Rahul Gandhi: ರಾಹುಲ್ ಗಾಂಧಿ ಸಂಸದ ಸ್ಥಾನ ಮರುಸ್ಥಾಪನೆ- ಕೇರಳದ ವಯನಾಡಿನಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ
ವಯನಾಡ್, ಆಗಸ್ಟ್ 04: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಂಸದ ಸ್ಥಾನವನ್ನು ಮರುಸ್ಥಾಪನೆ ಮಾಡಲಾಗಿದೆ. ಈ ಮೂಲಕ ಮೋದಿ ಉಪನಾಮ ಕೇಸ್‌ನಲ್ಲಿ ಸುಪ್ರೀಂ ಕೋರ್ಟ್ ರಾಹುಲ್ ಗಾಂಧಿ ಅವರಿಗೆ ರಿಲೀಫ್ ನೀಡಿದೆ. ಇದು ಕೇರಳದ ವಾಯನಾಡಿನಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ.
ಗುಜರಾತ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ ನಂತರ, ರಾಹುಲ್ ಮತ್ತೆ ವಯನಾಡ್ ಸಂಸದರಾಗಿ ಸಂಸತ್ತಿಗೆ ಮರಳಲು ವೇದಿಕೆ ಸಿದ್ಧವಾಗಿದೆ.

ಶುಕ್ರವಾರ ಕಲ್ಪೆಟ್ಟಾದಲ್ಲಿ ಸಾವಿರಾರು ಕಾಂಗ್ರೆಸ್ ಸದಸ್ಯರು ಮೆರವಣಿಗೆ ನಡೆಸಿದರು. ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ರಾಹುಲ್ ಅವರ ಬಾಯಿ ಮುಚ್ಚಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯತ್ನಿಸಿದೆ ಎಂದು ಆರೋಪಿಸಿದರು.
ತೀರ್ಪಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ವಯನಾಡ್ ಜಿಲ್ಲಾ ಕಾಂಗ್ರೆಸ್ ಸಮಿತಿಯು ರಾಹುಲ್ ಕ್ಷೇತ್ರಕ್ಕೆ ಮರಳುವ ಹಿನ್ನೆಲೆಯಲ್ಲಿ ಭವ್ಯ ಸ್ವಾಗತ ಕಾರ್ಯಕಮವನ್ನು ಏರ್ಪಡಿಸಲು ಯೋಜಿಸಿದೆ.

ಈ ವರ್ಷದ ಮಾರ್ಚ್‌ನಲ್ಲಿ ಗುಜರಾತ್ ನ್ಯಾಯಾಲಯದ ಆದೇಶದ ನಂತರ ರಾಹುಲ್ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಯಿತು. ನಂತರ ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ಸಂಸದರೇ ಇರಲಿಲ್ಲ. ಅನರ್ಹತೆಯ ನಂತರ, ಕಲ್ಪೆಟ್ಟಾದಲ್ಲಿರುವ ಸಂಸದರ ಕಚೇರಿಯಲ್ಲಿದ್ದ ಉಚಿತ ಫೋನ್ ಮತ್ತು ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು. ಆದರೆ, ಕಚೇರಿ ಇನ್ನೂ ಕಾರ್ಯನಿರ್ವಹಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವಯನಾಡ್ ಕ್ಷೇತ್ರದಲ್ಲಿ ರಾಹುಲ್ ಶೇ 60ರಷ್ಟು ಮತಗಳನ್ನು ಗಳಿಸಿ ಗೆದ್ದಿದ್ದರು. ಕೇರಳದಿಂದ ಸ್ಪರ್ಧಿಸುವ ರಾಹುಲ್ ನಿರ್ಧಾರದಿಂದ ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಎದ್ದಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಕೇರಳ ಕಾಂಗ್ರೆಸ್, ಆದೇಶವನ್ನು ಸತ್ಯ ಮತ್ತು ನ್ಯಾಯದ ಯಶಸ್ಸು ಎಂದು ಬಣ್ಣಿಸಿದೆ.
'ಕೇರಳದ ಜನರು, ವಿಶೇಷವಾಗಿ ವಯನಾಡಿನ ಜನರು ತಮ್ಮ ಸಂಸದರನ್ನು ಮರಳಿ ಪಡೆದಿರುವುದರಿಂದ ಸಂತೋಷಪಡುತ್ತಾರೆ. ಈ ವಿಚಾರದಲ್ಲಿ ಬಿಜೆಪಿ ಕ್ಷಮೆಯಾಚಿಸಬೇಕು. ಇದು ರಾಹುಲ್ ಗಾಂಧಿಯವರ ಬಾಯಿ ಮುಚ್ಚಿಸುವ ಪ್ರಯತ್ನ ಎಂದು ಭಾರತದ ಅತ್ಯುನ್ನತ ನ್ಯಾಯಾಲಯ ಅರಿತುಕೊಂಡಿದೆ' ಎಂಬುದಾಗಿ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಹೇಳಿದ್ದಾರೆ.
ರಾಹುಲ್ ಅಜೇಯ ಎಂದು ಹಿರಿಯ ಕಾಂಗ್ರೆಸ್ ನಾಯಕ ಎಕೆ ಆಂಟನಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ರಾಜಕೀಯ ಕದನಗಳಲ್ಲಿ ರಾಹುಲ್ ಅವರನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ. 2024 ರ ಚುನಾವಣೆಯಲ್ಲಿ ರಾಹುಲ್ ಮತ್ತೆ ವಯನಾಡ್ ಲೋಕಸಭಾ ಕ್ಷೇತ್ರವನ್ನು ಆಯ್ಕೆ ಮಾಡಲಿ ಎಂದು ನಾನು ಬಯಸುತ್ತೇನೆ ಎಂಬುದಾಗಿ ಆಂಟನಿ ಆಶಿಸಿದ್ದಾರೆ.
ಮೋದಿ ಉಪನಾಮ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ನಂತರ ರಾಹುಲ್ ಅವರನ್ನು ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು.












Click it and Unblock the Notifications