ಅಮಿತ್ ಶಾ ಬೆಂಗಾವಲು ಪಡೆ ಮೇಲೆ ಕಲ್ಲು ತೂರಿದ ಆಂಧ್ರ ಹೋರಾಟಗಾರರು
ತಿರುಪತಿ, ಮೇ 11: ಕರ್ನಾಟಕ ವಿಧಾನಸಭೆ ಚುನಾವಣೆಯ ಅಬ್ಬರದ ಬಿಸಿಯ ನಡುವೆ ಪ್ರಚಾರ ಮಾಡಿ ಹೋಗಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಆಂಧ್ರಪ್ರದೇಶದ ಜನರು ಪ್ರತಿಭಟನೆಯ ಬಿಸಿ ತೋರಿಸಿದ್ದಾರೆ.
ಪಕ್ಷದ ಗೆಲುವಿಗಾಗಿ ಪ್ರಾರ್ಥಿಸಲು ತಿರುಮಲ ದೇವಸ್ಥಾನದ ಮೊರೆ ಹೋಗಿದ್ದ ಅಮಿತ್ ಶಾ ಅವರಿಗೆ ಅಲ್ಲಿ ಕಹಿ ಅನುಭವ ಎದುರಾಗಿದೆ.
ಅಮಿತ್ ಶಾ ಅವರ ಬೆಂಗಾವಲು ವಾಹನದ ಮೇಲೆ ಕೆಲವರು ಕಲ್ಲು ತೂರಿದ ಘಟನೆ ನಡೆದಿದೆ.

ದರ್ಶನ ಮುಗಿಸಿ ಹೊರಬರುತ್ತಿದ್ದ ಅಮಿತ್ ಶಾ ವಿರುದ್ಧ ಅಲಿಪಿರಿ ಗರುಡಾ ವೃತ್ತದಲ್ಲಿ ಗುಂಪೊಂದು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿಕೊಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದೆ.
ಶಾ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿದ ಪ್ರತಿಭಟನಾಕಾರರು 'ಅಮಿತ್ ಶಾ ಗೋ ಬ್ಯಾಕ್' ಎಂಬ ಘೋಷಣೆ ಕೂಗಿದರು. ಅಮಿತ್ ಶಾ ಅವರ ವಿರುದ್ಧದ ಪ್ರತಿಭಟನೆ ನಿಮಿತ್ತ ಜನರನ್ನು ನಿಯಂತ್ರಿಸಲು ಭಾರಿ ಪ್ರಮಾಣದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ವೆಂಕಟೇಶ್ವರ ಸ್ವಾಮಿಯ ಪಾದದ ಬಳಿ ಕುಳಿತು ಆಂಧ್ರಪ್ರದೇಶಕ್ಕೆ ನೀಡಿದ ಎಲ್ಲ ಭರವಸೆಗಳನ್ನೂ ಬಿಜೆಪಿ ಮರೆತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ರಾಜ್ಯಕ್ಕೆ ವಂಚನೆ ಮಾಡಿದ ಬಳಿಕವೂ ಪವಿತ್ರ ದೇಗುಲಕ್ಕೆ ಏಕೆ ಬಂದರು ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಕೆಲವರು ಅಮಿತ್ ಶಾ ಅವರ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಿದರು. ಪ್ರಕರಣ ಸಂಬಂಧ ಹಲವರನ್ನು ಬಂಧಿಸಲಾಗಿದೆ.












Click it and Unblock the Notifications