ಅಕ್ರಮವಾಗಿ ಮಗು ಪಡೆದು ಸಾಕುತ್ತಿದ್ದ ಶಿಕ್ಷಕಿಯನ್ನು ಜೈಲು ಸೇರುವಂತೆ ಮಾಡಿದ ಸ್ವಂತ ಮಗ
ನಾಗ್ಪುರ, ಮೇ 14: ಶಿಕ್ಷಕಿಯೊಬ್ಬರು 3 ಲಕ್ಷ ರೂ. ನೀಡಿ ಮಗುವನ್ನು ಖರೀದಿಸಿ ಸಾಕುತ್ತಿದ್ದ ವಿಷಯವನ್ನು ಸ್ವಂತ ಮಗನೇ ಪೊಲೀಸರಿಗೆ ದೂರು ನೀಡಿ ಬಂಧನಕ್ಕೆ ಕಾರಣರಾಗಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಶಿಕ್ಷಕಿ ಜೊತೆಗೆ ಮಗು ಮರಾಟದಲ್ಲಿ ಭಾಗಿಯಾಗಿದ್ದ ಇಬ್ಬರು ನರ್ಸ್ ಮತ್ತು ಒಬ್ಬ ಮಧ್ಯವರ್ತಿಯನ್ನು ಕೂಡ ಬಂಧಿಸಲಾಗಿದೆ.
ಬಂಧಿತರಾಗಿರುವ ಶಿಕ್ಷಕಿಗೆ 58 ವರ್ಷಗಳಾಗಿದ್ದು ಸುರೇಂದ್ರಗಢದ ನಿವಾಸಿ. ಇವರಿಗೆ ಇಬ್ಬರು ಗಂಡು ಮಕ್ಕಳು. ಅದರಲ್ಲಿ ಕೆಲವು ದಿನಗಳ ಹಿಂದೆ ಕಿರಿಯ ಮಗ ಆತ್ಮಹತ್ಯೆ ಮಾಡಿಕೊಂಡಿದ್ದ. ಆತನ ಸಾವಿನ ನಂತರ ಹಿರಿಯ ಮಗ ಆಸ್ತಿಗಾಗಿ ಹಿಂಸಿಸುತ್ತಿದ್ದ. ಒಮ್ಮೆ ಹಲ್ಲೆಯನ್ನೂ ಕೂಡ ಮಾಡಿದ್ದ. ಈ ಘಟನೆಯ ಕುರಿತು ಶಿಕ್ಷಕಿ ಪೊಲೀಸರಿಗೂ ದೂರು ನೀಡಿದ್ದರು.
ಐವಿಆರ್ ಮೂಲಕ ಮಗು ಪಡೆಯಲು ಮಾಡಿದ ಯತ್ನ ವಿಫಲ:
ಆಸ್ತಿಯ ಆಸೆ, ಕುಡಿತಕ್ಕೆ ದಾಸನಾಗಿದ್ದ ಹಿರಿಯ ಮಗ ತಮ್ಮ ವೃದ್ಧಾಪ್ಯದಲ್ಲಿ ನೋಡಿಕೊಳ್ಳುವುದಿಲ್ಲ ಎಂಬ ಯೋಚನೆ ಮಾಡಿದ ಶಿಕ್ಷಕಿ ಕೃತಕ ಗರ್ಭಧಾರಣೆಯ ಮೂಲಕ ಮಗುವನ್ನು ಪಡೆಯುವ ನಿರ್ಧಾರ ಮಾಡಿದ್ದರು. ಆದರೆ ಅದು ಫಲಿಸದ ಕಾರಣ ಹಣ ನೀಡಿ ಮಗುವನ್ನು ಖರೀದಿಸುವ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದರು.
ನರ್ಸ್‌ಗಳ ಸಹಾಯದಿಂದ ಮಗು ಖರೀದಿ
ಐವಿಆರ್ ಮೂಲಕ ಮಗು ಪಡೆಯಲು ವಿಫಲರಾದ ಶಿಕ್ಷಕಿ ಮಗುವಿನ ಹುಡುಕಾಟದಲ್ಲಿದ್ದಾಗ ಖಾಸಗಿ ಆಸ್ಪತ್ರೆಯೊಂದರಲ್ಲಿ ಇಬ್ಬರು ನರ್ಸ್‌ಗಳ ಪರಿಚಯವಾಗಿದೆ. ಅವರ ಬಳಿ ಆಕೆ ತನ್ನ ಹತಾಶೆಯನ್ನು ಅವರೊಂದಿಗೆ ಹಂಚಿಕೊಂಡಾಗ, ನರ್ಸ್‌ಗಳು ಆಕೆಯನ್ನು ಸಲಾಮುಲ್ಲಾ ಎಂಬಾತನನ್ನು ಸಂಪರ್ಕಿಸಿದ್ದಾರೆ. ಸೆಪ್ಟೆಂಬರ್ 2019 ರಲ್ಲಿ, ವ್ಯಕ್ತಿ ಮಗುವನ್ನು 3 ಲಕ್ಷ ರೂ.ಗೆ ಮಾರಾಟ ಮಾಡಿದ್ದನು. ಇದು ಮಹಿಳೆಯ ಹಿರಿಯ ಮಗನಿಗೆ ಸಂತೋಷವಾಗಲಿಲ್ಲ. ಹಾಗಾಗಿ ಇತ್ತೀಚೆಗೆ ತನ್ನ ತಾಯಿ ಮಗುವನ್ನು ಅಕ್ರಮವಾಗಿ ಖರೀದಿಸಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದರು.
ನಾಲ್ವರ ಬಂಧನ
ಶಿಕ್ಷಕಿಯ ಮಗ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲು ಮಾಡಿಕೊಂಡ ನಗರದ ಮಾನವ ಕಳ್ಳ ಸಾಗಣೆ ವಿರೋಧಿ ಘಟಕದ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಿ ಶಿಕ್ಷಕಿ, ಅವರಿಗೆ ನೆರವಾಗಿದ್ದ ಇಬ್ಬರು ನರ್ಸ್ ಮತ್ತು ಏಜೆಂಟ್ ಸಲಾಮುಲ್ಲನನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಪೊಲೀಸ್, ಶನಿವಾರದವರೆಗೆ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.