Indus Valley Scripts: ಇತಿಹಾಸ ತಜ್ಞರಿಗೆ $1 ಮಿಲಿಯನ್ ಆಫರ್ ಕೊಟ್ಟ ತಮಿಳುನಾಡು ಸಿಎಂ ಸ್ಟಾಲಿನ್
ತಮಿಳುನಾಡು ಸಿಎಂ ಸ್ಟಾಲಿನ್ ಇತಿಹಾಸ ತಜ್ಞರಿಗೆ ಭರ್ಜರಿ ಆಫರ್ ಕೊಟ್ಟಿದ್ದಾರೆ. ಸಿಂಧೂ ಕಣಿವೆ ನಾಗರಿಕತೆಯ ಲಿಪಿಗಳನ್ನು ಅರ್ಥಮಾಡಿಸಲು ಯಶಸ್ವಿಯಾದ ತಜ್ಞರು ಅಥವಾ ಸಂಸ್ಥೆಗಳಿಗೆ 1 ಮಿಲಿಯನ್ ಡಾಲರ್ ಬಹುಮಾನ ಘೋಷಣೆ ಮಾಡಿದ್ದಾರೆ. ಸ್ಟಾಲಿನ್ ಹೇಳಿದ ಕೆಲಸ ಮಾಡಿದವರಿಗೆ ಬರೋಬ್ಬರಿ 8.5 ಕೋಟಿ ರೂಪಾಯಿ ಬಹುಮಾನ ಸಿಗಲಿದೆ.
"ಒಂದು ಕಾಲದಲ್ಲಿ ಪ್ರವರ್ಧಮಾನಕ್ಕೆ ಬಂದ ಸಿಂಧೂ ಕಣಿವೆ ನಾಗರಿಕತೆಯ ಲಿಪಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ, 100 ವರ್ಷಗಳಿಂದ ಅಧ್ಯಯನ ಮಾಡುತ್ತಿದ್ದರೂ ಇನ್ನೂ ನಿಗೂಢವಾಗಿಯೇ ಉಳಿದಿದೆ. ಪುರಾತತ್ವಶಾಸ್ತ್ರಜ್ಞರು, ತಮಿಳು ಕಂಪ್ಯೂಟರ್ ಸಾಫ್ಟ್‌ವೇರ್ ತಜ್ಞರು ಮತ್ತು ಪ್ರಪಂಚದಾದ್ಯಂತ ಕಂಪ್ಯೂಟರ್ ತಜ್ಞರು ಲಿಪಿಯನ್ನು ಅರ್ಥ ಮಾಡಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಸಂಶೋಧನೆಗೆ ಉತ್ತೇಜನ ನೀಡಲು ನಮ್ಮ ಸರ್ಕಾರ 1 ಮಿಲಿಯನ್ ಡಾಲರ್ ನೀಡಲಿದೆ" ಎಂದು ಹೇಳಿದರು.

ಭಾನುವಾರ ಚೆನ್ನೈನಲ್ಲಿ ನಡೆದ ಸರ್ ಜಾನ್ ಮಾರ್ಷಲ್ ಸಿಂಧೂ ಕಣಿವೆ ನಾಗರಿಕತೆಯ ಆವಿಷ್ಕಾರದ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯ ಪುರಾತತ್ವ ಇಲಾಖೆ ಮತ್ತು ಸಿಂಧೂ ಸಂಶೋಧನಾ ಕೇಂದ್ರ ಜಂಟಿಯಾಗಿ ಸಿಂಧೂ ಕಣಿವೆ ನಾಗರಿಕತೆಯ ಸಂಶೋಧನೆಯನ್ನು ಮುಂದುವರೆಸಲು ಪುರಾತತ್ವಶಾಸ್ತ್ರಜ್ಞ ಮತ್ತು ಶಾಸನಶಾಸ್ತ್ರಜ್ಞ ಐರಾವತಂ ಮಹಾದೇವನ್ ಹೆಸರಿನಲ್ಲಿ ಪೀಠವನ್ನು ಸ್ಥಾಪಿಸಲು ಮತ್ತು ರೋಜಾ ಮುತ್ತಯ್ಯ ಗ್ರಂಥಾಲಯ ಸ್ಥಾಪಿಸಲು ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗಿ 2 ಕೋಟಿ ರೂಪಾಯಿ ಅನುದಾನವನ್ನು ಸಿಎಂ ಸ್ಟಾಲಿನ್ ಘೋಷಣೆ ಮಾಡಿದ್ದಾರೆ.
ತಮಿಳುನಾಡಿನ ಇತಿಹಾಸಕ್ಕೆ ನಂಟು
ಸಿಂಧೂ ಕಣಿವೆ ನಾಗರೀಕತೆಲ್ಲಿ ವಾಣಿಜ್ಯ ಉದ್ದೇಶಗಳಿಗೆ ಬಳಸಲಾದ ಮುದ್ರೆಗಳಲ್ಲಿನ ಚಿಹ್ನೆಗಳು, ತಮಿಳುನಾಡಿನ ಪುರಾತತ್ವ ಶಾಸ್ತ್ರ ಇಲಾಖೆ ಉತ್ಖನನ ಮಾಡುವ ವೇಳೆ ಕಂಡುಬಂದಿರುವ ಚಿಹ್ನೆಗಳ ಜೊತೆ 60 ಪ್ರತಿಶತ ಹೋಲಿಕೆಯಾಗುತ್ತವೆ ಎಂದು ಸಿಎಂ ಸ್ಟಾಲಿನ್ ಹೇಳಿದ್ದಾರೆ.
ಸಿಂಧೂ ಕಣಿವೆ ನಾಗರಿಕತೆಯಲ್ಲಿ ಕಂಡು ಬಂದಿರುವ ಪಾತ್ರೆಗಳಲ್ಲಿ ಕಂಡು ಬರುವ ಚಿಹ್ನೆಗಳು ಮತ್ತು ತಮಿಳುನಾಡಿನಲ್ಲಿ ಉತ್ಖನನದ ವೇಳೆ ಸಿಕ್ಕಿರುವ ಮಣ್ಣಿನ ಪಾತ್ರೆಗಳಲ್ಲಿ ಕಂಡುಬರುವ ಚಿಹ್ನೆಗಳಲ್ಲಿ 90% ಸಾಮ್ಯತೆ ಹೊಂದಿವೆ ಎಂದು ಅವರು ಹೇಳಿದ್ದಾರೆ.
ಆರ್ಯ - ಡ್ರಾವಿಡ ಇತಿಹಾಸ
ಸರ್ ಜಾನ್ ಮಾರ್ಷಲ್ ಮಾಡಿದ ಆವಿಷ್ಕಾರ ಭಾರತ ಇತಿಹಾಸದ ವ್ಯಾಖ್ಯಾನವನ್ನೇ ಬದಲಾಯಿಸಿದೆ. ಆರ್ಯನ್ ಮತ್ತು ಸಂಸ್ಕೃತ ಭಾರತದ ಮೂಲ ಎನ್ನುವ ಕಲ್ಪನೆಯನ್ನು ಇದು ಬದಲಾಯಿಸಿದ್ದು, ಸಿಂಧೂ ಕಣಿವೆ ನಾಗರೀಕತೆಯು ಆರ್ಯರ ನಾಗರಿಕತೆಗಿಂದ ಹಿಂದಿನದು ಮತ್ತು ಸಿಂಧೂ ಕಣಿವೆಯಲ್ಲಿ ಮಾತನಾಡುವ ಭಾಷೆ ದ್ರಾವಿಡ ಭಾಷೆಯಾಗಿರಬಹುದು ಎಂದು ಅವರು ವಾದಿಸಿದ್ದು ಅದಕ್ಕೆ ಈಗ ಮತ್ತಷ್ಟು ಬಲ ಬಂದಿದೆ ಎಂದರು.
ಸಿಂಧೂ ಕಣಿವೆಯಲ್ಲಿ ಸಿಕ್ಕಿರುವ ವಸ್ತುಗಳಲ್ಲಿ ದ್ರಾವಿಡ ಜನಾಂಗದ ಸಂಕೇತವಾಗಿರುವ ಗೂಳಿಗಳಿವೆ ಎಂದು ಹೇಳಿದ್ದಾರೆ. ಎತ್ತುಗಳು ಸಿಂಧೂ ಕಣಿವೆಯಿಂದ ತಮಿಳುನಾಡಿನಲ್ಲಿ ಜಲ್ಲಿಕಟ್ಟು ನಡೆಯುವ ಸ್ಥಳವಾದ ಅಲಂಗನಲ್ಲೂರ್ ವರೆಗೆ ಹರಡಿದೆ. ಪುರಾತನ ತಮಿಳು ಸಾಹಿತ್ಯದಲ್ಲಿ ಗೂಳಿಗಳನ್ನು ಪಳಗಿಸುವ ಬಗ್ಗೆ ಚರ್ಚಿಸಲಾಗಿದೆ. ಸಿಂಧೂ ಕಣಿವೆಯಲ್ಲಿ ಸಿಕ್ಕಿರುವ ವಸ್ತುಗಳಲ್ಲೂ ಗೂಳಿಗಳನ್ನು ಪಳಗಿಸುತ್ತಿರುವ ಯುವಕರ ಚಿತ್ರಗಳಿವೆ ಎಂದು ಹೇಳಿದರು.












Click it and Unblock the Notifications