ಕೆಸಿಆರ್ ಆರೋಗ್ಯ ವಿಚಾರಿಸಿದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ
ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮಾಜಿ ಮುಖ್ಯಮಂತ್ರಿ ಮತ್ತು ಬಿಆರ್‌ಎಸ್ ಮುಖ್ಯಸ್ಥ ಕೆ ಚಂದ್ರಶೇಖರ್ ರಾವ್ ಅವರನ್ನು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಕಾಲುಜಾರಿ ಬಿದ್ದಿದ್ದ ಕೆಸಿಆರ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಡಿಸೆಂಬರ್ 7 ರಂದು ಹೈದರಾಬಾದ್‌ನಿಂದ ಸುಮಾರು 60 ಕಿಮೀ ದೂರದಲ್ಲಿರುವ ಎರ್ರವಳ್ಳಿಯಲ್ಲಿರುವ ಅವರ ತೋಟದ ಮನೆಯಲ್ಲಿ ಕಾಲು ಜಾರಿ ಬಿದ್ದಿದ್ದ ಕೆಸಿಆರ್ ಅವರನ್ನು ಹೈದರಾಬಾದ್‌ನ ಯಶೋದಾ ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆಯಲ್ಲಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಡಿಸೆಂಬರ್ 8 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ರೇವಂತ್ ರೆಡ್ಡಿ ಅವರು ಕೆಸಿಆರ್ ಅವರ ಕುಟುಂಬದೊಂದಿಗೆ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದರು. ಮುಖ್ಯಮಂತ್ರಿ ಕೆಸಿಆರ್ ಜೊತೆ ಮಾತನಾಡಿದ್ದಾರೆ, ಆರೋಗ್ಯ ವಿಚಾರಿಸುತ್ತಿರುವ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.
ಚಿಕಿತ್ಸೆಗೆ ಅಗತ್ಯವಿರುವ ಸಹಕಾರ
ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೇವಂತ್ ರೆಡ್ಡಿ, ಕೆಸಿಆರ್ ಅವರ ಚಿಕಿತ್ಸೆಗೆ ಅಗತ್ಯವಿರುವ ಎಲ್ಲಾ ಸಹಾಯ ಮತ್ತು ಸಹಕಾರವನ್ನು ನೀಡುವಂತೆ ಮುಖ್ಯ ಕಾರ್ಯದರ್ಶಿ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ.
"ನಾನು ಅವರನ್ನು (ಕೆಸಿಆರ್) ಶೀಘ್ರವಾಗಿ ಚೇತರಿಸಿಕೊಳ್ಳಲು ಮತ್ತು ತೆಲಂಗಾಣ ವಿಧಾನಸಭೆ ಅಧಿವೇಶನದಲ್ಲಿ ಭಾಗವಹಿಸಿ ಜನರ ಸಮಸ್ಯೆಗಳನ್ನು ಹೇಳಲು ವಿನಂತಿಸಿದೆ. ಜನರಿಗೆ ಉತ್ತಮ ಆಡಳಿತ ನೀಡಲು ಅವರ ಸಲಹೆಯ ಅಗತ್ಯವಿದೆ" ಎಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೇಳಿದರು.
ರೇವಂತ್ ರೆಡ್ಡಿ ಆಸ್ಪತ್ರೆಗೆ ಭೇಟಿ ನೀಡಿ ಕೆಸಿಆರ್ ಆರೋಗ್ಯ ವಿಚಾರಿಸಿದ್ದು ದೈನಂದಿನ ರಾಜಕೀಯ ವಿರೋಧದ ನಡುವೆಯೂ ಪ್ರತಿಸ್ಪರ್ಧಿಗಳ ನಡುವಿನ ಅಪರೂಪದ ರಾಜಕೀಯ ಒಡನಾಟವನ್ನು ಎತ್ತಿ ತೋರಿಸುತ್ತದೆ. ರಾಜಕೀಯದಲ್ಲಿ ಎಷ್ಟೇ ವಿರೋಧಗಳಲ್ಲಿದ್ದರೂ ಪರಸ್ಪರ ಗೌರವ, ಬಾಂಧವ್ಯ ಹೊಂದಿದ್ದಾರೆ.
ಶಸ್ತ್ರಚಿಕಿತ್ಸೆಯ ನಂತರ ಕೆ. ಚಂದ್ರಶೇಖರ ರಾವ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರ ಪುತ್ರಿ ಕೆ.ಕವಿತಾ ತಿಳಿಸಿದ್ದಾರೆ. ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸುಮಾರು ಎಂಟು ವಾರಗಳನ್ನು ತೆಗೆದುಕೊಳ್ಳುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ನಾಯಕ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. "ತೆಲಂಗಾಣ ಮಾಜಿ ಸಿಎಂ ಕೆಸಿಆರ್ ಅವರು ಗಾಯಗೊಂಡಿದ್ದಾರೆ ಎಂದು ತಿಳಿದು ದುಃಖಿತನಾಗಿದ್ದೇನೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲು ಮತ್ತು ಉತ್ತಮ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ." ಎಂದು ಸಂದೇಶ ನೀಡಿದ್ದಾರೆ.












Click it and Unblock the Notifications