'ಬುಲ್ಡೋಜರ್ ನ್ಯಾಯ'ದ ಬಗ್ಗೆ ಕಠಿಣ ಆದೇಶ ಕೊಟ್ಟ ಸುಪ್ರೀಂ ಕೋರ್ಟ್
ಬುಲ್ಡೋಜರ್ ನ್ಯಾಯದ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಕಾರ್ಯಾಂಗವು ನ್ಯಾಯಾಂಗವನ್ನು ಬದಲಿಸಲು ಸಾಧ್ಯವಿಲ್ಲ, ಆರೋಪಿಯನ್ನು ವಿಚಾರಣೆಗೆ ಮೊದಲೇ ಅಪರಾಧಿ ಎಂದು ಪೂರ್ವಾಗ್ರಹವಾಗಿ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಹೇಳಿದೆ. ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿ ಕೆ.ವಿ.ವಿಶ್ವನಾಥನ್ ಅವರ ಪೀಠವು ಆರೋಪಿಗಳ ಮನೆ, ಆಸ್ತಿ ಮೇಲೆ ಬುಲ್ಡೋಜರ್ ಕಾರ್ಯಾಚರಣೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಮೇಲೆ ತೀರ್ಪು ನೀಡಿದೆ.
ಇದನ್ನು ಬುಲ್ಡೋಜರ್ ನ್ಯಾಯ ಎಂದು ಕರೆಯಲಾಗುತ್ತಿದ್ದು, ಹಲವು ರಾಜ್ಯಗಳಲ್ಲಿ ಆರೋಪಿಗಳ ಆಸ್ತಿಯನ್ನು ಧ್ವಂಸ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಇಂತಹ ಪ್ರಕರಣಗಳಲ್ಲಿ ಅಕ್ರಮ ಕಟ್ಟಡಗಳನ್ನು ಮಾತ್ರ ಕೆಡವಲಾಗಿದೆ ಎಂದು ರಾಜ್ಯ ಅಧಿಕಾರಿಗಳು ಹೇಳಿದ್ದರು.

ಪ್ರತಿ ಕುಟುಂಬಕ್ಕೂ ಮನೆ ಹೊಂದುವುದು ಕನಸಾಗಿರುತ್ತದೆ. ಕಾನೂನಿನ ನಿಯಮವು ಪ್ರಜಾಸತ್ತಾತ್ಮಕ ಸರ್ಕಾರದ ಅಡಿಪಾಯ. ಕಾನೂನು ಪ್ರಕ್ರಿಯೆಯು ಆರೋಪಿಗಳ ತಪ್ಪನ್ನು ಪೂರ್ವಾಗ್ರಮ ಮಾಡಬಾರದು ಎಂದು ಆದೇಶಿಸುತ್ತದೆ ಎಂದು ಪೀಠವು ಹೇಳಿದೆ.
"ಸಂವಿಧಾನದ ಅಡಿಯಲ್ಲಿ ಅನಿಯಂತ್ರಿತ ರಾಜ್ಯ ಕ್ರಮದಿಂದ ರಕ್ಷಣೆ ನೀಡುವ ಸಂವಿಧಾನಸ ಅಡಿಯಲ್ಲಿ ಖಾತರಿಪಡಿಸಿದ ಹಕ್ಕುಗಳನ್ನು ಪರಿಗಣಿಸಲಾಗಿದೆ. ಆಸ್ತಿಯನ್ನು ನಿರಂಕುಶವಾಗಿ ನಾಶ ಮಾಡಲಾಗುವುದಿಲ್ಲ, ಅಂತಹವರಿಗೆ ಕಾನೂನು ರಕ್ಷಣೆ ಒದಗಿಸುತ್ತದೆ" ಎಂದು ಹೇಳಿದೆ.
ಕಾನೂನನ್ನು ಕೈಗೆ ತೆಗೆದುಕೊಳ್ಳಲಾಗದು
"ಸಾರ್ವಜನಿಕರ ನಂಬಿಕೆ ಮತ್ತ ಸಾರ್ವಜನಿಕ ಹೊಣೆಗಾರಿಕೆ ಸಿದ್ದಾಂತವನ್ನು ಉಲ್ಲೇಖಿಸಿ, ಅಧಿಕಾರಿಗಳು ಆರೋಪಿಯ ಮನೆಯನ್ನು ನಿರಂಕುಶವಾಗಿ ಕೆಡವಿದರೆ, ಅದು ಅಧಿಕಾರದ ಪ್ರತ್ಯೇಕತೆ ತತ್ವವನ್ನು ಉಲ್ಲಂಘನೆ ಮಾಡಿದಂತಾಗುತ್ತದೆ" ಎಂದು ನ್ಯಾಯಮೂರ್ತಿ ಗವಾಯಿ ಹೇಳಿದ್ದಾರೆ.
"ರಾಜ್ಯ ಸರ್ಕಾರ ಮತ್ತು ಅದರ ಅಧಿಕಾರಿಗಳು ನಿರಂಕುಶ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ರಾಜ್ಯದ ಯಾವುದೇ ಸರ್ಕಾರಿ ಅಧಿಕಾರಿ ತನ್ನ ಅಧಿಕಾರ ದುರುಪಯೋಗಪಡಿಸಿಕೊಂಡರೆ ಅಥವಾ ದುರುದ್ದೇಶಪೂರಿತವಾಗಿ ವರ್ತಿಸಿದರೆ ಅದನ್ನು ಕ್ಷಮಿಸಲು ಸಾಧ್ಯವಿಲ್ಲ" ಎಂದು ಹೇಳಿದೆ.
ಅಧಿಕಾರಿಗಳೇ ಒಬ್ಬ ವ್ಯಕ್ತಿಯನ್ನು ಅಪರಾಧಿ ಎಂದು ನಿರ್ಧರಿಸಲು ಸಾಧ್ಯವಿಲ್ಲ. ಆಪಾದನೆಯ ಆಧಾರದ ಮೇಲೆ ಮನೆಯನ್ನು ಕೆಡವಿದರೆ ಅದು ಕಾನೂನಿನ ಮೂಲ ತತ್ವವನ್ನು ಕಡೆಗಣಿಸದಂತಾಗುತ್ತದೆ ಎಂದು ಹೇಳಿದೆ.
ಯಾವುದೇ ಒಂದು ಕಟ್ಟಡ ಮನೆಯನ್ನು ಹಠಾತ್ತನೆ ಕೆಡವಲು ಉದ್ದೇಶಿಸಿದಾಗ ಅದನ್ನು ಅಕ್ರಮ ಕಟ್ಟಡವನ್ನು ನೆಲಸಮ ಮಾಡುವುದು ಎಂದರ್ಥವಲ್ಲ, ಚಾರಣೆಯಿಲ್ಲದೆ ದಂಡ ವಿಧಿಸುವುದು ಎನ್ನಬಹುದು ಎಂದು ನ್ಯಾಯಮೂರ್ತಿ ಗವಾಯಿ ಹೇಳಿದರು.
ನಾಗರಿಕರಿಗೆ ಮನೆ ನಿರ್ಮಾಣ ಮಾಡುವುದು ವರ್ಷಗಳ ಕಠಿಣ ಪರಿಶ್ರಮ, ಕನಸಾಗಿರುತ್ತದೆ. ಮನೆಯನ್ನು ಹೊಂದುವುದು ಕುಟುಂಬದ ಭವಿಷ್ಯಕ್ಕೆ ಭದ್ರತೆ ಒದಗಿಸುತ್ತದೆ. ಅಧಿಕಾರಿಗಳು ಮನೆಯನ್ನು ಕೆಡವಿದರೆ ಅದನ್ನು ಕಟ್ಟಿಕೊಡಬೇಕಾಗುತ್ತದೆ ಎಂದು ಪೀಠ ಹೇಳಿದೆ.
ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ತನ್ನ ಅಧಿಕಾರವನ್ನು ಬಳಸಿಕೊಂಡು, ಶೋಕಾಸ್ ನೋಟಿಸ್ ಇಲ್ಲದೇ ಕೆಡವಬಾರದು ಎಂದು ಹೇಳಿದೆ. ನೋಟಿಸ್ ನೀಡಿದ ವ್ಯಕ್ತಿಯು 15 ದಿನಗಳ ಒಳಗೆ ಅಥವಾ ಸ್ಥಳೀಯ ನಾಗರಿಕ ಕಾನೂನುಗಳಲ್ಲಿ ಒದಗಿಸಿದ ಸಮಯದೊಳಗೆ ಪ್ರತಿಕ್ರಿಯಿಸಬಹುದು ಎಂದು ಹೇಳಿದೆ.
ನ್ಯಾಯಾಲಯದ ನಿರ್ದೇಶನಗಳನ್ನು ಉಲ್ಲಂಘಿಸಿದರೆ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಲಾಗುವುದು ಎಂದು ಪೀಠ ಎಚ್ಚರಿಕೆ ನೀಡಿದೆ. ಬುಲ್ಡೋಜರ್ ನ್ಯಾಯಕ್ಕಾಗಿ ನಿಯಮಗಳನ್ನು ಉಲ್ಲಂಘಿಸಿದರೆ ಕೆಡವಿದ ಕಟ್ಟಡಗಳ ನಷ್ಟವನ್ನು ಭರಿಸಬೇಕಾಗುತ್ತದೆ ಎಂದು ನ್ಯಾಯಾಲಯ ಸೂಚನೆ ಕೊಟ್ಟಿದೆ.












Click it and Unblock the Notifications