Israel-Palestine War: ಪರಿಸ್ಥಿತಿ ಹದಗೆಟ್ಟಿದೆ.. ಎಚ್ಚರವಹಿಸಿ- ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ಸರ್ಕಾರದ ಸಲಹೆ
ನವದೆಹಲಿ, ಅಕ್ಟೋಬರ್ 07: ಇಸ್ರೇಲ್ ಅಕ್ಷರಶಃ ರಣರಂಗವಾಗಿದೆ. ಇಸ್ರೇಲ್ ಮೇಲೆ ಇಂದು ಬೆಳಿಗ್ಗೆ ಹಮಾಸ್ ಉಗ್ರರು ದಾಳಿ ಮಾಡಿದ್ದಾರೆ. ಕೇವಲ 20 ನಿಮಿಷಗಳಲ್ಲಿ 5,000 ರಾಕೆಟ್‌ಗಳನ್ನು ನುಗ್ಗಿಸಿದ್ದಾರೆ. ಇಸ್ರೇಲ್‌ನಾದ್ಯಂತ ರಕ್ತದೋಕುಳಿಯನ್ನೇ ನಡೆಸುತ್ತಿದ್ದಾರೆ. ಇದಕ್ಕೆ ಪ್ರತಿಕಾರವಾಗಿ ಗಾಜಾ ಪಟ್ಟಣದೊಳಗೆ ಇಸ್ರೇಲ್ ಸೇನೆ ನುಗ್ಗಿದೆ. ಪ್ಯಾಲೆಸ್ಟೈನ್ ವಿರುದ್ಧ ಯುದ್ಧವನ್ನು ಘೋಷಿಸಿದೆ.
ರಾಕೆಟ್ ದಾಳಿ ನಡೆಸಿರುವ ಹಮಾಸ್ ಉಗ್ರರು ನೆಲ, ಸಮುದ್ರ ಮತ್ತು ಗಾಳಿಯ ಮೂಲಕ ನುಸುಳಿ ಇಸ್ರೇಲಿ ನಗರಗಳ ಮೇಲೆ ಅಚ್ಚರಿಯ ದಾಳಿ ನಡೆಸಿದ್ದಾರೆ. ಹಮಾಸ್‌ನ ದಾಳಿಯ ನಂತರ ಇಸ್ರೇಲ್‌ನಲ್ಲಿ 'ಯುದ್ಧದ ಸ್ಥಿತಿ' ಎಂದು ಘೋಷಿಸಲಾಗಿದೆ.

ಜನರು ಮನೆಗಳಿಂದ ಹೊರಬಾರದು. ಜಾಗರೂಕರಾಗಿರಬೇಕು. ಎಚ್ಚರವಹಿಸಬೇಕೆಂದು ಇಸ್ರೇಲ್ ಸರ್ಕಾರ ಮನವಿ ಮಾಡಿದೆ. ಇದೇ ರೀತಿಯ ಮನವಿಯನ್ನು ಅಲ್ಲಿನ ಭಾರತೀಯರಿಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿಕೊಂಡಿದೆ.
ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತನ್ನ ಪ್ರಜೆಗಳಿಗೆ ಪ್ರಮುಖ ಸಲಹೆಯನ್ನು ನೀಡಿದೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿರುವ ಭಾರತೀಯ ರಾಯಭಾರ ಕಚೇರಿಯು, 'ಇಸ್ರೇಲ್‌ನಲ್ಲಿನ ಪ್ರಸ್ತುತ ಪರಿಸ್ಥಿತಿಯು ಹದಗೆಟ್ಟಿದೆ. ಇದು ನಮ್ಮ ಗಮನದಲ್ಲಿದೆ. ಇಸ್ರೇಲ್‌ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು ಜಾಗರೂಕರಾಗಿಬೇಕು. ಸ್ಥಳೀಯ ಅಧಿಕಾರಿಗಳ ಸಲಹೆಯಂತೆ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಅನುಸರಿಸಬೇಕು. ದಯವಿಟ್ಟು ಜಾಗರೂಕರಾಗಿರಿ. ಅನಗತ್ಯ ಸಂಚಾರವನ್ನು ತಪ್ಪಿಸಿ. ಸುರಕ್ಷತಾ ಆಶ್ರಯಗಳ ಹತ್ತಿರವೇ ಇರಿ' ಎಂದು ಸಲಹೆ ನೀಡಿದೆ.

ಸಂಘರ್ಷದ ಸಮಯದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಇಸ್ರೇಲ್ ಸೂಚನೆ ನೀಡಿದೆ. ಇಸ್ರೇಲಿ ಹೋಮ್ ಫ್ರಂಟ್ ಕಮಾಂಡ್ ವೆಬ್‌ಸೈಟ್ https://www.oref.org.il/en ಅನ್ನು ಪರಿಶೀಲಿಸಲು ಭಾರತ ಕೇಳಿಕೊಂಡಿದೆ.
ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ರಾಷ್ಟ್ರವು ಇಂದು ಯುದ್ಧವನ್ನು ಎದುರಿಸುತ್ತಿದೆ ಎಂದು ತಿಳಿಸಿದ್ದಾರೆ. ಶತ್ರುಗಳು ತಮ್ಮ ಕೃತ್ಯಗಳಿಗೆ ಮರು ಉತ್ತರ ಪಡೆಯಲಿದ್ದಾರೆ ಎಂದು ಅವರು ಹೇಳಿದ್ದಾರೆ. ದೂರದರ್ಶನದ ಭಾಷಣದಲ್ಲಿ ಮಾತನಾಡಿದ ಅವರು, ಇಸ್ರೇಲ್ ಮತ್ತು ಅದರ ನಾಗರಿಕರ ವಿರುದ್ಧ ಹಮಾಸ್ ಶನಿವಾರ ಬೆಳಿಗ್ಗೆ ಮಾರಣಾಂತಿಕ ಅನಿರೀಕ್ಷಿತ ದಾಳಿಯನ್ನು ಪ್ರಾರಂಭಿಸಿದೆ ಎಂದು ತಿಳಿಸಿದ್ದಾರೆ.
'ನಾನು ನಮ್ಮ ಭದ್ರತಾ ವ್ಯವಸ್ಥೆಯ ಉನ್ನತ ಅಧಿಕಾರಿಗಳನ್ನು ಕರೆದಿದ್ದೇನೆ. ಭಯೋತ್ಪಾದಕರು ನುಸುಳಿರುವ ಪ್ರದೇಶಗಳಲ್ಲಿನ ಜನರನ್ನು ಸ್ಥಳಾಂತರಿಸಲು ತಕ್ಷಣದ ಆದೇಶಗಳನ್ನು ನೀಡಿದ್ದೇನೆ. ಈ ಕಾರ್ಯಾಚರಣೆಗಳು ಪ್ರಸ್ತುತ ನಡೆಯುತ್ತಿವೆ' ಎಂದು ಅವರು ಹೇಳಿದ್ದಾರೆ.
ಹಮಾಸ್‌ನಿಂದ ನಿಯಂತ್ರಿಸಲ್ಪಡುವ ಗಾಜಾ ಪಟ್ಟಿಯಿಂದ ರಾಕೆಟ್‌ಗಳ ಸುರಿಮಳೆಗೈದ ನಂತರ ಇಸ್ರೇಲಿ ನಗರಗಳಲ್ಲಿ ಮುಂಜಾನೆ ಸೈರನ್‌ಗಳು ಮೊಳಗಿವೆ. ಸುಮಾರು 60 ಶಸ್ತ್ರಸಜ್ಜಿತ ದಾಳಿಕೋರರು ಇಸ್ರೇಲಿ ಪ್ರಾಂತ್ಯಗಳೊಗೆ ನುಗ್ಗಿದ್ದಾರೆ. ಪೂರ್ಣ ಪ್ರಮಾಣದ ದಾಳಿಯನ್ನು ಆರಂಭಿಸಿದ್ದಾರೆ. ಈಗ ನಡೆಯುತ್ತಿರುವ ಸಂಘರ್ಷದಲ್ಲಿ ಸುಮಾರು 200 ಇಸ್ರೇಲಿ ಸೈನಿಕರು ಗಾಯಗೊಂಡಿದ್ದಾರೆ. ಹಲವರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಹಮಾಸ್ ದಾಳಿಕೋರರು ಇಸ್ರೇಲ್‌ನ ವಸತಿ ಪ್ರದೇಶಗಳ ಮೇಲೆ ದಾಳಿ ನಡೆಸಿದ್ದಾರೆ. ನಾಗರಿಕರ ಮೇಲೆ ಗುಂಡು ಹಾರಿಸುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಕೆಲವು ಇಸ್ರೇಲಿ ಸೈನಿಕರನ್ನು ಹಮಾಸ್ ಒತ್ತೆಯಾಳಾಗಿ ತೆಗೆದುಕೊಂಡು ಗಾಜಾ ಕಡೆಗೆ ಕರೆದೊಯ್ಯುತ್ತಿದೆ. ಹಠಾತ್ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ 'ಆಪರೇಷನ್ ಐರನ್ ಸ್ವಾರ್ಡ್' ಅನ್ನು ಪ್ರಾರಂಭಿಸಿದೆ.












Click it and Unblock the Notifications