11 ಸಾವಿರದ ಕ್ಯಾನ್ಸರ್ ಇಂಜೆಕ್ಷನ್‌ಗೆ 1.3 ಲಕ್ಷ ಬಿಲ್: ಆಸ್ಪತ್ರೆಗಳ ಸುಲಿಗೆಗೆ ಸುಪ್ರೀಂ ಕೋರ್ಟ್ ಗರಂ

ಜೀವನ್ಮರಣ ಹೋರಾಟದಲ್ಲಿರುವ ರೋಗಿಗಳಿಂದ ಖಾಸಗಿ ಆಸ್ಪತ್ರೆಗಳು ವಿಧಿಸುತ್ತಿರುವ ದುಬಾರಿ ವೈದ್ಯಕೀಯ ವೆಚ್ಚದ ಬಗ್ಗೆ ಭಾರತದ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಜೀವ ಉಳಿಸುವ ಔಷಧಗಳ ಮೂಲ ಬೆಲೆಗೂ, ಆಸ್ಪತ್ರೆಗಳು ರೋಗಿಗಳಿಗೆ ವಿಧಿಸುವ ಬಿಲ್‌ಗೂ ಇರುವ ವ್ಯತ್ಯಾಸವನ್ನ ಗಮನಿಸಿರುವ ನ್ಯಾಯಾಲಯ, ಇದು ಸುಲಿಗೆ ಎಂದು ತರಾಟೆಗೆ ತೆಗೆದುಕೊಂಡಿದೆ.

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠವು ಔಷಧಗಳ ಬೆಲೆ ನಿಯಂತ್ರಣಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸುವಾಗ ಒಂದು ಆಘಾತಕಾರಿ ಉದಾಹರಣೆಯನ್ನ ಮುಂದಿಟ್ಟಿತು. ಮೆಡಿಕಲ್ ಡಿಸ್ಟ್ರಿಬ್ಯೂಟರ್ ಒಬ್ಬರ ಪತ್ನಿ ಕ್ಯಾನ್ಸರ್ ಚಿಕಿತ್ಸೆಗಾಗಿ ಪ್ರಸಿದ್ಧ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

Supreme Court Questions Hospitals Over 1 3 Lakh Chemo Injection Calls Huge Markups Loot And Dacoity

ಕೀಮೋಥೆರಪಿಗೆ ಬಳಸುವ ಇಂಜೆಕ್ಷನ್ ಅನ್ನ ತಾನೇ ಕೇವಲ 11,000 ರೂಪಾಯಿಗೆ ತಂದುಕೊಡುವುದಾಗಿ ಆ ವಿತರಕ ಆಸ್ಪತ್ರೆಗೆ ಮನವಿ ಮಾಡಿದ್ದರು. ಆದರೆ ಆಸ್ಪತ್ರೆಯು ಅದನ್ನು ನಿರಾಕರಿಸಿ, ತಾನೇ ಅದೇ ಇಂಜೆಕ್ಷನ್ ಅನ್ನು ರೋಗಿಗೆ ನೀಡಿ ಬರೋಬ್ಬರಿ 1.3 ಲಕ್ಷ ರೂಪಾಯಿ ಬಿಲ್ ಮಾಡಿದೆ. ಈ ಸುಲಿಗೆಗೆ ಯಾವುದೇ ಸಮರ್ಥನೆ ನೀಡಲು ಸಾಧ್ಯವೇ? ಹಣ ಎಲ್ಲಿಗೆ ಹೋಗುತ್ತದೆ? ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನ ಪ್ರಶ್ನಿಸಿದೆ.

ಆಸ್ಪತ್ರೆಗಳ ಸುಲಿಗೆ ಮತ್ತು ರೋಗಿಗಳ ಪರದಾಟ

ರೋಗಿಗಳು ಮತ್ತು ಅವರ ಕುಟುಂಬಗಳು ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳ ಚಿಕಿತ್ಸೆ ಪಡೆಯುವಾಗ ಆಸ್ಪತ್ರೆಗಳ ಜೊತೆ ದರ ಚೌಕಾಸಿ ಮಾಡುವ ಪರಿಸ್ಥಿತಿಯಲ್ಲಿ ಇರುವುದಿಲ್ಲ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಆಸ್ಪತ್ರೆಗಳು, ಉತ್ಪಾದಕರಿಂದ ಭಾರಿ ರಿಯಾಯಿತಿ ಪಡೆದು ರೋಗಿಗಳಿಂದ ಮಾತ್ರ 100 ರಿಂದ 200 ಪಟ್ಟು ಹೆಚ್ಚಿನ ಹಣ ವಸೂಲಿ ಮಾಡುತ್ತಿವೆ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.

ಜನರ ಜೀವದ ಜೊತೆ ಆಟವಾಡುತ್ತಿರುವಾಗ ಬಂಡವಾಳಶಾಹಿ ಮನಸ್ಥಿತಿ ಇರಬಾರದು ಎಂದು ಕೋರ್ಟ್ ಕಿವಿಮಾತು ಹೇಳಿದೆ.

ಔಷಧ ಬೆಲೆ ನಿಯಂತ್ರಣಕ್ಕೆ ಸರ್ಕಾರದ ಮುಂದಿರುವ ಸವಾಲು

ದೇಶದಲ್ಲಿ 2013ರ ಔಷಧ ಬೆಲೆ ನಿಯಂತ್ರಣ ಆದೇಶ ಜಾರಿಯಲ್ಲಿದ್ದರೂ, ಶೇ. 90ರಷ್ಟು ಔಷಧಗಳು ಇದರ ವ್ಯಾಪ್ತಿಯಿಂದ ಹೊರಗಿವೆ ಎಂಬ ಅಂಶವನ್ನ ಸುಪ್ರೀಂ ಕೋರ್ಟ್ ಬೊಟ್ಟು ಮಾಡಿದೆ. "ಸರ್ಕಾರದ ಕಣ್ಣೆದುರೇ ಇಂತಹ ಸುಲಿಗೆ ನಡೆಯುತ್ತಿದ್ದರೂ ಸರ್ಕಾರ ಮೌನವಾಗಿದೆ. ಈ ರೀತಿ ಮಿತಿಮೀರಿ ವರ್ತಿಸಲು ಅವಕಾಶ ನೀಡಬೇಕೇ?" ಎಂದು ನ್ಯಾಯಾಲಯ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

ಅಗತ್ಯ ಔಷಧಗಳ ಪಟ್ಟಿಯಲ್ಲಿ ಬಹುತೇಕ ಜೀವ ಉಳಿಸುವ ಔಷಧಗಳನ್ನ ಸೇರಿಸದೆ, ರೋಗಿಗಳಿಗೆ ಆರ್ಥಿಕ ಹೊರೆ ಹೇರಲಾಗುತ್ತಿದೆ ಎಂಬುದನ್ನ ಕೋರ್ಟ್ ಪ್ರಸ್ತಾಪಿಸಿದೆ.

ಕೀಮೋಥೆರಪಿ ಇಂಜೆಕ್ಷನ್ ವೆಚ್ಚದ ಬಗ್ಗೆ ವಾದ-ಪ್ರತಿವಾದ

ವಿಚಾರಣೆ ವೇಳೆ ಖಾಸಗಿ ಆಸ್ಪತ್ರೆಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಆಸ್ಪತ್ರೆಗಳು 24/7 ಮೂಲಸೌಕರ್ಯ, ಸಿಬ್ಬಂದಿ ನಿರ್ವಹಣೆ ಮಾಡಬೇಕಿರುವುದರಿಂದ ನಿರ್ವಹಣಾ ವೆಚ್ಚ ಹೆಚ್ಚಿರುತ್ತದೆ ಎಂದರು. ಅಲ್ಲದೆ, ಹೊರಗಿನಿಂದ ತರುವ ಔಷಧಗಳು ನಕಲಿಯಾಗಿರುವ ಅಪಾಯವಿರುತ್ತದೆ ಎಂದು ವಾದಿಸಿದರು.

ಆದರೆ ಈ ವಾದವನ್ನು ಸಾರಾಸಗಟಾಗಿ ತಳ್ಳಿಹಾಕಿದ ನ್ಯಾಯಪೀಠ, ಆಸ್ಪತ್ರೆಗಳು ತಮ್ಮ ನಿರ್ವಹಣಾ ವೆಚ್ಚವನ್ನ ಇತರೆ ಸೇವೆಗಳ ಶುಲ್ಕದ ಮೂಲಕ ಭರಿಸಬಹುದು, ಆದರೆ ಔಷಧಿಗಳ ಮೇಲೆ 100 ಪಟ್ಟು ಹೆಚ್ಚು ಹಣ ವಸೂಲಿ ಮಾಡುವ ಡಕಾಯಿತಿಯ ಮೂಲಕ ಅಲ್ಲ ಎಂದು ಸ್ಪಷ್ಟಪಡಿಸಿದೆ.

ಎಲ್ಲಾ ವಾದ-ಪ್ರತಿವಾದಗಳನ್ನು ಆಲಿಸಿರುವ ಸುಪ್ರೀಂ ಕೋರ್ಟ್, ಈ ಮಹತ್ವದ ಪ್ರಕರಣದ ತೀರ್ಪನ್ನ ಕಾಯ್ದಿರಿಸಿದ್ದು, ಮುಂದಿನ ದಿನಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಬೆಲೆ ನಿಯಂತ್ರಣದ ಬಗ್ಗೆ ಕಠಿಣ ನಿಯಮಗಳು ಜಾರಿಯಾಗುವ ನಿರೀಕ್ಷೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+