Swara Bhaskar: ಸ್ತ್ರೀ ಶಿಕ್ಷಣ ವಿರೋಧಿಸಿದ್ದ ಮೌಲಾನಾ ಭೇಟಿ ಮಾಡಿದ ಸ್ವರಾ ಭಾಸ್ಕರ್; ಕಪಟಿ ಎಂದ ನೆಟ್ಟಿಗರು
ತಮ್ಮ ನೇರ ಹೇಳಿಕೆಗಳಿಂದ ಸಾಕಷ್ಟು ಸುದ್ದಿಯಾಗುತ್ತಿದ್ದ ಬಾಲಿವುಡ್ ನಟಿ ಸ್ವರ ಭಾಸ್ಕರ್, ಮದುವೆಯಾದ ಬಳಿಕ ತಮ್ಮ ವ್ಯಕ್ತಿತ್ವವನ್ನೇ ಬದಲಾಯಿಸಿಕೊಂಡರಾ ಎನ್ನುವ ಅನುಮಾನ ಅಭಿಮಾನಿಗಳಿಗೆ ಮೂಡಿದೆ. ಸ್ತ್ರಿವಾದಿ ಎಂದೇ ಗುರುತಿಸಿಕೊಂಡಿದ್ದ ಸ್ವರಾ ಭಾಸ್ಕರ್ ಇತ್ತೀಚೆಗೆ ಸ್ತ್ರೀ ಶಿಕ್ಷಣವನ್ನೇ ವಿರೋಧಿಸಿದ್ದ ಮುಸ್ಲಿಂ ಮುಖಂಡರನ್ನು ಭೇಟಿ ಮಾಡಿ ನಗು ನಗುತ್ತಾ ಫೋಟೊ ತೆಗೆಸಿಕೊಂಡಿದ್ದು ವ್ಯಾಪಕ ಟೀಕೆಗೆ ಕಾರಣವಾಗಿದೆ.
ಸ್ವರಾ ಭಾಸ್ಕರ್ ಅವರ ಪತಿ ಫಹಾದ್ ಅಹ್ಮದ್ ಮತ್ತು ಮೌಲಾನಾ ಸಜ್ಜದ್ ನೊಮಾನಿ ಅವರೊಂದಿಗಿನ ಫೋಟೋ ಹಂಚಿಕೊಂಡಿದ್ದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸ್ವರಾ ಭಾಸ್ಕರ್ ಪತಿ ಫಹಾದ್ ಅಹಮದ್ ಮಹಾರಾಷ್ಟ್ರ ಚುನಾವಣೆಯಲ್ಲಿ ಅನುಶಕ್ತಿ ನಗರ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದು, ಪತ್ನಿ ಸ್ವರಾ ಭಾಸ್ಕರ್ ಕೂಡ ಪತಿ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಮಾಜಿ ಸಚಿವ ನವಾಬ್ ಮಲಿಕ್ ಅವರ ಪುತ್ರಿ ಸನಾ ಮಲಿಕ್ ಎದುರಾಳಿಯಾಗಿ ಸ್ಪರ್ಧೆ ಮಾಡಿದ್ದಾರೆ.

ಸ್ವರಾ ಭಾಸ್ಕರ್ ಮಹಿಳೆಯರ ಮೇಲಿನ ದೌರ್ಜನ್ಯ, ಸಾಮಾಜಿಕ ಸಮಸ್ಯೆಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದ ಮೌಲಾನಾ ನೊಮಾನಿ ಅವರನ್ನು ಭೇಟಿಯಾಗಿರುವುದು ಟೀಕೆಗೆ ಕಾರಣವಾಗಿದೆ. ಹೆಣ್ಣು ಮಕ್ಕಳು ಒಂಟಿಯಾಗಿ ಕಾಲೇಜಿಗೆ ಹೋಗಬಾರದು ಎಂದು ಮೌಲಾನಾ ವಿವಾದಾತ್ಮಾಕ ಹೇಳಿಕೆ ನೀಡಿದ್ದರು. ಮಹಿಳಾ ಸ್ವಾತಂತ್ರ, ಸಮಾನತೆ ಬಗ್ಗೆ ಮಾತನಾಡುವ ಸ್ವರಾ ಭಾಸ್ಕರ್ ಅಂತಹ ಮೌಲಾನಾ ಜೊತೆ ಫೋಟೊ ತೆಗೆಸಿಕೊಂಡಿದ್ದಕ್ಕೆ ಟೀಕೆ ವ್ಯಕ್ತವಾಗಿದೆ.
ಫೋಟೊದಲ್ಲಿ ಸ್ವರಾ ಭಾಸ್ಕರ್ ದುಪಟ್ಟಾದಲ್ಲಿ ತಲೆ ಮುಚ್ಚಿರುವುದು ಟ್ರೋಲ್‌ಗೆ ಕಾರಣವಾಗಿದೆ. ಸ್ವರ ಭಾಸ್ಕರ್ ಯಾಕೆ ಬುರ್ಖಾ ಧರಿಸಿಲ್ಲ ಎಂದು ಟೀಕಿಸಿದ್ದಾರೆ. ಮದುವೆಗೆ ಮೊದಲು ಮಹಿಳಾ ಹಕ್ಕುಗಳ ಬಗ್ಗೆ ಮಾತನಾಡುತ್ತಿದ್ದ ಅವರನ್ನು ನೋಡಿದ ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.
ವಿವಾದಾತ್ಮಕ ಹೇಳಿಕೆ ನೀಡಿದ್ದ ನಟಿ
ಸ್ವರಾ ಭಾಸ್ಕರ್ ಹಲವು ಬಾರಿ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. ಕಳೆದ ತಿಂಗಳಷ್ಟೇ ಅಯೋಧ್ಯೆ ರಾಮಜನ್ಮಭೂಮಿ - ಬಾಬರಿ ಮಸೀದಿ ವಿವಾದದ ಕುರಿತು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಹೇಳಿಕೆಯನ್ನು ಪ್ರಶ್ನಿಸಿದ್ದರು. ಪರಿಹಾರ ಪಡೆಯಲು ದೇವರನ್ನು ಅವಲಂಬಿಸುವ ನ್ಯಾಯಮೂರ್ತಿಯವರ ಹೇಳಿಕೆಯನ್ನು ಟೀಕಿಸಿದ್ದು, ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಇದು ಸೂಕ್ತವಲ್ಲ ಎಂದು ಹೇಳಿದ್ದರು.
ಫಹಾದ್ ಟ್ವಿಟರ್‌ನಲ್ಲಿ ಫೋಟೋ ಹಂಚಿಕೊಂಡಿದ್ದು, ಆಶೀರ್ವಾದ ಮಾಡಿದ್ದಕ್ಕಾಗಿ ಮೌಲಾನಾ ಸಜ್ಜದ್ ನೊಮಾನಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಸ್ವರಾ ಭಾಸ್ಕರ್ ಮೊದಲಿದ್ದ ರೀತಿಗೂ ಈಗ ಇರುವ ರೀತಿಗೂ ಇರುವ ವ್ಯತ್ಯಾಸವನ್ನು ನೆಟ್ಟಿಗರು ಗುರುತಿಸಿದ್ದಾರೆ.












Click it and Unblock the Notifications