ತೆಲಂಗಾಣ ಬಿಜೆಪಿ ಮುಖ್ಯಸ್ಥ 14 ದಿನಗಳ ಕಾಲ ಪೊಲೀಸ್ ವಶಕ್ಕೆ; ಬಂಧನ ಅಕ್ರಮ ಎಂದ ಬಿಜೆಪಿ
ಹೈದರಾಬಾದ್, ಏಪ್ರಿಲ್. 05: ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರನ್ನು ಮಂಗಳವಾರ ರಾತ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಬಂಧನವನ್ನು ಖಂಡಿಸಿರುವ ನವದೆಹಲಿಯ ಬಿಜೆಪಿ ಹಿರಿಯ ನಾಯಕರು, ಇದೊಂದು ಅಕ್ರಮ ಬಂಧನ ಎಂದು ಟೀಕಿಸಿದ್ದಾರೆ.
ಬಂಡಿ ಸಂಜಯ್ ಕುಮಾರ್ ಅವರನ್ನು ಎರಡು ವಾರಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಕರೀಂನಗರ ಜಿಲ್ಲೆಯ ಸಂಸದರಾದ ಬಂಡಿ ಸಂಜಯ್ ಕುಮಾರ್ ಅವರನ್ನು ಯಾವುದೇ ವಿವರಣೆಯಿಲ್ಲದೆ ಅವರ ಮನೆಯಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅವರ ಪಕ್ಷದ ಸಹೋದ್ಯೋಗಿಗಳು ಆರೋಪಿಸಿದ್ದಾರೆ. ಬಂಧನದ ನಂತರ ಅವರನ್ನು ವಿವಿಧ ಜಿಲ್ಲೆಗಳ ಹಲವು ಪೊಲೀಸ್ ಠಾಣೆಗಳಿಗೆ ಸ್ಥಳಾಂತರಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಇದನ್ನು "ಅಕ್ರಮ ಬಂಧನ" ಎಂದು ಕರೆದಿರುವ ಬಿಜೆಪಿಯು ತೆಲಂಗಾಣ ಹೈಕೋರ್ಟ್‌ನಲ್ಲಿ ಬುಧವಾರ ಅರ್ಜಿ ಸಲ್ಲಿಸಿದೆ. ಬಂಡಿ ಸಂಜಯ್ ಕುಮಾರ್ ಅವರ ಬಂಧನ ಮತ್ತು ಅವರ ಪ್ರಸ್ತುತ ಸ್ಥಳದ ಆಧಾರವನ್ನು ತಿಳಿಸುವಂತೆ ಅರ್ಜಿಯಲ್ಲಿ ಕೋರಿದೆ. ಮಾಧ್ಯಮಿಕ ಶಾಲಾ ಪರೀಕ್ಷೆಯ ಪತ್ರಿಕೆಗಳ ಸೋರಿಕೆಯ ಆರೋಪದ ಮೇಲೆ ಅವರನ್ನು ನಂತರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜಕೀಯವಾಗಿ ತೀವ್ರ ಸ್ವರೂಪ ಪಡೆದುಕೊಂಡ ನಂತರ, ಪೊಲಿಸರು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದೆ. ಮಾಧ್ಯಮಿಕ ಶಾಲಾ ಪರೀಕ್ಷೆಯ ಪತ್ರಿಕೆಗಳ ಸೋರಿಕೆಯ ಮೇಲೆ ಅವರನ್ನು ನಂತರ ಬಂಧಿಸಲಾಗಿದೆ ಎಂದಿದು ಅವರ ಪಕ್ಷವು ಆಧಾರರಹಿತ ಮತ್ತು ರಾಜಕೀಯ ಪ್ರೇರಿತ ಆರೋಪ ಮಾಡುತ್ತಿದೆ ಎಂದು ಎಲ್ಲ ಆರೋಪಗಳನ್ನು ತಳ್ಳಿಹಾಕಿದೆ.
ಶನಿವಾರ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಮುನ್ನ ಬಿಜೆಪಿ ಮತ್ತು ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷಗಳ ನಡುವಿನ ಜಟಾಪಟಿಯ ನಡುವೆ ಪೊಲೀಸರು ಬಂಡಿ ಸಂಜಯ್ ಕುಮಾರ್ ಅವರನ್ನು ಬಂಧಿಸಿದ್ದಾರೆ. ಪ್ರಧಾನಿ ಮೋದಿ ಅವರು ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸುವ ನಿರೀಕ್ಷೆಯಿದ್ದು, ಸಾರ್ವಜನಿಕ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಬಿಆರ್‌ಎಸ್ ಸರ್ಕಾರ ಮತ್ತು ಅದರ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ವಿರುದ್ಧ ಭಾರೀ ಟಿಕೆ ಮಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷನನ್ನು ಮಂಗಳವಾರ ತಡರಾತ್ರಿ ಅವರ ನಿವಾಸದಿಂದ ಕರೆತರಲಾಯಿತು. ಆವರನ್ನು ಪೊಲೀಸರು ಎಳೆದೊಯ್ದು ಬಲವಂತವಾಗಿ ವ್ಯಾನ್‌ಗೆ ಹಾಕುತ್ತಿರುವುದನ್ನು ವಿಡಿಯೋ ದೃಶ್ಯಾವಳಿಗಳು ತೋರಿಸಿವೆ. ಅವರ ಬೆಂಬಲಿಗರು ಬಂಧನವನ್ನು ತಡೆಯಲು ಯತ್ನಿಸಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ.
ಬಿಜೆಪಿಯ ರಾಷ್ಟ್ರೀಯ ನಾಯಕರು ಬಂಡಿ ಸಂಜಯ್ ಕುಮಾರ್ ಬಂಧನವನ್ನು ಖಂಡಿಸಿ, ಅವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಕೇಂದ್ರ ಸಚಿವ ಮತ್ತು ತೆಲಂಗಾಣದ ಹಿರಿಯ ಬಿಜೆಪಿ ನಾಯಕ ಜಿ. ಕಿಶನ್ ರೆಡ್ಡಿ, ಇದು ಬಂಡಿ ಸಂಜಯ್ ಕುಮಾರ್ ಅವರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವ "ಪ್ರಜಾಪ್ರಭುತ್ವ ವಿರೋಧಿ" ಕೃತ್ಯವಾಗಿದೆ ಎಂದಿದ್ದಾರೆ.
ಬಿಜೆಪಿಯ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಟ್ವಿಟ್ಟರ್‌ನಲ್ಲಿ ಈ ಬಂಧನವು ಪ್ರತಿಪಕ್ಷಗಳನ್ನು ಬೆದರಿಸಲು ಮತ್ತು ಭಿನ್ನಾಭಿಪ್ರಾಯವನ್ನು ತಡೆಯಲು ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ. ಇನ್ನು ನೂರಾರು ಬಿಜೆಪಿ ಕಾರ್ಯಕರ್ತರು ವಿವಿಧ ಪೊಲೀಸ್ ಠಾಣೆಗಳ ಹೊರಗೆ ಪ್ರತಿಭಟನೆ ನಡೆಸಿದ್ದಾರೆ
"ಮಧ್ಯರಾತ್ರಿಯ ಕಾರ್ಯಾಚರಣೆಯಲ್ಲಿ, ತೆಲಂಗಾಣ ಪೊಲೀಸರು ಮಾಧ್ಯಮಿಕ ಶಾಲಾ ಪೇಪರ್ ಸೋರಿಕೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಸುಳ್ಳು ಆರೋಪದ ಮೇಲೆ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರನ್ನು ಬಂಧಿಸಿದ್ದಾರೆ. ಇದು ಕೆಸಿಆರ್‌ಗೆ ಸರಿಯಲ್ಲ, ಇದು ಇಲ್ಲಿಗೆ ಕೊನೆಯಾಗುವುದಿಲ್ಲ" ಎಂದು ಅಮಿತ್ ಮಾಳವಿಯಾ ಬರೆದಿದ್ದಾರೆ.












Click it and Unblock the Notifications