Telangana Opinion Poll: ಮಂಕಾದ ಬಿಜೆಪಿ, ಕೆಸಿಆರ್‌ಗೂ ಕಷ್ಟ, ತೆಲಂಗಾಣದ ಮೇಲೆ ಕರ್ನಾಟಕದ ಪ್ರಭಾವ- ಸಮೀಕ್ಷೆಯ ಅಂಕಿಅಂಶ
ಹೈದರಾಬಾದ್, ನವೆಂಬರ್ 06: ತೆಲಂಗಾಣ ವಿಧಾನಸಭೆ ಚುನಾವಣೆಯು ದೇಶದಾದ್ಯಂತ ಭಾರೀ ಕುತೂಹಲ ಕೆರಳಿಸಿದೆ. ಆಡಳಿತರೂಢ ಭಾರತ್ ರಾಷ್ಟ್ರ ಸಮಿತಿ ( ಬಿಆರ್‌ಎಸ್ ), ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಆದರೆ, ಚುನಾವಣೆ ಹತ್ತಿರವಾಗುತ್ತಿದಂತೆ ಬಿಜೆಪಿ ಮಂಕಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈಗ ತೆಲಂಗಾಣದಲ್ಲಿ ಬಿಆರ್‌ಎಸ್ ಹಾಗೂ ಕಾಂಗ್ರೆಸ್ ನಡುವೆ ಹಣಾಹಣಿ ಇರುವುದು ಸಮೀಕ್ಷೆಗಳಿಂದ ತಿಳಿದುಬಂದಿದೆ.
ನವೆಂಬರ್ 30 ರಂದು ಚುನಾವಣೆ
119 ಸ್ಥಾನಗಳನ್ನು ಹೊಂದಿರುವ ತೆಲಂಗಾಣ ವಿಧಾನಸಭೆಗೆ ನವೆಂಬರ್ 30 ರಂದು ಮತದಾನ ನಡೆಯಲಿದೆ. 119 ರಲ್ಲಿ 19 ಸ್ಥಾನಗಳನ್ನು ಪರಿಶಿಷ್ಟ ಜಾತಿ ಮತ್ತು 12 ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಅಸೆಂಬ್ಲಿ ಅವಧಿಯು ಜನವರಿ 6, 2024 ರಂದು ಮುಕ್ತಾಯಗೊಳ್ಳಲಿದೆ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ.

ರಾಜ್ಯದಲ್ಲಿ ಮುಂಬರುವ ಚುನಾವಣೆಗಳಲ್ಲಿ 3 ಕೋಟಿಗೂ ಹೆಚ್ಚು ಜನರು ತಮ್ಮ ಆದ್ಯತೆಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅರ್ಹರಾಗಿದ್ದಾರೆ. ಫಲಿತಾಂಶವನ್ನು ಡಿಸೆಂಬರ್ 3, 2023 ರಂದು ಪ್ರಕಟಿಸಲಾಗುವುದು ಎಂದು ಭಾರತೀಯ ಚುನಾವಣಾ ಆಯೋಗ ಹೇಳಿದೆ.
ಬಿಆರ್‌ಎಸ್- ಕಾಂಗ್ರೆಸ್ ನಡುವೆ ಪೈಪೋಟಿ
ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್‌ಎಸ್ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಬಿಆರ್‌ಎಸ್ ಪಕ್ಷವು ತನ್ನ ಅಧಿಕಾರದ ಅವಧಿಯಲ್ಲಿ ಅನುಷ್ಠಾನಗೊಳಿಸಿದ ಜನಪರ ಹಾಗೂ ಕಲ್ಯಾಣ ಯೋಜನೆಗಳ ಕುರಿತು ಪ್ರಚಾರ ಮಾಡುತ್ತಿದೆ.

ಕಾಂಗ್ರೆಸ್ ಪಕ್ಷವು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ. ಕೆಸಿಆರ್ ಕುಟುಂಬ ರಾಜಕಾರಣವನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡುತ್ತಿದೆ. ತೆಲಂಗಾಣ ಕಾಂಗ್ರೆಸ್ ಘಟಕದ ಅಧ್ಯಕ್ಷ ರೇವಂತ್ ರೆಡ್ಡಿ ಜನಪ್ರಿಯತೆ ಬೆಳೆಯುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಟಿಡಿಪಿ, ವೈಎಸ್ಆರ್ ತೆಲಂಗಾಣ ಪಕ್ಷಗಳಿಂದ ಸ್ಪರ್ಧೆ ಇಲ್ಲ
ರಾಜ್ಯದಲ್ಲಿ ನವೆಂಬರ್ 30 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ ಹಾಗೂ ವೈಎಸ್ಆರ್ ತೆಲಂಗಾಣ ಪಕ್ಷ ಸ್ಪರ್ಧಿಸುವುದಿಲ್ಲವೆಂದು ಘೋಷಿಸಲಾಗಿದೆ.
ಜೈಲಿನಿಂದ ಹೊರಬಂದ ಚಂದ್ರಬಾಬು ನಾಯ್ಡು ಅವರು ತೆಲಂಗಾಣದಲ್ಲಿ ಸ್ಪರ್ಧಿಸದಿರುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇದೇ ರೀತಿಯಲ್ಲಿ ವೈಎಸ್ಆರ್‌ಟಿಪಿ ಅಧ್ಯಕ್ಷೆ ವೈಎಸ್ ಶರ್ಮಿಳಾ ಅವರು ತೆಲಂಗಾಣದಲ್ಲಿ ತಮ್ಮ ಪಕ್ಷ ಕಣಕ್ಕಿಳಿಯುವುದಿಲ್ಲ, ಬದಲಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಲಿದೆ ಎಂದು ಹೇಳಿದ್ದಾರೆ. ಇದು ಕಾಂಗ್ರೆಸ್‌ಗೆ ಸ್ಪಲ್ಪ ಮಟ್ಟಿಗೆ ಲಾಭ ತಂದುಕೊಡಲಿದೆ ಎಂದು ಹೇಳಲಾಗುತ್ತಿದೆ.

ಬಿಜೆಪಿ ಜೊತೆ ಸೇರಿದ ಪವನ್ ಕಲ್ಯಾಣ್
ಪವನ್ ಕಲ್ಯಾಣ್ ನೇತೃತ್ವದ ಜನಸೇನೆಯು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ತೆಲಂಗಾಣದಲ್ಲಿ ಬಿಜೆಪಿ ಹಾಗೂ ಜನಸೇನಾ ಮೈತ್ರಿಕೂಟ ಕಣಕ್ಕಿಳಿಯಲಿದೆ. ಆದರೆ, ಇವೆರಡು ಪಕ್ಷಗಳು ತೆಲಂಗಾಣ ರಾಜಕೀಯದಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡುವುದು ಕಷ್ಟಕರವಾಗಿದೆ.
ಲೋಕ್‌ಪೋಲ್ ಸಮೀಕ್ಷೆ ಹೇಳುವುದೇನು?
ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷವು 58 ರಿಂದ 64 ಸ್ಥಾನಗಳನ್ನು ಗೆಲ್ಲಲಿದೆ ಎಂದು ಲೋಕ್ ಪೋಲ್ ಸಮೀಕ್ಷೆ ಹೇಳಿದೆ. ಬಿಆರ್‌ಎಸ್ ಪಕ್ಷವು 47 ರಿಂದ 53 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು, ಬಿಜೆಪಿ ಎರಡರಿಂದ ಮೂರು, ಎಐಎಂಐಎಂ ಪಕ್ಷವು ಐದರಿಂದ ಏಳು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು ಎಂದು ಹೇಳಲಾಗುತ್ತಿದೆ.












Click it and Unblock the Notifications