Tamil Nadu: ಕೊಯಮತ್ತೂರು ಸ್ಫೋಟದ ಉಗ್ರನ ಅಂತ್ಯಕ್ರಿಯೆಗೆ ಭದ್ರತೆ- ಅಣ್ಣಾಮಲೈ ಬಂಧನ
ಕೊಯಮತ್ತೂರಿನಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಮತ್ತು ಇತರ ಹಲವು ಮುಖಂಡರನ್ನು ಶುಕ್ರವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ. 1998ರ ಸರಣಿ ಸ್ಫೋಟದ ಮಾಸ್ಟರ್ ಮೈಂಡ್ ಆಗಿದ್ದ ಬಾಷಾ ಅವರನ್ನು ವೈಭವೀಕರಿಸುವುದನ್ನು ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಅಣ್ಣಾಮಲೈ ಅವರನ್ನು ಬಂಧಿಸಲಾಗಿದೆ.
1998ರಲ್ಲಿ ನಡೆದ ಸ್ಫೋಟದಲ್ಲಿ 56 ಜನರು ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದರು. ಈ ಸರಣಿ ಸ್ಫೋಟದ ಮಾಸ್ಟರ್ ಮೈಂಡ್ ಆಗಿದ್ದ ಬಾಷಾ ಅನಾರೋಗ್ಯದ ಕಾರಣ ಪೆರೋಲ್ ಮೇಲೆ ಜೈಲಿನಿಂದ ಹೊರಬಂದು ಸಾವನ್ನಪ್ಪಿದ್ದರು. ಅವರ ಅಂತ್ಯಕ್ರಿಯೆಗೆ ಬಿಗಿ ಭದ್ರತೆ ಒದಗಿಸಲಾಗಿತ್ತು.

ಬಾಷಾ ಜೈನಿನಿಂದ ಹೊರಬಂದು ಡಿ.17ರಂದು ಮೃತಪಟ್ಟಿದ್ದಾನೆ. ಬಾಂಬ್ ಸ್ಪೋಟ ಪ್ರಕರಣದಲ್ಲಿ ಈತನಿಗೆ ಜೀವಾವಧಿ ಶಿಕ್ಷೆಯನ್ನು ನೀಡಲಾಗಿತ್ತು. ಆದರೆ ಈತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾನೆ. ಈತನ ಸಾವಿನ ಬಳಿಕ ಸಾವಿರಾರು ಜನರು ಈತನನ್ನು ನೋಡಲು ಆಗಮಿಸಿದರು. ಇದಕ್ಕಾಗಿ ಪೊಲೀಸ್ ಬಿಗಿ ಭದ್ರತೆಯನ್ನು ಒದಗಿಸಲಾಗಿತ್ತು.
56 ಜನರ ಸಾವಿಗೆ ಕಾರಣನಾದ ಅಪರಾಧಿ ಭಯೋತ್ಪಾದಕನ ಶವಯಾತ್ರೆಗೆ ಅನುಮತಿ ನೀಡಿದ್ದಕ್ಕಾಗಿ ಅಣ್ಣಾಮಲೈ ಅವರು ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದ್ದಾರೆ. ಒಬ್ಬ ಭಯೋತ್ಪಾದಕನ ಸಾವನ್ನು ವೈಭವೀಕರಿಸಲಾಗುತ್ತಿದೆ ಎಂದು ಡಿಎಂಕೆ ಸರ್ಕಾರದ ವಿರುದ್ಧ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆರೋಪ ಮಾಡಿದ್ದಾರೆ. ಇದನ್ನು ಖಂಡಿಸಿ ಕಳೆದ ದಿನ ಪ್ರತಿಭಟನೆ ಮಾಡುವ ವೇಳೆ ಅಣ್ಣಾಮಲೈ ಅವರನ್ನ ಪೊಲೀಸರು ಬಂಧಿಸಿದ್ದಾರೆ.
ಎಂಕೆ ಸ್ಟಾಲಿನ್ ಅವರ ವಿರುದ್ಧ ಅಣ್ಣಾಮಲೈ ಟೀಕೆ
ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಎಸ್‌ಎ ಬಾಷಾ ಅವರ ಅಂತ್ಯಕ್ರಿಯೆಗೆ ಅನುಮತಿ ನೀಡಿದ್ದಕ್ಕಾಗಿ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಟೀಕಿಸಿ ಪೋಸ್ಟ್ ಮಾಡಿದ್ದಾರೆ. ಡಿಎಂಕೆ ಸರ್ಕಾರ ಪೊಲೀಸರ ಮೂಲಕ ಹಿಂದೂ ಮುನ್ನಾನಿ ರಾಜ್ಯಾಧ್ಯಕ್ಷ ಕಾಡೇಶ್ವರ್ ಸಿ.ಸುಬ್ರಮಣ್ಯಂ, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶಿವಲಿಂಗಂ ಮತ್ತು ನನ್ನನ್ನು ಬಂಧಿಸಿತು ಎಂದು ಅವರು ಬರೆದಿದ್ದಾರೆ.
ಯಾಕೆಂದರೆ ಅವರು ಕೊಯಮತ್ತೂರು ಬಾಂಬ್ ಸ್ಫೋಟದ ಭಯೋತ್ಪಾದಕರನ್ನು ಬೆಂಬಲಿಸುತ್ತಿರುವ ಡಿಎಂಕೆ ಸರ್ಕಾರವನ್ನು ಖಂಡಿಸಲು ಕರಾಳ ದಿನಾಚರಣೆಯ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಭಯೋತ್ಪಾದಕರ ಅಂತಿಮ ಸಂಸ್ಕಾರಕ್ಕೆ ಭದ್ರತೆ ಒದಗಿಸುವ ಮೂಲಕ ಡಿಎಂಕೆಯು ವೋಟ್ ಬ್ಯಾಂಕ್ ರಾಜಕಾರಣದ ಆಟ ಆಡುತ್ತಿದೆ ಎಂದು ಅಣ್ಣಾಮಲೈ ಆರೋಪಿಸಿದರು. ತಮಿಳುನಾಡಿನ ಜನರು ಶೀಘ್ರದಲ್ಲೇ ಪ್ರತ್ಯುತ್ತರ ನೀಡಲಿದ್ದಾರೆ ಎಂದು ಅಣ್ಣಾಮಲೈ ಆಕ್ರೋಶ ಹೊರಹಾಕಿದ್ದಾರೆ.
ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ನಂತರ ಕೇಂದ್ರ ಸಚಿವ ಎಲ್ ಮುರುಗನ್ ಕೂಡ ತಮಿಳುನಾಡು ಸರ್ಕಾರವನ್ನು ಟೀಕಿಸಿದ್ದಾರೆ. 56 ಜನರ ಸಾವಿಗೆ ಕಾರಣವಾದ 1998ರ ಕೊಯಮತ್ತೂರು ಸ್ಫೋಟದಲ್ಲಿ ಭಾಗಿಯಾದ ಭಯೋತ್ಪಾದಕರನ್ನು ಡಿಎಂಕೆ ಸರ್ಕಾರ ಬೆಂಬಲಿಸುತ್ತಿದೆ ಎಂದು ಅವರು ಆಕ್ರೋಶಗೊಂಡರು. ಇದರೊಂದಿಗೆ ಮಹಾರಾಷ್ಟ್ರ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಕೂಡ ಈ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದು, ಈ ಕಾಯ್ದೆ ಅಮಾಯಕರ ಹತ್ಯೆಯನ್ನು ಉತ್ತೇಜಿಸುತ್ತಿದೆಯೇ ಎಂದು ಕೇಳಿದ್ದಾರೆ. ಆದರೆ ಮೆರವಣಿಗೆಯನ್ನು ಸಮರ್ಥಿಸಿಕೊಂಡಿರುವ ಡಿಎಂಕೆ ವಕ್ತಾರ ಟಿಕೆಎಸ್ ಇಳಂಗೋವನ್, ಇದು ಕುಟುಂಬದ ಹಕ್ಕು ಮತ್ತು ಸರ್ಕಾರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications