ಎಸ್‌ಎಸ್‌ಸಿ ಪೇಪರ್ ಸೋರಿಕೆ ಪ್ರಕರಣ: ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಕುಮಾರ್‌ಗೆ ಜಾಮೀನು
ಹೈದರಾಬಾದ್, ಏಪ್ರಿಲ್. 06: ಎಸ್‌ಎಸ್‌ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್‌ಗೆ ವಾರಂಗಲ್‌ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಗುರುವಾರ 20,000 ರೂಪಾಯಿಗಳ ಶ್ಯೂರಿಟಿಯ ಮೇಲೆ ಜಾಮೀನು ಮಂಜೂರು ಮಾಡಿದೆ. ಶುಕ್ರವಾರ ( ಏಪ್ರಿಲ್ 07) ಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ.
ಕರೀಂನಗರ ಕ್ಷೇತ್ರದ ಲೋಕಸಭಾ ಸಂಸದ ಬಂಡಿ ಸಂಜಯ್ ಕುಮಾರ್ ಅವರನ್ನು ಕರೀಂನಗರದಲ್ಲಿರುವ ಅವರ ನಿವಾಸದಿಂದ ಮಂಗಳವಾರ ಮಧ್ಯರಾತ್ರಿ ಪೊಲೀಸರ ತಂಡ ಕರೆದುಕೊಂಡು ಹೋಗಿತ್ತು. ನಂತರ, ಮಾಧ್ಯಮಿಕ ಶಾಲಾ ಪರೀಕ್ಷೆಯ ಪತ್ರಿಕೆಗಳ ಸೋರಿಕೆ ಪ್ರಕರಣದಲ್ಲಿ ಅವರನ್ನು ಪ್ರಧಾನ ಆರೋಪಿ ಎಂದು ಹೆಸರಿಸಿ ಅವರ್ನು ಬಂಧಿಸಲಾಗಿತ್ತು.

ಪೊಲೀಸರ ಪ್ರಕಾರ, ನಡೆಯುತ್ತಿರುವ ಎಸ್‌ಎಸ್‌ಸಿ ಪಬ್ಲಿಕ್ ಪರೀಕ್ಷೆಯ ಶಾಂತಿ ಭಂಗವನ್ನು ಉಂಟುಮಾಡುವ ಉದ್ದೇಶದಿಂದ ಬಂಡಿ ಸಂಜಯ್ ಕುಮಾರ್ ಇತರ ಆರೋಪಿಗಳೊಂದಿಗೆ ಸೇರಿ ಸರ್ಕಾರವನ್ನು ದೂಷಿಸಲು ಪಿತೂರಿ ನಡೆಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಎರಡು ಪ್ರಶ್ನೆ ಪತ್ರಿಕೆಗಳ ಚಿತ್ರಗಳು ವೈರಲ್ ಆದ ನಂತರ ಈ ಬೆಳವಣಿಗೆಗಳು ನಡೆದಿವೆ.
ಏಪ್ರಿಲ್ 5 ರಂದು, ಎಸ್‌ಎಸ್‌ಸಿ ಪೇಪರ್ ಸೋರಿಕೆ ಪ್ರಕರಣದಲ್ಲಿ ಬಿಜೆಪಿ ನಾಯಕನನ್ನು ಏಪ್ರಿಲ್ 19 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಇದಾಗಿ ಒಂದು ದಿನದ ನಂತರ, ತೆಲಂಗಾಣ ಹೈಕೋರ್ಟ್ ರಿಮಾಂಡ್ ರದ್ದುಗೊಳಿಸಲು ನಿರಾಕರಿಸಿತು ಮತ್ತು ಜಾಮೀನಿಗಾಗಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವನ್ನು ಸಂಪರ್ಕಿಸಲು ಬಂಡಿ ಸಂಜಯ್ ಕುಮಾರ್ ಅವರ ಕಾನೂನು ತಂಡಕ್ಕೆ ನಿರ್ದೇಶನ ನೀಡಿತು.
ಇದೀಗ ಕರೀಂನಗರ ಸಂಸದರಿಗೆ ಮ್ಯಾಜಿಸ್ಟ್ರೇಟ್ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಸದ್ಯ ಕರೀಂನಗರದ ಜೈಲಿನಲ್ಲಿರುವ ಬಂಡಿ ಸಂಜಯ್ ಕುಮಾರ್ ನಾಳೆ ಜೈಲಿನಿಂದ ಹೊರಬರುವ ಸಾಧ್ಯತೆ ಇದೆ. ಬಿಜೆಪಿ ಇದನ್ನು ಅಕ್ರಮ ಬಂಧನ ಎಂದು ಕರೆದು ತೆಲಂಗಾಣ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿತ್ತು.
ಬಿಜೆಪಿಯ ರಾಷ್ಟ್ರೀಯ ನಾಯಕರು ಬಂಡಿ ಸಂಜಯ್ ಕುಮಾರ್ ಬಂಧನವನ್ನು ಖಂಡಿಸಿ, ಅವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದರು. ಕೇಂದ್ರ ಸಚಿವ ಮತ್ತು ತೆಲಂಗಾಣದ ಹಿರಿಯ ಬಿಜೆಪಿ ನಾಯಕ ಜಿ. ಕಿಶನ್ ರೆಡ್ಡಿ, ಇದು ಬಂಡಿ ಸಂಜಯ್ ಕುಮಾರ್ ಅವರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವ "ಪ್ರಜಾಪ್ರಭುತ್ವ ವಿರೋಧಿ" ಕೃತ್ಯವಾಗಿದೆ ಎಂದಿದ್ದಾರೆ.
ಬಿಜೆಪಿಯ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಬಂಡಿ ಸಂಜಯ್ ಕುಮಾರ್ ಬಂಧನ ಪ್ರತಿಪಕ್ಷಗಳನ್ನು ಬೆದರಿಸಲು ಮತ್ತು ಭಿನ್ನಾಭಿಪ್ರಾಯವನ್ನು ತಡೆಯಲು ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರ ಪ್ರಯತ್ನವಾಗಿದೆ ಎಂದು ಆರೋಪಿಸಿದ್ದರು.












Click it and Unblock the Notifications