ತಮಿಳುನಾಡು ವಿಧಾನಸಭೆ ಚುನಾವಣೆ: ಬಿಜೆಪಿಯಿಂದ "ಟಾರ್ಗೆಟ್ ಮಧುರೈ" ಪ್ಲ್ಯಾನ್ ?!
ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿರುವ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬರುವುದಕ್ಕೆ ಬಿಜೆಪಿ ದಶಕಗಳಿಂದ ಪ್ರಯತ್ನಿಸುತ್ತಿದೆ. ಆದರೆ ಅದು ಇಂದಿಗೂ ಸಾಧ್ಯವಾಗಿಲ್ಲ. ಕೇರಳ ಹಾಗೂ ತಮಿಳುನಾಡಿನಲ್ಲಿ ಬಿಜೆಪಿ ಒಮ್ಮೆಯೂ ಅಧಿಕಾರಕ್ಕೆ ಬಂದಿಲ್ಲ. ಅಲ್ಲದೇ ಈ ರಾಜ್ಯಗಳಲ್ಲಿ ಶಾಸಕರು ಹಾಗೂ ಸಂಸದರನ್ನು ಆಯ್ಕೆ ಮಾಡುವುದಕ್ಕೂ ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. 2024ನೇ ಸಾಲಿನ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಿಂದ ಒಬ್ಬೇ ಒಬ್ಬ ಸಂಸದರೂ ಬಿಜೆಪಿಯಿಂದ ಆಯ್ಕೆಯಾಗಿಲ್ಲ. ಅಲ್ಲದೇ ಕೇರಳದಲ್ಲಿ ಇದೇ ಮೊದಲ ಬಾರಿಗೆ ತ್ರಿಶೂರ್‌ನಿಂದ ಬಿಜೆಪಿ ಸಂಸದ ಸುರೇಶ್ ಗೋಪಿ ಅವರು ಆಯ್ಕೆಯಾಗಿದ್ದಾರೆ. ಸುರೇಶ್ ಗೋಪಿ ರಾಜಕಾರಣಿ ಹಾಗೂ ಪ್ರಸಿದ್ಧ ನಟರೂ ಹೌದು. ಅವರು ಈಗ ಕೇಂದ್ರ ಸಚಿವರಾಗಿದ್ದಾರೆ. ಕೇರಳದಲ್ಲಿ ಅನುಸರಿಸಿದ ತಂತ್ರವನ್ನೇ ತಮಿಳುನಾಡಿನಲ್ಲೂ ಅನುಸರಿಸಲು ಬಿಜೆಪಿ ಮುಂದಾದಂತಿದೆ.
ಹೌದು ಕೇರಳದಲ್ಲಿ ಈ ಬಾರಿ ಸಂಸದರಾಗಿ ಸುರೇಶ್ ಗೋಪಿ ಅವರು ಆಯ್ಕೆಯಾಗುವುದಕ್ಕೆ ಹಲವು ಕಾರಣಗಳಿವೆ. ಅದರಲ್ಲಿ ಹಿಂದೂ ಧರ್ಮದ ವಿಚಾರವೂ ಕಾರಣ. ಕೇರಳ ಸರ್ಕಾರದ ವೈಫಲ್ಯ ಹಾಗೂ ನಿರ್ಲಕ್ಷ್ಯವೂ ಇದರಲ್ಲಿ ಕೆಲಸ ಮಾಡಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಜಾಣ್ಮೆಯಿಂದ ಕೇರಳದಲ್ಲಿ ಬಿಜೆಪಿ ಅವಕಾಶ ಬಳಸಿಕೊಂಡಿತ್ತು.

ಅದೇ ರೀತಿ ತಮಿಳುನಾಡಿನಲ್ಲಿ 2026ನೇ ಸಾಲಿನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲೂ ಗೆಲುವುದಕ್ಕೆ ಬಿಜೆಪಿ ಕೆಲವೊಂದು ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಇನ್ನು ತಮಿಳುನಾಡಿನಲ್ಲಿ ಬಿಜೆಪಿಯ ಗೆಲುವಿನ ಹಾದಿ ಸುಲಭವಲ್ಲ ಎನ್ನುವುದು ಬಿಜೆಪಿಗೂ ಗೊತ್ತಿದೆ. ಇದೇ ಕಾರಣಕ್ಕೆ ಸಾಧ್ಯವಾದಷ್ಟು ಹೆಚ್ಚು ಸೀಟುಗಳನ್ನಾದರೂ ಗೆಲ್ಲಬೇಕು ಎಂದು ಯೋಜನೆ ರೂಪಿಸುತ್ತಿದೆ.
ಇದರ ಭಾಗವಾಗಿ ಟಾರ್ಗೆಟ್ ಮಧುರೈ ಎನ್ನುವುದು ಬಿಜೆಪಿಯ ಪ್ಲ್ಯಾನ್ ಇರುವಂತೆ ಇದೆ. ಅದಕ್ಕೆ ಸಾಕ್ಷಿ ಈಚೆಗೆ ತಮಿಳುನಾಡಿನ ಮಧುರೈನಲ್ಲಿ ನಡೆದ ಬಿಜೆಪಿಯ ಬೃಹತ್ ಸಮಾವೇಶ. ಬಿಜೆಪಿಯು ಮಧುರೈನಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಿತ್ತು. ಇದು ಹಿಂದೂ ಹಾಗೂ ಹಿಂದೂ ವಿಚಾರ ಕೇಂದ್ರಿತವಾಗಿತ್ತು ಎನ್ನುವುದು ಗಮನಿಸಬೇಕಾದ ಅಂಶ.
ತಮಿಳುನಾಡಿನಲ್ಲಿ ಹಿಂದೂಗಳ ಮೇಲೆ ಯಾವ ರೀತಿ ಅನ್ಯಾಯವಾಗುತ್ತಿದೆ ಹಾಗೂ ಹಿಂದೂಗಳನ್ನು ತಮಿಳುನಾಡಿನಲ್ಲಿ ಯಾವ ರೀತಿ ಹಲ್ಲೆ ಆಗುತ್ತಿದೆ ಎಂದು ಬಿಜೆಪಿ ವಾದ ಮಾಡಿತ್ತು. ಇದಕ್ಕೆ ಬಿಜೆಪಿ ಕೆಲವೊಂದು ವಿಡಿಯೋಗಳನ್ನೂ ಸಮಾವೇಶದಲ್ಲಿ ಹಂಚಿಕೊಂಡಿತ್ತು. ಕೇರಳದ ತ್ರಿಶೂರ್‌ನಲ್ಲಿ ತ್ರಿಶೂರ್ ಉತ್ಸವದಲ್ಲಿ ಏರ್ಪಟ್ಟಿದ್ದ ಗೊಂದಲದ ಸಂದರ್ಭದಲ್ಲಿ ಸುರೇಶ್ ಗೋಪಿ ಅವರು ಎಂಟ್ರಿ ಕೊಟ್ಟಿದ್ದರು. ದೇವಾಲಯದಲ್ಲಿ ಈ ಉತ್ಸವ ನಡೆಯುವ ಸಂದರ್ಭದಲ್ಲಿ ವಿವಾದವೊಂದು ಸೃಷ್ಟಿಯಾಗಿತ್ತು.
ಪೊಲೀಸ್ ಅಧಿಕಾರಿಯೊಬ್ಬರು ಸರಿಯಾಗಿ ಕಾರ್ಯ ನಿರ್ವಹಿಸದೆ ಇರುವುದು ವಿವಾದಕ್ಕೆ ಕಾರಣವಾಗಿತ್ತು. ತ್ರಿಶೂರ್‌ನಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚಾಗಿದೆ. ಅಲ್ಲದೇ ಸುರೇಶ್ ಗೋಪಿ ವ್ಯಕ್ತಿಯಾಗಿ ಹಾಗೂ ಸಿನಿಮಾ ನಟರಾಗಿಯೂ ಕೇರಳದಲ್ಲಿ ಪ್ರಸಿದ್ಧರಾಗಿದ್ದಾರೆ. ಈ ಎಲ್ಲಾ ವಿಚಾರಗಳು ಅವರು ಅಲ್ಲಿ ಗೆಲ್ಲುವುದಕ್ಕೆ ಕಾರಣವಾಗಿತ್ತು. ಅದೇ ರೀತಿ ಮಧುರೈ ತಮಿಳುನಾಡಿನ ದೇವಾಲಯಗಳ ನಗರ ಎಂದೇ ಖ್ಯಾತಿ ಗಳಿಸಿದೆ. ಈಚೆಗೆ ಈ ನಗರದಲ್ಲೇ ಬೃಹತ್ ಸಮಾವೇಶ ನಡೆದಿದೆ. ಹೀಗಾಗಿ, ಈ ಕ್ಷೇತ್ರದಲ್ಲಿ ಬಿಜೆಪಿ ಹೆಚ್ಚು ಸಕ್ರಿಯವಾಗಿದೆ ಎಂದು ಹೇಳಲಾಗುತ್ತಿದೆ. ಇದು ಮುಂದಿನ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.
கடவுளை கல்லாக நினைத்து தூக்கி போட்டு உடைப்பதோடு, இந்து மதத்தை இழிவாக பேசி வரும் @arivalayam கட்சியினருக்கு முருகன் அருள் கிடைக்காது
— BJP Tamilnadu (@BJP4TamilNadu) June 27, 2025
- நமது தலைவர் திரு.@NainarBJP அவர்கள்.! pic.twitter.com/7eCyvbmg64
5 ಲಕ್ಷ ಜನ: ಇನ್ನು ತಮಿಳುನಾಡಿನ ಮಧುರೈನಲ್ಲಿ ಈಚೆಗೆ ಬಿಜೆಪಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಬರೋಬ್ಬರಿ 5 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ಅಪಾರ ಪ್ರಮಾಣದ ಜನ ಸೇರಿರುವುದು ಆಡಳಿತರೂಢ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷಕ್ಕೆ ಶಾಕ್ ಕೊಟ್ಟಿದೆ. ಆದರೆ, ಈ ಸಮಾವೇಶದಲ್ಲಿ ಸೇರಿದ ಜನ ಬಿಜೆಪಿಗೆ ಮತದಾರರಾಗಿ ಬದಲಾಗಲಿದ್ದಾರೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ.












Click it and Unblock the Notifications