ಬೆಂಗಳೂರು ವಿಭಾಗದಿಂದ ಡಬಲ್ ಡೆಕ್ಕರ್ ರೈಲು ಸಂಚಾರ, ವಿಶೇಷತೆಗಳು
ಬೆಂಗಳೂರು, ಫೆಬ್ರವರಿ 09: ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗ ಭಾರತದಲ್ಲೇ ಮೊದಲ ಬಾರಿಗೆ ಡಬಲ್ ಡೆಕ್ಕರ್ ರೈಲು ಬೋಗಿಯ ಸಂಚಾರವನ್ನು ಆರಂಭಿಸಿದೆ. ಆದರೆ ಈ ರೈಲು ಪ್ರಯಾಣಿಕರ ಸಂಚಾರಕ್ಕೆ ಅಲ್ಲ, ಬದಲಾಗಿ ಐಷಾರಾಮಿ ಕಾರುಗಳನ್ನು ಸಾಗಾಟ ಮಾಡಲು. ಪೆನುಕೊಂಡದಿಂದ ಹರ್ಯಾಣಕ್ಕೆ ಈ ಮಾದರಿ ಡಬಲ್ ಡೆಕ್ಕರ್ ಬೋಗಿಯಲ್ಲಿ ಕಾರುಗಳನ್ನು ಸಾಗಾಟ ಮಾಡಲಾಗಿದೆ.
ಪೆನುಕೊಂಡದಿಂದ ಹರ್ಯಾಣದ ಫಾರೂಕ್ ನಗರಕ್ಕೆ ಕಾರುಗಳನ್ನು ಸಾಗಾಟ ಮಾಡಲು ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗ ಡಬಲ್ ಡೆಕ್ಕರ್ ಬೋಗಿಯನ್ನು ಬಳಕೆ ಮಾಡಿದೆ. ದೇಶದಲ್ಲೇ ಮೊದಲ ಬಾರಿಗೆ ಇಂತಹ ಪ್ರಯತ್ನ ಮಾಡಲಾಗಿದೆ.

264 ಎಸ್‌ಯುವಿ ಕಾರುಗಳನ್ನು ರೈಲಿನ ಮೂಲಕ ಸಾಗಣೆ ಮಾಡಲಾಗಿದೆ. ಬುಧವಾರ ಪೆನುಕೊಂಡದಿಂದ ಹೊರಟಿದ್ದ ರೈಲು ಯಶಸ್ವಿಯಾಗಿದ ಹರ್ಯಾಣ ರಾಜ್ಯದ ಫಾರೂಕ್ ನಗರವನ್ನು ತಲುಪಿದೆ. ಸರಕು ಸಾಗಣೆಯಲ್ಲಿ ಡಬಲ್ ಡೆಕ್ಕರ್ ಬೋಗಿಯ ಪ್ರಯೋಗವೂ ಯಶಸ್ವಿಯಾಗಿದೆ.
ರೈಲ್ವೆಗೆ ಎಷ್ಟು ಆದಾಯ?; ಪ್ರಯಾಣಿಕರ ಸಂಚಾರದ ಜೊತೆ ಸರಕು ಸಾಗಣೆಯಿಂದಲೂ ರೈಲ್ವೆಗೆ ಆದಾಯ ತರಲು ಹಲವು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಡಬಲ್ ಡೆಕ್ಕರ್ ಬೋಗಿಯಲ್ಲಿ ಎಸ್‌ಯುವಿ ಕಾರುಗಳ ಸಾಗಾಟದಿಂದ 34 ಲಕ್ಷ ರೂ. ಆದಾಯ ರೈಲ್ವೆಗೆ ಬಂದಿದೆ. ದೇಶದ ವಾಹನೋದ್ಯಮಕ್ಕೆ ಈ ಹೊಸ ಪ್ರಯೋಗ ಉತ್ತಮ ಕೊಡುಗೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಹಿಂದೆ ಲಾರಿಗಳ ಮೂಲಕ ಕಾರುಗಳನ್ನು ವಿವಿಧ ಪ್ರದೇಶಗಳಿಗೆ ಕಳಿಸಲಾಗುತ್ತಿತ್ತು. ಬಳಿಕ ಟ್ರಾಕ್ಟರ್, ಕಾರುಗಳನ್ನು ರೈಲು ಬೋಗಿಯಲ್ಲಿ ಸಾಗಿಸುವ ವ್ಯವಸ್ಥೆ ಮಾಡಲಾಯಿತು. ಮೊದಲ ಬಾರಿಗೆ ಡಬಲ್ ಡೆಕ್ಕರ್ ಬೋಗಿಯಲ್ಲಿ ಕಾರುಗಳನ್ನು ಸಾಗಾಟ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸರಕು ಸಾಗಣೆಗಾಗಿಯೇ ವಿಶೇಷವಾದ ಎಸಿಟಿ-1 ಮಾದರಿ ಬೋಗಿಯನ್ನು ವಿನ್ಯಾಸಗೊಳಿಸಲಾಗಿತ್ತು. ಒಟ್ಟು 33 ಬೋಗಿಗಳನ್ನು ಈ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಡಬಲ್ ಡೆಕ್ಕರ್ ಬೋಗಿಯ ಎರಡು ಡೆಕ್‌ಗಳಲ್ಲೂ ಕಾರುಗಳನ್ನು ಸಾಗಾಟ ಮಾಡಬಹುದು.
ಡಬಲ್ ಡೆಕ್ಕರ್ ಬೋಗಿಯಲ್ಲಿ ಕಾರುಗಳನ್ನು ಸಾಗಾಟ ಮಾಡುವುದರಿಂದ ಹೆಚ್ಚಿನ ಕಾರುಗಳನ್ನು ಒಂದೇ ಸಮಯದಲ್ಲಿ ಸಾಗಿಸಬಹುದು. ಇದರಿಂದಾಗಿ ಕಂಪನಿಗಳಿಗೆ ಸಾಗಾಟ ವೆಚ್ಚವೂ ಕಡಿಮೆಯಾಗಲಿದೆ, ಇಂತಹ ಬೇಡಿಕೆ ರೈಲ್ವೆ ಇಲಾಖೆಗೆ ಸಿಗುವುದರಿಂದ ಆದಾಯವೂ ಹೆಚ್ಚಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇಂತಹ ತಂತ್ರ ರಸ್ತೆ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯನ್ನು ತರಲಿದೆ. ದೊಡ್ಡ ದೊಡ್ಡ ಲಾರಿಗಳ ಸಂಚಾರ ರಸ್ತೆಯಲ್ಲಿ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಲಾರಿಗಳಿಗೆ ಹೋಲಿಕೆ ಮಾಡಿದರೆ ರೈಲು ಬೋಗಿಯಲ್ಲಿ ಹೆಚ್ಚಿನ ವಾಹನಗಳನ್ನು ಸಾಗಾಟ ಮಾಡಬಹುದಾಗಿದೆ.
ವಾಹನಗಳ ಸಾಗಾಟಕ್ಕಾಗಿಯೇ ವಿನ್ಯಾಸಗೊಳಿಸಲಾದ ಎಸಿಟಿ-1 ಬೋಗಿಯಲ್ಲಿ ಸರಕುಗಳ ಸಾಗಣೆಗೆ ರಸ್ತೆ ಮಾರ್ಗದ ಬದಲು ರೈಲು ಮಾರ್ಗವೇ ಉತ್ತಮ ಎಂಬ ಸಾಧ್ಯತೆಯನ್ನು ತಿಳಿಸುತ್ತದೆ. ಖರ್ಚು ಸಹ ಕಡಿಮೆ ಆಗುವುದರಿಂದ ಅನುಕೂಲವಾಗಲಿದೆ. ರಸ್ತೆ ಮೇಲಿನ ದಟ್ಟಣೆ ಕಡಿಮೆ ಮಾಡಲು ಸಹಾಯಕವಾಗಲಿದೆ ಎಂದು ಅಂದಾಜಿಸಲಾಗಿದೆ.
ನೈಋತ್ಯ ರೈಲ್ವೆ ವಲಯದ ಬೆಂಗಳೂರು ವಿಭಾಗದ ವ್ಯವಹಾರ ಅಭಿವೃದ್ಧಿ ಘಟಕ ರೈಲು ಸರಕು ಸಾಗಣೆ ಮೂಲಕ ಕೈಗಾರಿಕೆಗಳನ್ನು ಉತ್ತೇಜಿಸಲು ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಕಡಿಮೆ ವೆಚ್ಚ, ವೇಗ ಮತ್ತು ಸುರಕ್ಷತೆಯನ್ನು ರೈಲು ಸರಕು ಸಾಗಣೆ ನೀಡುವುದರಿಂದ ಇಂತಹ ಪ್ರಯತ್ನಗಳು ವಾಹನ ತಯಾರಕಾ ಕಂಪನಿಗಳಿಗೆ ವಿಶ್ವಾಸಾರ್ಹ ಮತ್ತು ಕಡಿಮೆ ಖರ್ಚಿನ ಸಾಗಣೆಯ ಭರವಸೆಯನ್ನು ಒದಗಿಸುತ್ತಿದೆ.
ಮೊದಲ ಡಬಲ್ ಡೆಕ್ಕರ್ ಸರಕು ಸಾಗಣೆ ರೈಲಿನ ಸಂಚಾರದ ಸಮಯದಲ್ಲಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಮಿತೇಶ್ ಕುಮಾರ್ ಸಿನ್ಹಾ, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪರಿಕ್ಷಿತ್ ಮೋಹನ್ಪುರಿಯಾ ಮುಂತಾದವರು ಪೆನುಕೊಂಡಾ ನಿಲ್ದಾಣದಲ್ಲಿ ಸಂಪೂರ್ಣ ಲೋಡ್ ಬಳಿಕ ಹೊರಟ ರೈಲನ್ನು ಪರಿಶೀಲನೆ ಮಾಡಿದರು.












Click it and Unblock the Notifications