Telangana Assembly Election: ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಅಧಿಕಾರ ಫಿಕ್ಸ್! ಲೋಕ್‌ಪೋಲ್ ಸಮೀಕ್ಷೆ ಹೇಳಿದ್ದೇನು?
ತೆಲಂಗಾಣ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ಪ್ರಸ್ತುತ ಆಡಳಿತ ನಡೆಸುತ್ತಿರುವ ಭಾರತ್ ರಾಷ್ಟ್ರ ಸಮಿತಿ (BRS) ಅಧಿಕಾರ ಉಳಿಸಿಕೊಳ್ಳುವ ಉದ್ದೇಶದಲ್ಲಿದ್ದರೆ, ಕರ್ನಾಟಕದ ಚುನಾವಣೆಯಲ್ಲಿ ಗೆದ್ದಿರುವ ಕಾಂಗ್ರೆಸ್ ತೆಲಂಗಾಣದಲ್ಲಿ ಸರ್ಕಾರ ರಚಿಸುವ ಉತ್ಸಾಹದಲ್ಲಿದೆ.
ಚುನಾವಣೆಗೆ ಮುನ್ನ ಲೋಕ್ ಪೋಲ್ ಸಂಸ್ಥೆ ಸಮೀಕ್ಷೆ ನಡೆಸಿದ್ದು, ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. ಈ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ ತೆಲಂಗಾಣದಲ್ಲಿ ಅಧಿಕಾರ ಹಿಡಿಯುವುದು ಖಚಿತವಾಗಿದೆ.

ತೆಲಂಗಾಣದಲ್ಲಿ 119 ಕ್ಷೇತ್ರಗಳಿಗೆ ವಿಧಾನಸಭೆ ಚುನಾವಣೆ ನಡೆಯಲಿದ್ದುಆಡಿಳಿತಾರೂಢ ಭಾರತ್ ರಾಷ್ಟ್ರ ಸಮಿತಿ (BRS) 36-39 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದ್ದು, ಕಾಂಗ್ರೆಸ್ 69 ರಿಂದ 72 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ. ಎಐಎಂಐಎಂ 5-6 ಸ್ಥಾನಗಳಲ್ಲಿ, ಬಿಜೆಪಿ 2-3 ಮತ್ತು ಇತರೆ 0-1 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
ಕಾಂಗ್ರೆಸ್‌ಗೆ ಭರ್ಜರಿ ಜಯಬೇರಿ!
ಈವರೆಗೂ ತೆಲಂಗಾಣದಲ್ಲಿ ನಡೆದಿರುವ ಹಲವು ಸಮೀಕ್ಷೆಗಳು ಕಾಂಗ್ರೆಸ್ ಪರವಾಗಿಯೇ ಬಂದಿವೆ. ಕಾಂಗ್ರೆಸ್ ಈ ಬಾರಿ ಸರ್ಕಾರ ರಚಿಸುವ ಉತ್ಸಾಹದಲ್ಲಿದೆ. ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಕರ್ನಾಟಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ ತೆಲಂಗಾಣದಲ್ಲಿ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಘೋಷಣೆ ಮಾಡಿದಂತೆ, ತೆಲಂಗಾಣದಲ್ಲಿ ಕೂಡ ಕಾಂಗ್ರೆಸ್ ಹಲವು ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಇದು ಕಾಂಗ್ರೆಸ್ ಪರವಾದ ಅಲೆ ಏಳಲು ಪ್ರಮುಖವಾದ ಕಾರಣ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ (BRS), ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷ (BJP) ನಡುವೆ ತ್ರಿಕೋನ ಸ್ಪರ್ಧೆ ನಡೆಯುತ್ತದೆ ಎನ್ನಲಾಗಿತ್ತಾದರೂ ಈಗ ಕಾಂಗ್ರೆಸ್ ಕಡೆ ಮತದಾರ ಒಲವು ಹೊಂದಿದ್ದಾನೆ ಎಂದು ಸಮೀಕ್ಷೆಗಳು ಹೇಳಿವೆ.
ಕಾಂಗ್ರೆಸ್‌ಗೆ ಡಿಎಂಕೆ ಬೆಂಬಲ
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷವು ತೆಲಂಗಾಣದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಮಂಗಳವಾರ ಘೋಷಿಸಿದೆ. ಅಧಿಕೃತ ಹೇಳಿಕೆಯಲ್ಲಿ, ಡಿಎಂಕೆ ತನ್ನ ತೆಲಂಗಾಣ ಘಟಕಕ್ಕೆ ಕಾಂಗ್ರೆಸ್ ಪಕ್ಷದೊಂದಿಗೆ ಸಹಕರಿಸಲು ಮತ್ತು ಚುನಾವಣಾ ಕಾರ್ಯಕಾರಿ ಸಮಿತಿಯನ್ನು (ಇಡಬ್ಲ್ಯೂಸಿ) ಸ್ಥಾಪಿಸಲು ನಿರ್ದೇಶಿಸಿದೆ.
ತಮಿಳುನಾಡಿನಲ್ಲಿ ಡಿಎಂಕೆ ಕಾಂಗ್ರೆಸ್‌ನ ಮಿತ್ರ ಪಕ್ಷವಾಗಿದೆ ಮತ್ತು ಎರಡೂ ಪಕ್ಷಗಳು ಮುಂದಿನ ವರ್ಷದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ರಚಿಸಲಾದ ಪ್ರತಿಪಕ್ಷ ಇಂಡಿಯಾ ಒಕ್ಕೂಟದ ಭಾಗವಾಗಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಹೆಚ್ಚಿನ ಅಂತರದ ಗೆಲುವನ್ನು ಸಾಧಿಸಲು ಸಕ್ರಿಯವಾಗಿ ಕೆಲಸ ಮಾಡುವಂತೆ ಡಿಎಂಕೆ ತನ್ನ ಎಲ್ಲಾ ವಿಭಾಗಗಳು ಮತ್ತು ಕಾರ್ಯಕರ್ತರನ್ನು ರಾಜ್ಯದಲ್ಲಿ ಹೇಳಿದೆ.
ಪಂಚರಾಜ್ಯಗಳ ಚುನಾವಣೆ
ತೆಲಂಗಾಣ ವಿಧಾನಸಭೆ ಚುನಾವಣೆ ನವೆಂಬರ್ 30ರಂದು ನಡೆಯಲಿದೆ. ಪಂಚರಾಜ್ಯಗಳ ಚುನಾವಣೆ ನಡೆಯುತ್ತಿದ್ದು ಒಂದೇ ದಿನ ಫಲಿತಾಂಶ ಬರಲಿದೆ. ಈಗಾಗಲೇ ಮಿಜೋರಾಂ ರಾಜ್ಯದ ಚುನಾವಣೆ ನವೆಂಬರ್ 7ರಂದು ಒಂದೇ ಹಂತದಲ್ಲಿ ನಡೆದಿತ್ತು, ಛತ್ತಿಸ್‌ಗಢದಲ್ಲಿ ಮೊದಲ ಹಂತದ ಚುನಾವಣೆ ನವೆಂಬರ್ 7 ಮತ್ತು ಎರಡನೇ ಹಂತದ ಚುನಾವಣೆ ನವೆಂಬರ್ 17ರಂದು ನಡೆದಿದೆ. ಮಧ್ಯಪ್ರದೇಶ ಚುನಾವಣೆ ಕೂಡ ನವೆಂಬರ್ 17ರಂದು ನಡೆದಿದ್ದು, ರಾಜಸ್ಥಾನ ವಿಧಾನಸಭೆ ಚುನಾವಣೆ ನವೆಂಬರ್ 23ರಂದು ನಡೆಯಲಿದೆ. ಐದು ರಾಜ್ಯಗಳ ಚುನಾವಣಾ ಫಲಿತಾಂಶ ಡಿಸೆಂಬರ್ 3ರಂದು ಪ್ರಕಟವಾಗಲಿದೆ.












Click it and Unblock the Notifications