ತಮಿಳುನಾಡು ಬಿಎಸ್‌ಪಿ ಮುಖ್ಯಸ್ಥ ಕೆ ಆರ್ಮ್‌ಸ್ಟ್ರಾಂಗ್ ಹತ್ಯೆ ಆರೋಪಿ ಎನ್‌ಕೌಂಟರ್‌ನಲ್ಲಿ ಹತ್ಯೆ
ಚೆನ್ನೈ, ಜುಲೈ. 14: ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ತಮಿಳುನಾಡು ಮುಖ್ಯಸ್ಥ ಕೆ ಆರ್ಮ್‌ಸ್ಟ್ರಾಂಗ್ ಹತ್ಯೆಯ ಆರೋಪಿಗಳಲ್ಲಿ ಒಬ್ಬನನ್ನು ಶನಿವಾರ ರಾತ್ರಿ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಮಿಳುನಾಡಿನ ಬಿಎಸ್‌ಪಿ ಮುಖ್ಯಸ್ಥರನ್ನು ಜುಲೈ 5 ರಂದು ಆರು ಅಪರಿಚಿತ ವ್ಯಕ್ತಿಗಳು ಹತ್ಯೆ ಮಾಡಿದ್ದರು.
ಬಿಎಸ್‌ಪಿ ರಾಜ್ಯ ಮುಖ್ಯಸ್ಥರ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ತಿರುವೆಂಗಡಂ ಅವರನ್ನು ಚೆನ್ನೈನ ಮಾಧವರಂ ಬಳಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಿರುವೆಂಗಡಂ ಕೊಲೆಗೂ ಮುನ್ನ, ಬಿಎಸ್‌ಪಿ ನಾಯಕನ ಚಟುವಟಿಕೆಗಳ ಮೇಲೆ ನಿರಂತರ ನಿಗಾ ಇರಿಸಿಕೊಂಡು ಹಲವು ದಿನಗಳ ಕಾಲ ಆರ್ಮ್‌ಸ್ಟ್ರಾಂಗ್‌ನನ್ನು ಹಿಂಬಾಲಿಸುತ್ತಿದ್ದ ಎನ್ನಲಾಗಿದೆ.

ಕೆ ಆರ್ಮ್‌ಸ್ಟ್ರಾಂಗ್ ಅವರನ್ನು ಜುಲೈ 5 ರಂದು ಚೆನ್ನೈನ ಪೆರಂಬೂರ್ ಪ್ರದೇಶದಲ್ಲಿನ ಅವರ ನಿವಾಸದ ಬಳಿ ಆರು ಅಪರಿಚಿತ ವ್ಯಕ್ತಿಗಳು ಕೊಂದು ಹಾಕಿದ್ದರು. ಬೈಕ್‌ನಲ್ಲಿ ಬಂದ ವ್ಯಕ್ತಿಗಳ ಗುಂಪು ಆರ್ಮ್‌ಸ್ಟ್ರಾಂಗ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿತ್ತು. ರಸ್ತೆಯಲ್ಲಿ ಮಾರಣಾಂತಿಕವಾಗಿ ಗಾಯಗೊಂಡು ಬಿದ್ದಿದ್ದ ಬಿಎಸ್ಪಿ ಮುಖ್ಯಸ್ಥರನ್ನು ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಕನಿಷ್ಠ 11 ಶಂಕಿತರನ್ನು ಬಂಧಿಸಲಾಗಿದೆ. ಈ ಘಟನೆಯು ರಾಜ್ಯದಲ್ಲಿ ದೊಡ್ಡ ರಾಜಕೀಯ ಆಕ್ರೋಶಕ್ಕೆ ಕಾರಣವಾಗಿತ್ತು. ವಿರೋಧ ಪಕ್ಷಗಳು ಎಂಕೆ ಸ್ಟಾಲಿನ್ ನೇತೃತ್ವದ ತಮಿಳುನಾಡು ಸರ್ಕಾರವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿವೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ವೈಫಲ್ಯವನ್ನು ಮುಂದಿಟ್ಟುಕೊಂಡು ಆರೋಪ ಮಾಡಿವೆ.
ಬಿಎಸ್‌ಪಿ ವರಿಷ್ಠೆ ಮಾಯಾವತಿ ಅವರು ಆರ್ಮ್‌ಸ್ಟ್ರಾಂಗ್ ಹತ್ಯೆಯ ಕುರಿತು ಸಿಬಿಐ ತನಿಖೆಗೆ ಒತ್ತಾಯಿಸಿದರು ಇದುವರೆಗೆ ಬಂಧಿಸಲ್ಪಟ್ಟವರು ನಿಜವಾದ ಅಪರಾಧಿಗಳಲ್ಲ ಎಂದು ಹೇಳಿದ್ದಾರೆ. ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಲು ತನಿಖೆಯನ್ನು ಕೇಂದ್ರ ಏಜೆನ್ಸಿಗೆ ವಹಿಸಬೇಕು ಎಂದು ಅವರು ಮುಖ್ಯಮಂತ್ರಿ ಸ್ಟಾಲಿನ್ ಅವರನ್ನು ಒತ್ತಾಯಿಸಿದ್ದಾರೆ.
ಇತ್ತ, ಮುಖ್ಯಮಂತ್ರಿ ಸ್ಟಾಲಿನ್ ಅವರು ಆರ್ಮ್ಸ್ಟ್ರಾಂಗ್ ಅವರ ಕುಟುಂಬವನ್ನು ಭೇಟಿ ಮಾಡಿ, ಅಪರಾಧಿಗಳಿ ಶಿಕ್ಷೆಯಾಗಲಿದೆ. ನ್ಯಾಯ ಸಿಗಲಿದೆ ಎಂದು ಭರವಸೆ ನೀಡಿದ್ದಾರೆ. ಬಿಎಸ್‌ಪಿ ನಾಯಕನ ಪತ್ನಿ ಮತ್ತು ಇತರ ಕುಟುಂಬ ಸದಸ್ಯರಿಗೆ ಸಂತಾಪ ಮತ್ತು ಸಹಾನುಭೂತಿ ವ್ಯಕ್ತಪಡಿಸಿದ ಅವರು, ಭೀಕರ ಹತ್ಯೆಯಲ್ಲಿ ಭಾಗಿಯಾಗಿರುವ ಎಲ್ಲರಿಗೂ ಕಾನೂನಿನ ಪ್ರಕಾರ ಶಿಕ್ಷೆಯಾಗಲಿದೆ ಎಂದು ಭರವಸೆ ನೀಡಿದ್ದಾರೆ.












Click it and Unblock the Notifications