Maharashtra: ಸ್ಪೀಕರ್ ನಾರ್ವೇಕರ್ ತೀರ್ಮಾನದ ಮೇಲೆ ಸರ್ಕಾರದ ಭವಿಷ್ಯ: ಯಾರು ಈ ರಾಹುಲ್ ನಾರ್ವೇಕರ್?
ಮಹಾರಾಷ್ಟ್ರ ಸರ್ಕಾರದ ಬಿಕಟ್ಟು ಕುರಿತಂತೆ ಸುಪ್ರೀಂ ಕೋರ್ಟ್ ಮೇ 11ರಂದು ಮಹತ್ವದ ತೀರ್ಪು ನೀಡಿದೆ. "ಶಾಸಕರ ಅನರ್ಹತೆ ಅರ್ಜಿಗಳನ್ನು ಸ್ಪೀಕರ್ ನಿಗದಿತ ಅವಧಿಯಲ್ಲಿ ನಿರ್ಧರಿಸಬೇಕು" ಎಂದು ಹೇಳಿದ್ದು, ಈಗ ಎಲ್ಲತ ಚಿತ್ತ ಸ್ಪೀಕರ್ ರಾಹುಲ್ ನಾರ್ವೇಕರ್ ಅವರತ್ತ ನೆಟ್ಟಿದೆ.
ಉದ್ಧವ್ ಠಾಕ್ರೆ ನೇತೃತ್ವದ ಮಹಾ-ಅಘಾಡಿ ಸರ್ಕಾರವನ್ನು ಪತನಗೊಳಿಸಿದ್ದ ಬಂಡಾಯ ಶಾಸಕರು, ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡಿದ್ದರು. ಇದರಂದ ಕೆರಳಿದ್ದ ಶಿವಸೇನೆಯ ಉದ್ಧವ್ ಠಾಕ್ರೆ ಬಣವು ಮೊದಲು ಅಜ್ಞಾತವಾಸಕ್ಕೆ ತೆರಳಿದ್ದ 16 ಬಂಡಾಯ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ತೀರ್ಪಿನ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಇದರ ಬಗ್ಗೆ ನಿರ್ಧರಿಸುವಂತೆ ಸ್ಪೀಕರ್ ರಾಹುಲ್ ನಾರ್ವೇಕರ್ ಅವರಿಗೆ ಸೂಚಿಸಿದೆ.

ಶಿವಸೇನೆ, ಎನ್‌ಸಿಪಿಯಲ್ಲಿದ್ದ ನಾರ್ವೇಕರ್ 2019ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಪ್ರಸ್ತುತ ಲಂಡನ್‌ನಲ್ಲಿ "ಪೂರ್ವ ನಿರ್ಧಾರಿತ" ಪ್ರವಾಸದಲ್ಲಿರುವ ಅವರು ಮೇ 15 ರಂದು ಮುಂಬೈಗೆ ಮರಳುವ ಸಾಧ್ಯತೆಯಿದೆ.
ತೀರ್ಪಿನ ನಂತರ ಪ್ರತಿಕ್ರಿಯೆ ನೀಡಿರುವ ನಾರ್ವೇಕರ್, "16 ಶಾಸಕರ ಅನರ್ಹತೆಯ ಬಗ್ಗೆ ಸ್ಪೀಕರ್ ನಿರ್ಧರಿಸುತ್ತಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ರಾಜಕೀಯ ಪಕ್ಷ ಅಥವಾ ಶಾಸಕಾಂಗ ಪಕ್ಷವು ವಿಪ್ ಅನ್ನು ನಿರ್ಧರಿಸಬಹುದೇ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಮೊದಲು ಇರಲಿಲ್ಲ. ಈಗ ಸುಪ್ರೀಂ ಕೋರ್ಟ್ ಸ್ಪಷ್ಟ ವ್ಯಾಖ್ಯಾನವನ್ನು ನೀಡಿದ್ದು, ಅದರಂತೆ ನಾವು ನಿರ್ಧರಿಸುತ್ತೇವೆ." ಎಂದು ಹೇಳಿದ್ದಾರೆ.
ರಾಜಕೀಯ ತಜ್ಞರ ಪ್ರಕಾರ ಸ್ಪೀಕರ್ ನಾರ್ವೇಕರ್ ಅವರಿಗೆ ಶಾಸಕರನ್ನು ಅನರ್ಹತೆಗೊಳಿಸುವುದನ್ನು ಬಿಟ್ಟಿ ಬೇರೆ ದಾರಿಯಿಲ್ಲ ಎಂದು ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ಸ್ಪೀಕರ್ ನಡೆ ಈಗ ಸಾಕಷ್ಟು ಕುತೂಹಲ ಕೆರಳಿಸಿದೆ.
ಯಾರು ಈ ರಾಹುಲ್ ನಾರ್ವೇಕರ್?
ರಾಹುಲ್ ನಾರ್ವೇಕರ್ ದಕ್ಷಿಣ ಮುಂಬೈನ ಕೊಲಾಬಾ ಪ್ರದೇಶದಲ್ಲಿ ಹುಟ್ಟಿ ಬೆಳೆದರು ಮತ್ತು ಅವರು ಯುವ ನಾಯಕರಾಗಿ ಶಿವಸೇನೆಗೆ ಸೇರಿದರು. ಉದ್ಧವ್ ಠಾಕ್ರೆಯವರ ಪುತ್ರ ಆದಿತ್ಯ ಠಾಕ್ರೆ ನೇತೃತ್ವದ ಪಕ್ಷದ ಯುವ ಘಟಕವಾದ ಯುವಸೇನೆಯ ವಕ್ತಾರರಾಗಿದ್ದರು. ರಾಜಕೀಯಕ್ಕೆ ಬರುವ ಮುನ್ನ ವಕೀಲರಾಗಿ ಅಭ್ಯಾಸ ಮಾಡುತ್ತಿದ್ದರು. 2014 ರಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಗೆ ಸೇರಿದ ಅವರು, ಮಾವಲ್ ಕ್ಷೇತ್ರದಿಂದ ಲೋಕಸಭೆಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನುಭವಿಸಿದ್ದರು.
2019 ರಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿಗೆ ಸೇರ್ಪಡೆಯಾದ ಅವರು ಕೊಲಾಬಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಅವರ ಮಾವ ಎನ್‌ಸಿಪಿಯ ಹಿರಿಯ ನಾಯಕ ಮತ್ತು ಮಾಜಿ ವಿಧಾನ ಪರಿಷತ್ ಅಧ್ಯಕ್ಷ ರಾಮರಾಜೇ ನಾಯ್ಕ್-ನಿಂಬಾಳ್ಕರ್.
ಮೊದಲ ಬಾರಿ ಶಾಸಕರಾದ ರಾಹುಲ್ ನಾರ್ವೇಕರ್ ಸ್ಪೀಕರ್ ಆಗುವ ಅದೃಷ್ಟ ಪಡೆದುಕೊಂಡರು. ಅವರು 3 ಜುಲೈ 2022 ರಂದು ಮಹಾರಾಷ್ಟ್ರ ಅಸೆಂಬ್ಲಿ ಸ್ಪೀಕರ್ ಆಗಿ 164 ಮತಗಳೊಂದಿಗೆ ಆಯ್ಕೆಯಾದರು. 46ನೇ ವರ್ಷದ ನಾರ್ವೇಕರ್, ಸ್ಪೀಕರ್ ಆಗಿ ಆಯ್ಕೆಯಾದ ಎರಡನೇ ಕಿರಿಯ ವ್ಯಕ್ತಿ ಎನಿಸಿಕೊಂಡಿದ್ದಾರೆ.
ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷರಾಗಲು ನಾನಾ ಪಟೋಲೆ ರಾಜೀನಾಮೆ ನೀಡಿದ ಒಂದು ವರ್ಷದ ನಂತರ ನಾರ್ವೇಕರ್ ಅವರನ್ನು ಸ್ಪೀಕರ್ ಆಗಿ ನೇಮಿಸಲಾಯಿತು, ಸ್ಥಾನ ತೆರವಾಗಿತ್ತು. ನಾರ್ವೇಕರ್ ಅವರು ಶಿವಸೇನೆ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ ಮತ್ತು ಬಿಜೆಪಿ ಸೇರಿದಂತೆ ಮಹಾರಾಷ್ಟ್ರದ ಎಲ್ಲಾ ಮೂರು ಪ್ರಮುಖ ರಾಜಕೀಯ ಪಕ್ಷಗಳೊಂದಿಗೆ ಸಂಬಂಧ ಹೊಂದಿದ್ದಾರೆ.
ಏಕನಾಥ್ ಶಿಂಧೆ ಸರ್ಕಾರವು 288 ಸದಸ್ಯ ಬಲದ ಅಸೆಂಬ್ಲಿಯಲ್ಲಿ ವಿಶ್ವಾಸಮತ ಪರೀಕ್ಷೆಯನ್ನು ಎದುರಿಸುವ ಒಂದು ದಿನದ ಮೊದಲು ರಾಹುಲ್ ನಾರ್ವೇಕರ್ ಅವರು ಸ್ಪೀಕರ್ ಆಗಿ ಆಯ್ಕೆಯಾದರು ಎನ್ನುವುದನ್ನು ನೆನಪಿಸಿಕೊಳ್ಳಬಹುದು.
ನಾರ್ವೇಕರ್ ಅವರನ್ನು ಸ್ಪೀಕರ್ ಆಗಿ ನೇಮಿಸಿದಾಗಿನಿಂದ, ಅವರು ಆಡಳಿತ ಪಕ್ಷದಿಂದ, ವಿಶೇಷವಾಗಿ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ನಿಂದ ಸೂಚನೆಗಳನ್ನು ಪಡೆದಿದ್ದಾರೆ ಎಂದು ಅನೇಕ ಸಂದರ್ಭಗಳಲ್ಲಿ ವಿರೋಧ ಪಕ್ಷಗಳು ಆರೋಪಿಸಿವೆ.












Click it and Unblock the Notifications