Telangana Election Opinion Poll 2023: ತೆಲಂಗಾಣದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ? ನಿಖರ ಸಮೀಕ್ಷೆಯ ಅಂಕಿಅಂಶ, ವಿವರ
ಹೈದರಾಬಾದ್, ಅಕ್ಟೋಬರ್ 03: ಈ ವರ್ಷದ ಕೊನೆಯಲ್ಲಿ ತೆಲಂಗಾಣ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಆಡಳಿತಾರೂಢ ಬಿಎಸ್‌ಆರ್ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ನೇರ ಹಣಾಹಣಿ ಇರುವುದು ಕಂಡುಬಂದಿದೆ. ಬಿಜೆಪಿ ಹಾಗೂ ಎಐಎಂಐಎಂ ಪಕ್ಷಗಳೂ ಈ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಈಗಾಗಲೇ ಸಂಸ್ಥೆಗಳು ಚುನಾವಣಾಪೂರ್ವ ಸಮೀಕ್ಷೆಗಳನ್ನು ಪ್ರಕಟಿಸಿದ್ದು, ಚುನಾವಣೆಯು ಭಾರೀ ಕುತೂಹಲ ಕೆರಳಿಸಿದೆ.
ತೆಲಂಗಾಣದಲ್ಲಿ ಆಡಳಿತರೂಢ ವಿರೋಧ ಅಲೆ
ಆಂಧ್ರದಿಂದ ಬೇರ್ಪಟ್ಟು ಹೊಸ ರಾಜ್ಯವಾಗಿ ಉದಯವಾದ ನಂತರ ತೆಲಂಗಾಣದಲ್ಲಿ ಎರಡು ಬಾರಿ ಚುನಾವಣೆ ನಡೆದಿದೆ. ಎರಡೂ ಬಾರಿಯೂ ಕೆ ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್‌ಎಸ್ ಪಕ್ಷವು ಗೆಲುವು ಸಾಧಿಸಿ ಅಧಿಕಾರದ ಗದ್ದುಗೆ ಏರಿದೆ. ಆದರೆ, ಈ ಬಾರಿ ಚುನಾವಣೆಯು ಕೆಸಿಆರ್‌ಗೆ ಸುಲಭದ ಹಾದಿಯಾಗಿ ಉಳಿದಿಲ್ಲವೆಂಬ ಮಾತುಗಳು ಕೇಳಿಬಂದಿದೆ. ಒಂದು ದಶಕಗಳ ಕಾಲ ಆಡಳಿತ ನಡೆಸಿರುವ ಕೆಸಿಆರ್ ತೆಲಂಗಾಣದ ಆಶೋತ್ತರಗಳನ್ನು ಈಡೇರಿಸಿಲ್ಲವೆಂದು ಹೇಳಲಾಗುತ್ತಿದೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಗ್ಯಾರಂಟಿಗಳಿಗೆ ಕಾಂಗ್ರೆಸ್ ಮಣೆ
ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಗ್ಯಾರಂಟಿಗಳ ಮೂಲಕ ಅಭೂತಪೂರ್ವ ಗೆಲುವು ಸಾಧಿಸಿರುವ ಕಾಂಗ್ರೆಸ್ ತೆಲಂಗಾಣದಲ್ಲೂ ಇದೇ ಪ್ರಯೋಗವನ್ನು ಮುಂದುವರಿಸಿದೆ. ರೈತರು, ಮಹಿಳೆಯರು ಹಾಗೂ ಯುವಕರನ್ನು ಗುರಿಯಾಗಿಸಿ ಕಾಂಗ್ರೆಸ್ ಪಕ್ಷವು ಗ್ಯಾರಂಟಿಗಳನ್ನು ಘೋಷಿಸಿದೆ. ತೆಲಂಗಾಣ ಚುನಾವಣೆಯಲ್ಲಿಯೂ ಗ್ಯಾರಂಟಿಗಳು ಕಾಂಗ್ರೆಸ್‌ಗೆ ಬೆಂಬಲವಾಗಿ ನಿಲ್ಲಲಿದೆ ಎಂಬ ಮಾತುಗಳನ್ನು ರಾಜಕೀಯ ತಜ್ಞರು ಹೇಳುತ್ತಿದ್ದಾರೆ.
ಜನ್‌ಮತ್ ಸಂಸ್ಥೆ ಸಮೀಕ್ಷೆ ಹೇಳುತ್ತಿರುವುದೇನು?
ಕರ್ನಾಟಕದಲ್ಲಿ ಸಮೀಕ್ಷೆ ನಡೆಸಿದ್ದ ಜನ್‌ಮತ್ ಸಂಸ್ಥೆಯು ಫಲಿತಾಂಶಕ್ಕೆ ಸಮೀಪವಾಗಿದ್ದ ಅಂಕಿಅಂಶಗಳನ್ನು ನೀಡಿತ್ತು. ಈಗ ಇದೇ ಸಂಸ್ಥೆಯು ತೆಲಂಗಾಣ ಚುನಾವಣೆಯು ಸಮೀಕ್ಷೆಯನ್ನು ನಡೆಸಿದೆ. ಜನ್‌ಮತ್ ಸಮೀಕ್ಷೆಯ ಪ್ರಕಾರ ತೆಲಂಗಾಣದಲ್ಲಿ ಕಾಂಗ್ರೆಸ್ ಬಹುಮತ ಸಾಧಿಸಲಿದೆ.

ತೆಲಂಗಾಣ ವಿಧಾನಸಭೆಯಲ್ಲಿ ಒಟ್ಟು 119 ಸ್ಥಾನಗಳಿವೆ. ಅದರಲ್ಲಿ ಕಾಂಗ್ರೆಸ್ ಪಕ್ಷವು 58 ರಿಂದ 60 ಸ್ಥಾನಗಳನ್ನು ಪಡೆಯಲಿದೆ. ಬಿಆರ್‌ಎಸ್ ಪಕ್ಷವು 43 ರಿಂದ 45 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಬಿಜೆಪಿಯು 8 ರಿಂದ 9 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಓವೈಸಿ ನೇತೃತ್ವದ ಎಐಎಂಐಎಂ ಪಕ್ಷವು 6 ರಿಂದ 7 ಕ್ಷೇತ್ರಗಳಲ್ಲಿ ಜಯಗಳಿಸಲಿದೆ. ಉಳಿದಂತೆ ಪಕ್ಷೇತರರು ಎರಡರಿಂದ ಮೂರು ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ.
ತೆಲಂಗಾಣಕ್ಕೆ ಚುನಾವಣಾ ಆಯೋಗ ಭೇಟಿ
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನೇತೃತ್ವದ ಭಾರತೀಯ ಚುನಾವಣಾ ಆಯೋಗದ (ಇಸಿಐ) ಉನ್ನತ ಮಟ್ಟದ ತಂಡವು ಮಂಗಳವಾರ ತೆಲಂಗಾಣಕ್ಕೆ ಭೇಟಿ ನೀಡಿದೆ. ಮೂರು ದಿನಗಳ ಭೇಟಿಯಲ್ಲಿ ತಂಡವು ರಾಜಕೀಯ ಪಕ್ಷಗಳು, ಜಾರಿ ಸಂಸ್ಥೆಗಳು ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಲಿದೆ.
ತಂಡವು ಮೊದಲ ದಿನದಂದು ರಾಷ್ಟ್ರೀಯ ಮತ್ತು ರಾಜ್ಯ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಸಭೆ ನಡೆಸಲಿದೆ. ಪ್ರತಿ ರಾಜಕೀಯ ಪಕ್ಷದಿಂದ ಮೂರು ಪ್ರತಿನಿಧಿಗಳನ್ನು ಸಭೆಗೆ ಆಹ್ವಾನಿಸಲಾಗಿದ್ದು, ಈ ಸಭೆಯನ್ನು ಮಧ್ಯಾಹ್ನ ನಿಗದಿಪಡಿಸಲಾಗಿದೆ. ಚುನಾವಣೆ ನಡೆಸುವ ಕುರಿತು ಪಕ್ಷಗಳ ಅಭಿಪ್ರಾಯ ಮತ್ತು ಸಲಹೆಗಳನ್ನು ಆಯೋಗ ತೆಗೆದುಕೊಳ್ಳಲಿದೆ ಎಂದು ತಿಳಿದುಬಂದಿದೆ.

ಇದರ ನಂತರ ಮುಂಬರುವ ಚುನಾವಣೆಗಳಿಗೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ಚರ್ಚಿಸಲು ಜಾರಿ ಸಂಸ್ಥೆಗಳೊಂದಿಗೆ ಸಭೆ ನಡೆಸಲಾಗುವುದು ಎಂದು ಆಯೋಗ ಹೇಳಿದೆ. ಮತದಾರರಿಗೆ ಹಣ, ಮದ್ಯ ಮತ್ತು ಇತರೆ ಆಮಿಷಗಳ ಪ್ರಭಾವವನ್ನು ಪರಿಶೀಲಿಸುವ ಕ್ರಮಗಳನ್ನು ಸಭೆಯಲ್ಲಿ ನಿರ್ಧರಿಸಲಾಗುತ್ತದೆ ಎಂದು ತಿಳಿದುಬಂದಿದೆ.
ತೆಲಂಗಾಣ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ವಿಕಾಸ್ ರಾಜ್ ಮತ್ತು ಪೊಲೀಸ್ ಪಡೆಗಳ ನೋಡಲ್ ಅಧಿಕಾರಿಗಳು ಚುನಾವಣಾ ಸಿದ್ಧತೆಯ ಬಗ್ಗೆ ಆಯೋಗದ ಜೊತೆ ಚರ್ಚೆ ನಡೆಸಲಿದ್ದಾರೆ.












Click it and Unblock the Notifications