11 ಗುಂಡು ದೇಹ ಸೇರಿದ್ದರೂ ಉಗ್ರರೆದುರು ನಿಂತು ಸಂಸತ್ ಭವನ ರಕ್ಷಿಸಿದ ವೀರನಾರಿ: ಅಶೋಕ ಚಕ್ರ ಪುರಸ್ಕೃತೆ ಕಮಲೇಶ್ ಕುಮಾರಿ ಸಾಹಸಗಾಥೆ
ಡಿಸೆಂಬರ್ 13, 2001. ಭಾರತದ ಇತಿಹಾಸದಲ್ಲಿ ಒಂದು ಕರಾಳ ದಿನ. ಐದು ಮಂದಿ ಶಸ್ತ್ರಸಜ್ಜಿತ ಉಗ್ರರು ಕಾರಿನಲ್ಲಿ ಬಂದು ಭಾರತದ ಪ್ರಜಾಪ್ರಭುತ್ವದ ದೇಗುಲ ಸಂಸತ್ ಭವನದೊಳಗೆ ನುಗ್ಗಲು ಯತ್ನಿಸಿದರು. ಆದರೆ, ಈ ಭಯೋತ್ಪಾದಕರ ಸಂಚನ್ನ ವಿಫಲಗೊಳಿಸಿ, ಇಡೀ ಸಂಸತ್ತನ್ನ ರಕ್ಷಿಸಿದ ಕೀರ್ತಿ ಕೈಯಲ್ಲಿ ಕೇವಲ ವಾಕಿ-ಟಾಕಿ ಹಿಡಿದುಕೊಂಡಿದ್ದ ಒಬ್ಬ ಮಹಿಳಾ ಕಾನ್‌ಸ್ಟೇಬಲ್‌ಗೆ ಸಲ್ಲುತ್ತದೆ. ಅವರ ಬಳಿ ಯಾವುದೇ ಬಂದೂಕು ಇರಲಿಲ್ಲ. ಅವರೇ ಭಾರತದ ವೀರನಾರಿ ಕಮಲೇಶ್ ಕುಮಾರಿ ಯಾದವ್.
ಸಿಆರ್‌ಪಿಎಫ್ ವೀರನಾರಿ ಕಮಲೇಶ್ ಕುಮಾರಿ ಹಿನ್ನೆಲೆ
ಉತ್ತರ ಪ್ರದೇಶದ ಕನೌಜ್ ಮೂಲದವರಾದ ಕಮಲೇಶ್ ಕುಮಾರಿ ಯಾದವ್ ಅವರು 1994ರಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಗೆ (CRPF) ಸೇರ್ಪಡೆಯಾದರು. ತಮ್ಮ ವೃತ್ತಿಜೀವನದಲ್ಲಿ ಪ್ರಾಮಾಣಿಕತೆ ಮತ್ತು ಕರ್ತವ್ಯನಿಷ್ಠೆಗೆ ಹೆಸರಾಗಿದ್ದ ಅವರನ್ನು, ಜುಲೈ 2001ರಲ್ಲಿ ಸಂಸತ್ ಭವನದ ಭದ್ರತೆಗಾಗಿ ನಿಯೋಜಿಸಲಾದ ಮಹಿಳಾ ಬೆಟಾಲಿಯನ್‌ನಲ್ಲಿ ಪೋಸ್ಟ್ ಮಾಡಲಾಯಿತು.

ಆ ಸಮಯದಲ್ಲಿ, ಸಂಸತ್ತಿನ ಭದ್ರತೆಯಲ್ಲಿ ತೊಡಗಿದ್ದ ಮಹಿಳಾ ಕಾನ್‌ಸ್ಟೇಬಲ್‌ಗಳಿಗೆ ಯಾವುದೇ ಶಸ್ತ್ರಾಸ್ತ್ರಗಳನ್ನ ನೀಡುವ ನಿಯಮವಿರಲಿಲ್ಲ. ಹಾಗಾಗಿ ಕಮಲೇಶ್ ಅವರು ನಿಶಸ್ತ್ರರಾಗಿಯೇ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದರು.
2001ರ ಸಂಸತ್ ದಾಳಿಯ ಆ ಕರಾಳ ದಿನ
ಅದು ಡಿಸೆಂಬರ್ 13, 2001ರ ಮುಂಜಾನೆ. ಕಮಲೇಶ್ ಕುಮಾರಿ ಅವರು ಸಂಸತ್ತಿನ ಐರನ್ ಗೇಟ್ ಸಂಖ್ಯೆ 1ರಲ್ಲಿ ಕರ್ತವ್ಯದಲ್ಲಿದ್ದರು. ಸುಮಾರು 11.50ರ ಸುಮಾರಿಗೆ, ಗೃಹ ಸಚಿವಾಲಯದ ಸ್ಟಿಕ್ಕರ್ ಮತ್ತು ಕೆಂಪು ದೀಪವಿದ್ದ ಬಿಳಿ ಬಣ್ಣದ ಅಂಬಾಸಿಡರ್ ಕಾರೊಂದು ವಿಜಯ್ ಚೌಕ್ ಕಡೆಯಿಂದ ವೇಗವಾಗಿ ಬಂತು. ಆ ಕಾರು ಗೇಟ್ ಬಳಿ ವೇಗವನ್ನ ಕಡಿಮೆ ಮಾಡದಿದ್ದಾಗ, ಕಮಲೇಶ್ ಅವರ ಮನಸ್ಸಿಗೆ ಏನೋ ಅಪಾಯದ ಮುನ್ಸೂಚನೆ ಸಿಕ್ಕಿತು. ಆಕೆ ತಕ್ಷಣ ಕಾರಿನತ್ತ ಹೆಜ್ಜೆ ಹಾಕುತ್ತಿದ್ದಂತೆಯೇ, ಕಾರಿನಿಂದ ಐವರು ಶಸ್ತ್ರಸಜ್ಜಿತ ಉಗ್ರರು ಹೊರಬಂದರು.
ಪ್ರಾಣದ ಹಂಗು ತೊರೆದು ಸಂಸತ್ತನ್ನ ರಕ್ಷಿಸಿದ ಸಾಹಸಿ
ತಮ್ಮ ಬಳಿ ಯಾವುದೇ ಆಯುಧವಿಲ್ಲದಿದ್ದರೂ ಕಮಲೇಶ್ ಕುಮಾರಿ ಕಿಂಚಿತ್ತೂ ಹೆದರಲಿಲ್ಲ. ತಕ್ಷಣವೇ ಗೇಟ್ ಮುಚ್ಚಲು ಹಿಂದಕ್ಕೆ ಓಡಿದ ಅವರು, ತಮ್ಮ ಕೈಯಲ್ಲಿದ್ದ ವಾಕಿ-ಟಾಕಿಯ ಮೂಲಕ ಜೋರಾಗಿ ಕೂಗುತ್ತಾ ಎಲ್ಲಾ ಭದ್ರತಾ ಸಿಬ್ಬಂದಿಗೆ ಎಚ್ಚರಿಕೆ ರವಾನಿಸಿದರು.
ಗೇಟ್ ನಂಬರ್ 11ರಲ್ಲಿದ್ದ ಕಾನ್‌ಸ್ಟೇಬಲ್ ಸುಖ್ವಿಂದರ್ ಸಿಂಗ್ ಅವರತ್ತ ಓಡುತ್ತಾ ಇತರರನ್ನ ಎಚ್ಚರಿಸಿದರು. ಆಕೆಯ ಕೂಗು ಉಗ್ರರಿಗೂ ಕೇಳಿಸಿತು. ತಮ್ಮ ಯೋಜನೆ ವಿಫಲವಾಗುತ್ತದೆ ಎಂದು ಅರಿತ ಉಗ್ರರು, ಕಮಲೇಶ್ ಕುಮಾರಿ ಅವರತ್ತ ಮನಬಂದಂತೆ ಗುಂಡು ಹಾರಿಸಿದರು. ಒಟ್ಟು 11 ಗುಂಡುಗಳು ಅವರ ದೇಹವನ್ನು ಹೊಕ್ಕವು.
ಈ ಸಂಸತ್ ಭವನದ ದಾಳಿಯಲ್ಲಿ ಹುತಾತ್ಮರಾದ ಮೊದಲ ವ್ಯಕ್ತಿ ಕಮಲೇಶ್ ಕುಮಾರಿ. ಆದರೆ, ಆಕೆ ನೀಡಿದ ಮೊದಲ ಎಚ್ಚರಿಕೆಯಿಂದಾಗಿ ಇತರ ಭದ್ರತಾ ಸಿಬ್ಬಂದಿ ಎಚ್ಚೆತ್ತುಕೊಂಡು ಉಗ್ರರನ್ನ ಸದೆಬಡಿಯಲು ಸಾಧ್ಯವಾಯಿತು. ಒಬ್ಬನೇ ಒಬ್ಬ ಉಗ್ರ ಕೂಡ ಸಂಸತ್ ಕಟ್ಟಡದೊಳಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ.
ಮರಣೋತ್ತರ ಅಶೋಕ ಚಕ್ರ ಪುರಸ್ಕೃತೆ
ತಮ್ಮ ಪ್ರಾಣವನ್ನ ಲೆಕ್ಕಿಸದೆ ದೇಶಕ್ಕಾಗಿ ಮಡಿದ ಕಮಲೇಶ್ ಕುಮಾರಿ ಅವರು ಪತಿ ಅವಧೇಶ್ ಹಾಗೂ ಇಬ್ಬರು ಪುತ್ರಿಯರಾದ ಜ್ಯೋತಿ ಮತ್ತು ಶ್ವೇತಾ ಅವರನ್ನ ಅಗಲಿದರು. ಅವರ ಈ ಅಪ್ರತಿಮ ಶೌರ್ಯ ಮತ್ತು ತ್ಯಾಗವನ್ನು ಗುರುತಿಸಿ, 2002ರಲ್ಲಿ ಅವರಿಗೆ ಮರಣೋತ್ತರವಾಗಿ 'ಅಶೋಕ ಚಕ್ರ' ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈ ಅತ್ಯುನ್ನತ ಶೌರ್ಯ ಪ್ರಶಸ್ತಿಯನ್ನ ಪಡೆದ ಭಾರತದ ಮೊದಲ ಮಹಿಳಾ ಪೊಲೀಸ್ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾದರು. ಕಮಲೇಶ್ ಕುಮಾರಿ ಅವರ ಬಲಿದಾನ ಇಂದಿಗೂ ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿ ಎನ್ನಬಹುದು.


Click it and Unblock the Notifications
