ತೆಲಂಗಾಣ ಚುನಾವಣೆ 2023; ಕಾಂಗ್ರೆಸ್ ಪ್ರದೇಶ ಚುನಾವಣಾ ಸಮಿತಿ ರಚನೆ

ಹೈದರಾಬಾದ್, ಜುಲೈ 20; ತೆಲಂಗಾಣ ವಿಧಾನಸಭೆ ಚುನಾವಣೆ 2023ಕ್ಕೆ ಕಾಂಗ್ರೆಸ್ ಪ್ರದೇಶ ಚುನಾವಣಾ ಸಮಿತಿಯನ್ನು ರಚನೆ ಮಾಡಿದೆ. ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರೇವಂತ್ ರೆಡ್ಡಿ ಸಮಿತಿಯ ಅಧ್ಯಕ್ಷರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಗುರುವಾರ ಕಾಂಗ್ರೆಸ್ ಪ್ರದೇಶ ಚುನಾವಣಾ ಸಮಿತಿಯನ್ನು ಎಐಸಿಸಿ ಅಧ್ಯಕ್ಷರ ಒಪ್ಪಿಗೆಯಂತೆ ತಕ್ಷಣದಿಂದ ಜಾರಿಗೆ ಬರುವಂತೆ ರಚನೆ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

Telangana Assembly Elections 2023 Congress Constitutes Pradesh Election Committee

ರೇವಂತ್ ರೆಡ್ಡಿ ಅಧ್ಯಕ್ಷತೆಯ ಸಮಿತಿಯಲ್ಲಿ 26 ಸದಸ್ಯರಿದ್ದಾರೆ. ಯುವ ಕಾಂಗ್ರೆಸ್ ಅಧ್ಯಕ್ಷರು, ಎನ್‌ಎಸ್‌ಯುಐ ಅಧ್ಯಕ್ಷರು ಮತ್ತು ಸೇವಾದಳದ ಮುಖ್ಯ ಸಂಘಟಕರನ್ನು ಸಹ ಸಮಿತಿಯ ಸದಸ್ಯರು ಎಂದು ಆದೇಶ ತಿಳಿಸಿದೆ.

ತೆಲಂಗಾಣ ಚುನಾವಣೆ; ತೆಲಂಗಾಣದಲ್ಲಿ 119 ವಿಧಾನಸಭಾ ಕ್ಷೇತ್ರಗಳಿವೆ. ಸದ್ಯ ರಾಜ್ಯದಲ್ಲಿ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷದ ಆಡಳಿತವಿದೆ. ಕೆ. ಚಂದ್ರಶೇಖರರಾವ್ ಮುಖ್ಯಮಂತ್ರಿಗಳು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ಚಂದ್ರಶೇಖರರಾವ್ ಎದುರಾಳಿಗಳು.

ಕಾಂಗ್ರೆಸ್ ಪಕ್ಷ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ಪಕ್ಷದ ಪ್ರಣಾಳಿಕೆ ಇನ್ನೂ ಅಂತಿಮವಾಗಿಲ್ಲ. ಆದರೆ ಕರ್ನಾಟಕದ ಕಾಂಗ್ರೆಸ್ ಮಾದರಿಯಲ್ಲಿ ಹಲವು ಗ್ಯಾರಂಟಿಗಳನ್ನು ಪಕ್ಷ ಘೋಷಣೆ ಮಾಡಲಿದ್ದು, ಈ ಬಗ್ಗೆ ಈಗಲೇ ಚರ್ಚೆಗಳು ಆರಂಭವಾಗಿದೆ.

500 ರೂ. ಸಬ್ಸಿಡಿ ಬೆಲೆಯಲ್ಲಿ ಎಲ್‌ಪಿಜಿ ಸಿಲಿಂಡರ್ ನೀಡುವುದು, ಹಿರಿಯ ನಾಗರಿಕರು, ವಿಧವೆಯರು, ವಿಕಲಾಂಗರಿಗೆ 4 ಸಾವಿರ ರೂ. ಪಿಂಚಣಿ, 2 ಲಕ್ಷ ರೂ. ತನಕ ರೈತರಿಗೆ ಬೆಲೆ ಸಾಲ ನೀಡುವುದು ಸೇರಿದಂತೆ ಅನೇಕ ಘೋಷಣೆಗಳನ್ನು ಮಾಡುವ ನಿರೀಕ್ಷೆ ಇದೆ.

ಈಗಾಗಲೇ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತ ಪಡೆದು ಸರ್ಕಾರ ರಚನೆ ಮಾಡಿರುವ ಕಾಂಗ್ರೆಸ್ ಪಕ್ಕದ ತೆಲಂಗಾಣದ ಚುನಾವಣೆಯಲ್ಲಿಯೂ ಗೆದ್ದು ಅಧಿಕಾರ ಹಿಡಿಯುವ ಉತ್ಸಾಹದಲ್ಲಿದೆ. ಇದಕ್ಕಾಗಿ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, "ತೆಲಂಗಾಣದಲ್ಲಿ ಹೊಸ ಆರಂಭಕ್ಕೆ ನಾಂದಿ ಹಾಡಲು ಪಕ್ಷವು ನೀಲನಕ್ಷೆಯನ್ನು ಸಿದ್ಧಪಡಿಸಿದೆ. ರಾಜ್ಯದ 3.8 ಕೋಟಿ ಜನರು ಬದಲಾವಣೆ ಬಯಸಿದ್ದಾರೆ. ಕಾಂಗ್ರೆಸ್ ತನ್ನ ಸಾಮೂಹಿಕ ನಾಯಕತ್ವದ ಬಗ್ಗೆ ಹೆಮ್ಮೆ ಪಡುತ್ತದೆ" ಎಂದು ಹೇಳಿದ್ದಾರೆ.

"ಸಾಮಾಜಿಕ ನ್ಯಾಯ ಹಾಗೂ ಸಮಾನತೆ ಆಧಾರದ ಮೇಲೆ ನಾವು ತೆಲಂಗಾಣದ ಪ್ರಗತಿಗೆ ಬದ್ಧರಾಗಿದ್ದೇವೆ. ಇತರೆ ಪಕ್ಷಗಳ ಹಲವು ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ" ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ರಾಹುಲ್ ಗಾಂಧಿ ಪ್ರಚಾರ; ಈಗಾಗಲೇ ಪಕ್ಷದ ನಾಯಕ ರಾಹುಲ್‌ ಗಾಂಧಿ ತೆಲಂಗಾಣದಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಜುಲೈ 2ರಂದು ಅವರು ರಾಜ್ಯದಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ್ದರು, "ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್ ಪ್ರಧಾನಿ ನರೇಂದ್ರ ಮೋದಿ ಅಣತಿಯಂತೆ ಕೆಲಸ ಮಾಡುತ್ತಾರೆ. ಬಿಆರ್‌ಎಸ್ ಬಿಜೆಪಿಯ ಬಿ-ಟೀಂ" ಎಂದು ಆರೋಪಿಸಿದ್ದರು.

"ಚಂದ್ರಶೇಖರರಾವ್ ಮತ್ತು ಅವರ ಪಕ್ಷದ ನಾಯಕರ ಮೇಲಿರುವ ಭ್ರಷ್ಟಾಚಾರ ಪ್ರಕರಣಗಳು ಅವರು ಬಿಜೆಪಿ ಮುಂದೆ ತಲೆಭಾಗುವಂತೆ ಮಾಡಿವೆ. ಬಿಆರ್‌ಎಸ್ ಪಕ್ಷದ ರಿಮೋಟ್ ಕಂಟ್ರೋಲ್ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಇದೆ" ಎಂದು ರಾಹುಲ್ ಗಾಂಧಿ ದೂರಿದ್ದರು.

"ತೆಲಂಗಾಣದಲ್ಲಿ ಮೊದಲು ಬಿಆರ್‌ಎಸ್, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸ್ಪರ್ಧೆ ಇತ್ತು. ಆದರೆ ಬಿಜೆಪಿಗೆ ರಾಜ್ಯದಲ್ಲಿ ತಲೆ ಎತ್ತಲು ಸಾಧ್ಯವಾಗಿಲ್ಲ. ಅದರ ನಾಲ್ಕು ಚಕ್ರಗಳು ಪಂಕ್ಚರ್ ಆಗಿವೆ. ಈಗ ಕಾಂಗ್ರೆಸ್ ಮತ್ತು ಬಿಜೆಪಿ ಬಿ-ಟೀಂ ಬಿಆರ್‌ಎಸ್ ನಡುವೆ ಮಾತ್ರ ಸ್ಪರ್ಧೆ ಇದೆ" ಎಂದು ರಾಹುಲ್ ಗಾಂಧಿ ಬಿಜೆಪಿ ಟೀಕಿಸಿದ್ದರು.

ಬಿಆರ್‌ಎಸ್ ಪಕ್ಷದ ಮಾಜಿ ಸಂಸದ ಪೆಂಗುಲೇಟಿ ಶ್ರೀನಿವಾಸ್ ರೆಡ್ಡಿ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದಾರೆ. ಪಕ್ಷ ಸೇರಲು ಬಯಸಿರುವ ಎಲ್ಲಾ ನಾಯಕರಿಗೂ ಸ್ವಾಗತ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+