡಿದ್ದು ನವೆಂಬರ್ 30ರಂದು ಮತದಾನ ನಡೆಯಲಿದೆ. ಡಿಸೆಂಬರ್ 3 ರಂದು ಭಾನುವಾರ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ಹೋರ ಬೀಳಲಿದೆ.












Click it and Unblock the Notifications