
ದ್ವೇಷ ಹರಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ: ಸುಪ್ರೀಂ ಕೋರ್ಟ್ ಆದೇಶ
ನವದೆಹಲಿ, ಅಕ್ಟೋಬರ್ 22: ದ್ವೇಷ ಭಾಷಣಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಮೂರು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಸೂಚಿಸಿದೆ.
ದ್ವೇಷ ಭಾಷಣಗಳ ವಿರುದ್ಧ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಬೇಕು ಎಂದು ದೆಹಲಿ, ಉತ್ತರಾಖಂಡದ ಹಾಗೂ ಉತ್ತರ ಪ್ರದೇಶದ ಪೊಲೀಸ್ ಮುಖ್ಯಸ್ಥರಿಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಈ ದ್ವೇಷ ಭಾಷಣಗಳು ಸಮಾಜದಲ್ಲಿ ಸಂಘರ್ಷಗಳನ್ನು ಪ್ರಚೋದಿಸುತ್ತಿವೆ. ಧರ್ಮವನ್ನು ಯಾವ ಮಟ್ಟಕ್ಕೆ ಇಳಿಸಲಾಗಿದೆ ಎಂಬುದು ಈ ಭಾಷಣಗಳಿಂದ ಗೊತ್ತಾಗುತ್ತದೆ. ಇದು ಒಳ್ಳೆಯ ಬೆಳವಣಿಗೆಯಲ್ಲವೆಂದು ಹೇಳಿದೆ.
'ಸುಪ್ರೀಂ ಕೋರ್ಟ್‌ನ ಈ ಆದೇಶದ ಅನುಸಾರವಾಗಿ ಕಾರ್ಯನಿರ್ವಹಿಸಲು ಯಾವುದೇ ಹಿಂಜರಿಕೆಯನ್ನು ಅಧಿಕಾರಿಗಳು ತೋರಿಸಬಾರದು. ಒಂದು ವೇಳೆ ಹಾಗೆ ಮಾಡಿದರೆ, ನ್ಯಾಯಾಲಯದ ನಿಂದನೆ ಎಂದು ಪರಿಗಣಿಸಲಾಗುವುದು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಎಚ್ಚರಿಕೆ ನೀಡಿದೆ.
ದೆಹಲಿ, ಉತ್ತರಾಖಂಡ ಹಾಗೂ ಉತ್ತರ ಪ್ರದೇಶದಲ್ಲಿ ನಡೆದಿದ್ದ ಧರ್ಮ ಸಂಸತ್‌ನಲ್ಲಿ ಮುಸ್ಲಿಮರನ್ನು ಉದ್ದೇಶಿಸಿ ದ್ವೇಷ ಭಾಷಣಗಳನ್ನು ಮಾಡಲಾಗಿತ್ತು. ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಲಾಗಿತ್ತು. ಇದರ ವಿರುದ್ಧ ಶಹೀನ್ ಅಬ್ದುಲ್ಲಾ ಎಂಬುವವರು ಸುಪ್ರೀಂ ಕೊರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಹಾಗೂ ಋಷಿಕೇಶ್ ರಾಯ್ ಅವರನ್ನು ಒಳಗೊಂಡ ಪೀಠವು ಈ ಅರ್ಜಿಯ ವಿಚಾರಣೆಯನ್ನು ನಡೆಸಿತು.
ಬಿಜೆಪಿ ನಾಯಕ ಪರ್ವೇಶ್ ವರ್ಮಾ ಅವರು ಸಮುದಾಯವೊಂದನ್ನು ಉದ್ದೇಶಿಸಿ 'ಸಂಪೂರ್ಣ ಬಹಿಷ್ಕಾರ'ಕ್ಕೆ ಕರೆ ನೀಡಿದ್ದಾರೆ. ಇದನ್ನೂ ಸೇರಿದಂತೆ ದೆಹಲಿ, ಉತ್ತರ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಮಾಡಲಾಗಿದ್ದ ದ್ವೇಷ ಭಾಷಣಗಳ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪೀಠವು ಕೇಳಿದೆ.
'ನಾವು ಎಲ್ಲಿಗೆ ಬಂದು ತಲುಪಿದ್ದೇವೆ? ನಾವು ಧರ್ಮವನ್ನು ಯಾವ ಮಟ್ಟಕ್ಕೆ ಇಳಿಸಿದ್ದೇವೆ? ವೈಜ್ಞಾನಿಕ ಮನೋಭಾವದ ಬಗ್ಗೆ ಸಂವಿಧಾನ ಹೇಳುತ್ತದೆ. ಆದರೆ, 21ನೇ ಶತಮಾನದಲ್ಲಿರುವ ನಾವು ದ್ವೇಷ ಭಾಷಣಗಳನ್ನು ಸಹಿಸಿಕೊಳ್ಳುವ ಸಂಕುಚಿತ ಮನೋಭಾವ ಹೊಂದಿದ್ದೇವೆ. ಇದು ದುರಂತ' ಎಂದು ಪೀಠ ಹೇಳಿದೆ.

ದ್ವೇಷ ಭಾಷಣ ಮಾಡುವ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡುವ ವ್ಯಕ್ತಿಯ ಧರ್ಮವನ್ನು ಲೆಕ್ಕಿಸದೇ ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಆ ಮೂಲಕ ಸಂವಿಧಾನ ಹೇಳಿರುವ ಭಾರತದ ಜಾತ್ಯತೀತ ಮೌಲ್ಯವನ್ನು ಕಾಪಾಡಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
'ಮೇಲಾಧಿಕಾರಿಗಳು ತಮ್ಮ ಅಧೀನ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಆದಷ್ಟು ಬೇಗ ಕಾನೂನಿನ ಅಡಿಯಲ್ಲಿ ಸೂಕ್ರ ಕ್ರಮವನ್ನು ಜರುಗಿಸಬೇಕು' ಎಂದು ಆದೇಶ ಮಾಡಿದೆ.
'ಭಾರತದ ಸಂವಿಧಾನವು ಜಾತ್ಯತೀತ ಮೌಲ್ಯಗಳನ್ನು ಎತ್ತಿ ಹಿಡಿದಿದೆ. ದೇಶದ ಏಕತೆ ಹಾಗೂ ಸಮಗ್ರತೆಯನ್ನು ಪ್ರತಿಪಾದಿಸಿದೆ. ಇದು ನಮ್ಮೆಲ್ಲರ ಮಾರ್ಗದರ್ಶಿ ತತ್ವವೆಂದು ಹೇಳಿದೆ. ದೇಶದ ವಿವಿಧ ಧರ್ಮ ಹಾಗೂ ಜಾತಿಗಳ ಜನರು ಸಾಮಾರಸ್ಯದಿಂದ ಬಾಳಬೇಕು. ಇದು ಸಾಧ್ಯವಾಗದ ಹೊರತು ಭ್ರಾತೃತ್ವ ಉಳಿಯಲು ಸಾಧ್ಯವಿಲ್ಲ' ಎಂದು ಅಭಿಪ್ರಾಯ ಪಟ್ಟಿದೆ.
ವ್ಯಕ್ತಿಯ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ಕಾಪಾಡಲು ನ್ಯಾಯಾಲಯವಿದೆ. ರಾಷ್ಟ್ರದ ಜಾತ್ಯತೀತ ಪ್ರಜಾಸತ್ತಾತ್ಮಕ ಸ್ವರೂಪವನ್ನು ನಾವು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯವೆಂದು ಭಾವಿಸಿದ್ದೇವೆ. ಹೀಗಾಗಿ, ಈ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನಾವು ಮಾಡುತ್ತಿದ್ದೇವೆ ಎಂದು ಸುಪ್ರೀಂ ಕೋರ್ಟ್ ಪ್ರತಿಪಾದಿಸಿದೆ.
ಅರ್ಜಿದಾರರ ಪರ ವಾದಿಸಿದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್, 'ದ್ವೇಷ ಭಾಷಣಕ್ಕೆ ಸಂಬಂಧಿಸಿದ ಅರ್ಜಿಯನ್ನು ನಾವು ಮೊದಲಿನಿಂದಲೂ ಸಲ್ಲಿಸುತ್ತಲೇ ಬಂದಿದ್ದೇವೆ. ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಸಂಬಂಧಿಸಿದವರು ಯಾವುದೇ ಕ್ರಮ ಜರುಗಿಸಿಲ್ಲ. ಹೀಗಾಗಿ, ದೇಶದಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣಗಳು ನಡೆಯುತ್ತಲೇ ಇವೆ. ಬಹಿಷ್ಕಾರದ ಮಾತುಗಳು ಕೇಳಿ ಬರುತ್ತಲೇ ಇವೆ. ಮುಸ್ಲಿಮರನ್ನು ಕೊಲ್ಲುವ, ಕತ್ತು ಸೀಳುವ ಹೇಳಿಕೆಗಳೂ ಹೊರಬಂದಿವೆ' ಎಂದು ತಿಳಿಸಿದರು.