ಆಪರೇಷನ್ ಕಮಲದ ಆರೋಪ: ಕೆಸಿಆರ್ ನಿರ್ದೇಶಿಸಿದ ನಾಟಕ ಎಂದ ಬಿಜೆಪಿ
ಹೈದರಾಬಾದ್, ಅಕ್ಟೋಬರ್ 27: ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರ್‌ಎಸ್) ನಾಲ್ವರು ಶಾಸಕರಿಗೆ ಪಕ್ಷ ಬದಲಿಸಲು ಹಣದ ಆಮಿಷವನ್ನು ಬಿಜೆಪಿ ಒಡ್ಡಿದೆ ಎಂದು ಆರೋಪಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ತೆಲಂಗಾಣದಲ್ಲಿ ಆಪರೇಷನ್ ಕಮಲದ ಆರೋಪಗಳು ಕೇಳಿಬಂದಿದ್ದವು. ನಿನ್ನೆ ರಾತ್ರಿ ಫಾರ್ಮ್‌ಹೌಸ್ ಒಂದರಲ್ಲಿ ರಹಸ್ಯ ಮಾತುಕತೆ ನಡೆಸಲಾಗಿದೆ. ಈ ವೇಳೆ, ಟಿಆರ್‌ಎಸ್‌ನ ಪ್ರಮುಖ ನಾಯಕರೊಬ್ಬರಿಗೆ ₹ 100 ಕೋಟಿ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಶಾಸಕರಲ್ಲಿ ಒಬ್ಬರಾದ ಪೈಲಟ್ ರೋಹಿತ್ ರೆಡ್ಡಿ ಅವರು ಫಾರ್ಮ್ ಹೌಸ್‌ನ ಮಾಲೀಕರಾಗಿದ್ದಾರೆ. ಇಲ್ಲಿ ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ ಎಂಬ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆ ಮಾಹಿತಿಯನ್ನು ಆಧರಿಸಿ ಪೊಲೀಸರು ದಾಳಿ ನಡೆಸಿದ್ದಾರೆ.

ಪೋಲಿಸರು ಹಾಕಿರುವ ಎಫ್‌ಐಆರ್‌ನಲ್ಲಿ ಪೈಲಟ್ ರೋಹಿತ್ ರೆಡ್ಡಿ ದೂರುದಾರರಾಗಿದ್ದಾರೆ. ನಾಲ್ವರು ಶಾಸಕರ ಆಪರೇಷನ್ ಕಮಲ ನಡೆಸಲು ₹ 250 ಕೋಟಿ ಮೇಜಿನ ಮೇಲಿತ್ತು ಎಂದು ರೆಡ್ಡಿ ಆರೋಪಿಸಿದ್ದಾರೆ.
ಬೇಡಿಕೆಗೆ ಒಪ್ಪದೇ ಹೋದಲ್ಲಿ, ತಮ್ಮ ಮೇಲೆ ತನಿಖೆ ನಡೆಸುವುದಾಗಿ ಬಿಜೆಪಿ ಬೆದರಿಗೆ ಹಾಕಿದೆ ಎಂದೂ ರೆಡ್ಡಿ ಆರೋಪಿಸಿದ್ದಾರೆ.
ಈ ಪ್ರಕರಣದ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಹರಿಯಾಣದ ಫರಿದಾಬಾದ್‌ನ ಅರ್ಚಕ ಸತೀಶ್ ಶರ್ಮಾ, ಅಲಿಯಾಸ್ ರಾಮ್ ಚಂದ್ರ ಭಾರತಿ, ತಿರುಪತಿಯ ಧರ್ಮದರ್ಶಿ ಡಿ. ಸಿಂಹಯಾಜಿ ಮತ್ತು ಹೈದರಾಬಾದ್ ಮೂಲದ ಉದ್ಯಮಿ ನಂದಕುಮಾರ್ ಬಂಧಿತರು. ಅವರಿಗೆ ಬಿಜೆಪಿ ಜೊತೆ ನಂಟು ಇದೆ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರಿಗೆ ಕರೆ ಮಾಡಿದ್ದ ಶಾಸಕರು, 'ಪಕ್ಷವನ್ನು ಬದಲಿಸಲು ಆಮಿಷ ಒಡ್ಡುತ್ತಿದ್ದಾರೆ' ಎಂದು ಹೇಳಿದ್ದರು.
ಈ ಬಗ್ಗೆ ಎನ್‌ಡಿಟಿವಿಗೆ ಮಾಹಿತಿ ನೀಡಿರುವ ತೆಲಂಗಾಣ ಪೊಲೀಸ್ ಆಯುಕ್ತ ಸ್ಟೀಫನ್ ರವೀಂದ್ರ, 'ಪಕ್ಷವನ್ನು ಬದಲಿಸಲು ಶಾಸಕರಿಗೆ ದೊಡ್ಡ ಮೊತ್ತದ ಹಣ ಹಾಗೂ ಹುದ್ದೆಗಳ ಆಮಿಷ ಒಡ್ಡಲಾಗಿತ್ತು' ಎಂದು ಅವರು ತಿಳಿಸಿದ್ದಾರೆ.

ಎಫ್‌ಐಆರ್ ಪ್ರಕಾರ, ರೋಹಿತ್ ರೆಡ್ಡಿಗೆ ₹100 ಕೋಟಿ ಹಣದ ಆಮಿಷ ಒಡ್ಡಲಾಗಿತ್ತು. ಉಳಿದ ಮೂವರು ಶಾಸಕರಿಗೆ ತಲಾ ₹ 50 ಕೋಟಿ ಹಣವನ್ನು ನೀಡಲಾಗಿತ್ತು.
'ಈ ಶಾಸಕರು ಒಂದು ವೇಳೆ ಬಿಜೆಪಿಗೆ ಸೇರದಿದ್ದರೆ, ಅವರ ಮೇಲೆ ಕ್ರಿಮಿನಲ್ ಪ್ರಕರಣಗಳನ್ನು ಹಾಕಲಾಗುವುದು. ಇಡಿ ಹಾಗೂ ಸಿಬಿಐ ಮೂಲಕ ದಾಳಿಗಳನ್ನು ನಡೆಸಲಾಗುವುದು. ಟಿಆರ್‌ಎಸ್ ನೇತೃತ್ವದ ತೆಲಂಗಾಣ ಸರ್ಕಾರವನ್ನು ಉರುಳಿಸಲಾಗುವುದು' ಎಂಬ ರೋಹಿತ್ ರೆಡ್ಡಿ ಹೇಳಿಕೆ ಎಫ್‌ಐಆರ್‌ನಲ್ಲಿ ದಾಖಲಾಗಿದೆ.
ಬಂಧಿತ ವ್ಯಕ್ತಿಗಳು ಬಿಜೆಪಿ ನಾಯಕರ ಜೊತೆಗಿರುವ ಫೋಟೋಗಳನ್ನೂ ಪೊಲೀಸರು ಹಂಚಿಕೊಂಡಿದ್ದಾರೆ.
ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ (ಕೆಸಿಆರ್) ಅವರೇ ಬರೆದು, ನಿರ್ದೇಶಿಸಿ, ನಿರ್ಮಿಸಿದ ನಾಟಕವನ್ನು ಟಿಆರ್‌ಎಸ್ ಪ್ರದರ್ಶಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
₹100 ಕೋಟಿ ನೀಡಿದ್ದು ಯಾರು ಎಂದು ತೆಲಂಗಾಣ ಬಿಜೆಪಿಯ ಹಿರಿಯ ನಾಯಕ, ಕೇಂದ್ರ ಸಚಿವ ಕಿಶನ್ ರೆಡ್ಡಿ ಪ್ರಶ್ನಿಸಿದ್ದಾರೆ.
'ಪೊಲೀಸರು ಫಾರ್ಮ್‌ಹೌಸ್‌ಗೆ ತೆರಳುವ ಮುಂಚಿತವಾಗಿಯೇ, ಮಾಧ್ಯಮದ ಸಿಬ್ಬಂದಿ ಅಲ್ಲಿ ಹಾಜರಿದ್ದರು. ಒಳಗೆ ಏನಾಗುತ್ತಿದೆ ಎಂಬುದರ ಕುರಿತು ವಿವರಗಳನ್ನು ನೀಡುತ್ತಿದ್ದರು. ತೋಟದ ಮನೆಯೊಳಗೆ ಮಾಧ್ಯಮದವರನ್ನು ಏಕೆ ಬಿಡಲಾಯಿತು? ಈ ಹಣ ಬಿಜೆಪಿ ಸೇರಿದ್ದು ಹೇಗೆ? ಈ ಪ್ರಕರಣದಲ್ಲಿ ಬಂಧಿತವಾದ ಆರೋಪಿಗಳು ಬಿಜೆಪಿಯೊಂದಿಗೆ ಸಂಬಂಧವನ್ನೇ ಹೊಂದಿಲ್ಲ' ಎಂದು ಕಿಶನ್ ರೆಡ್ಡಿ ಹೇಳಿದ್ದಾರೆ.
2019 ರಿಂದಲೂ ತಮ್ಮ ಶಾಸಕರನ್ನು ಖರೀದಿಸಲು ಬಿಜೆಪಿ ಯತ್ನ ನಡೆಸಿದೆ. ಅವರಿಗೆ ಕೋಟ್ಯಾಂತರ ರುಪಾಯಿ ಹಣದ ಆಮಿಷ ಒಡ್ಡುತ್ತಿದೆ ಎಂದು ಟಿಆರ್‌ಎಸ್ ಆರೋಪ ಮಾಡುತ್ತಲೇ ಬಂದಿದೆ.












Click it and Unblock the Notifications