SWR: ಬೆಂಗಳೂರು-ರಾಧಿಕಾಪುರ ವೀಕ್ಲಿ ಎಕ್ಸ್‌ಪ್ರೆಸ್ ರೈಲು ಸಂಚಾರ ಶುರು, 5 ರಾಜ್ಯಗಳ ಪ್ರಯಾಣಿಕರಿಗೆ ಅನುಕೂಲ
ಬೆಂಗಳೂರು: ನೈಋತ್ಯ ರೈಲ್ವೆಯು (SWR) ಬೆಂಗಳೂರಿನಿಂದ ರಾಧಿಕಾರಪುಕ್ಕೆ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು (Bengaluru SMVT-Radhikapur Express Train) ಕಾರ್ಯಾಚರಣೆ ಆರಂಭಿಸಿದೆ. ಬೆಂಗಳೂರಿನಿಂದ ತೆರಳುವ ಒಟ್ಟು ಐದು ರಾಜ್ಯಗಳ ರೈಲು ಪ್ರಯಾಣಿಕರಿಗೆ ಖುಷಿ ಸುದ್ದಿ ನೀಡಿದೆ. ಕರ್ನಾಟಕದಿಂದ ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ ಹಾಗೂ ಬಿಹಾರ ರಾಜ್ಯಗಳ ರೈಲು ಸಂಪರ್ಕ ಮತ್ತಷ್ಟು ಬಲಗೊಂಡಿದೆ.
ರಾಜ್ಯ ರಾಜಧಾನಿ ಬೆಂಗಳೂರು ಮತ್ತು ಪಶ್ಚಿಮ ಬಂಗಾಳದ ರಾಧಿಕಾಪುರ ಮಧ್ಯ ನೂತನ ವಾರದ ಎಕ್ಸ್‌ಪ್ರೆಸ್ ರೈಲು ಸೇವೆ ರೈಲ್ವೆ ಇಲಾಖೆ ಪರಿಚಯಿಸಿದೆ. ದಕ್ಷಿಣ ಹಾಗೂ ಪೂರ್ವ ಭಾರತದ ನಡುವೆ ಪ್ರಯಾಣಿಸುವ ಲಕ್ಷಾಂತರ ಪ್ರಯಾಣಿಕರಿಗೆ ಈ ರೈಲಿನಿಂದ ಸಾಕಷ್ಟು ಅನುಕೂಲವಾಗಲಿದೆ. ಈ ರೈಲು ನಿಲ್ಲುವ ನಿಲುಗಡೆ ನಿಲ್ದಾಣಗಳು, ಸಮಯ, ವೇಳಾಪಟ್ಟಿ ವಿವರ ಇಲ್ಲಿದೆ.

2026 ಜನವರಿ 22ರಿಂದ ಬೆಂಗಳೂರು ಎಸ್‌ಎಂವಿಟಿ-ರಾಧಿಕಾಪುರ ವೀಕ್ಲಿ ಎಕ್ಸ್‌ಪ್ರೆಸ್ ರೈಲು (16223) ವಾರದಲ್ಲಿ ಒಂದು ದಿನ ಪ್ರತೀ ಗುರುವಾರ ಸಂಚಾರ ಮಾಡಲಿದೆ. ಮಧ್ಯಾಹ್ನ 1.50ಗಂಟೆಗೆ ಬೆಂಗಳೂರು ನಿಲ್ದಾಣದಿಂದ ಹೊರಟು ಶನಿವಾರ ಮಧ್ಯಾಹ್ನ 12.45ಕ್ಕೆ ರಾಧಿಕಾಪುರ ತಲುಪುತ್ತದೆ.
ಅಲ್ಲಿಂದ ಮರಳಿ ರಾಧಿಕಾಪುರ- ಬೆಂಗಳೂರು ಎಸ್‌ಎಂವಿಟಿ ವಿಶೇಷ ಎಕ್ಸ್‌ಪ್ರೆಸ್ ರೈಲು (16224) ಪ್ರತೀ ಭಾನುವಾರ ರಾತ್ರಿ 9.30ಕ್ಕೆ ರಾಧಿಕಾಪುರದಿಂದ ಹೊರಡುತ್ತದೆ. ಮಂಗಳವಾರ ರಾತ್ರಿ 8.45ಕ್ಕೆ ಬೆಂಗಳೂರಿಗೆ ಬಂದು ಸೇರುತ್ತದೆ. ಈ ದಿಕ್ಕಿನಲ್ಲಿ ಸೇವೆ 2026 ಜನವರಿ 25ರಿಂದ ಆರಂಭವಾಗಲಿದೆ. ವಾರದ ಅವಧಿಯಲ್ಲಿ ನಿರಂತರ ಸಂಪರ್ಕ ಒದಗಿಸುವ ಉದ್ದೇಶದಿಂದ ಈ ವೇಳಾಪಟ್ಟಿ ಸಹಿತ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಧಿಕಾರಪುರ ವೀಕ್ಲಿ ರೈಲು ಸಂಚಾರ ಮಾರ್ಗ ಹೀಗಿದೆ
ಈ ಹೊಸ ಎಕ್ಸ್‌ಪ್ರೆಸ್ ರೈಲು ಸಂಚಾರವು ಕರ್ನಾಟಕದಿಂದ ಆರಂಭವಾಗಿ ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ ಹಾಗೂ ಬಿಹಾರ ರಾಜ್ಯಗಳ ಪ್ರಮುಖ ನಗರಗಳ ಮೂಲಕ ಹಾದು ಹೋಗುತ್ತದೆ. ಕೃಷ್ಟ್ಣರಾಜಪುರಂ, ಬಂಗಾರಪೇಟೆ, ಕುಪ್ಪಂ, ಜೋಳಾರಪೇಟೈ, ಕಟ್ಪಾಡಿ, ಅರಕ್ಕೋಣಂ, ಪೆರಂಬೂರು, ಗುಡೂರು, ನೆಲ್ಲೂರು, ಒಂಗೋಲೆ, ವಿಜಯವಾಡ, ರಾಜಮಂಡ್ರಿ, ವಿಶಾಖಪಟ್ಟಣಂ ಸಮೀಪದ ಕೇಂದ್ರಗಳು, ಬ್ರಹ್ಮಪುರ್, ಭುವನೇಶ್ವರ, ಕಟಕ್, ಖರಗ್ಪುರ, ಬೋಲ್ಪುರ, ಮಾಲ್ದಾ ಟೌನ್, ಬರ್ಸೋಯಿ, ಕಾಳಿಯಾಗಂಜ್ ಸೇರಿದಂತೆ ಅನೇಕ ಪ್ರಮುಖ ನಿಲ್ದಾಣಗಳಲ್ಲಿ ಈ ರೈಲು ನಿಲುಗಡೆ ನೀಡುತ್ತದೆ.
ಈ ರೈಲು ಕಾರ್ಯಾಚರಣೆ ಬಳಿಕ ಈ ಭಾಗದ ವ್ಯಾಪಾರ, ಉದ್ಯೋಗ, ಶಿಕ್ಷಣ ಹಾಗೂ ಕುಟುಂಬ ಭೇಟಿ, ಪ್ರವಾಸಿ ತಾಣಗಳಿಗೆ ಉತ್ತೇಜನ ಸಿಗಲಿದೆ. ಐದು ರಾಜ್ಯಗಳ ಪ್ರಯಾಣಿಕರಿಗೆ ಹೆಚ್ಚುವರಿ ರೈಲು ಸಾರಿಗೆ ಸೇವೆ ಸಿಕ್ಕಂತಾಗಿದೆ.
22 ಬೋಗಿ ಹೊಂದಿರುವ ವಿಶೇಷ ರೈಲು
ಈ ಎಕ್ಸ್‌ಪ್ರೆಸ್ ರೈಲು ಒಟ್ಟು 22 ಕೋಚ್‌ಗಳನ್ನು ಹೊಂದಿದೆ. ಇದರಲ್ಲಿ ಎಸಿ ಟೈರ್ 3, ಎಸಿ ಟೈರ್ 2, ನಾನ್ ಎಸಿ ಸ್ಲೀಪರ್ ಬೋಗಿಗಳು, ಸಾಮಾನ್ಯ/ಜನರಲ್ ಬೋಗಿಗಳು ಒಳಗೊಂಡಿವೆ. ದೀರ್ಘದೂರ ಪ್ರಯಾಣಿಕರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವ್ಯವಸ್ಥೆ ಮಾಡಲಾಗಿದೆ.
ಪ್ರಯಾಣಿಕರು ಇದರ ಸೇವೆಗಾಗಿ ಭಾರತೀಯ ರೈಲ್ವೆ ಇಲಾಖೆಯ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಬೇಕು. NTES ಮೊಬೈಲ್ ಆ್ಯಪ್ ಅಥವಾ 139 ಸಹಾಯವಾಣಿ ಸಂಖ್ಯೆ ಸಂಪರ್ಕಿಸಬೇಕೆಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ. ಐಟಿಆರ್‌ಸಿಟಿ ಆಪ್ ಮೂಲಕ ನೀವು ಟಿಕೆಟ್ ಕಾಯ್ದಿರಿಸಬಹುದು.












Click it and Unblock the Notifications