ಇಂಡಿಯಾ ಬದಲು ಭಾರತವೆಂದು ಕರೆಯಲು ಪ್ರಾರಂಭಿಸಿ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮನವಿ
ಗುವಾಹಟಿ, ಸೆಪ್ಟೆಂಬರ್ 02: ದೇಶವನ್ನು ಉಲ್ಲೇಖಿಸುವಾಗ 'ಇಂಡಿಯಾ' ಬದಲಿಗೆ 'ಭಾರತ' ಎಂದು ಕರೆಯಲು ಪ್ರಾರಂಭಿಸಬೇಕೆಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಮನವಿ ಮಾಡಿದರು.
'ಭಾರತ' ಎಂಬ ಹೆಸರು ಐತಿಹಾಸಿಕ ಮಹತ್ವವನ್ನು ಹೊಂದಿದೆ. ಇದನ್ನು ಪ್ರಾಚೀನ ಕಾಲದಿಂದಲೂ ಬಳಸಲಾಗುತ್ತಿದೆ ಎಂದು ಭಾಗವತ್ ಹೇಳಿದರು.
ಗುವಾಹಟಿಯಲ್ಲಿ ಶುಕ್ರವಾರ ಸಕಲ್ ಜೈನ ಸಮಾಜ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಆರ್‌ಎಸ್‌ಎಸ್ ಮುಖ್ಯಸ್ಥರು ಈ ಹೇಳಿಕೆ ನೀಡಿದರು.

'ನಮ್ಮ ದೇಶದ ಹೆಸರು ಭಾರತ ಎಂದು ಹಿಂದಿನಿಂದಲೂ ಇದೆ. ಭಾಷೆ ಯಾವುದೇ ಆಗಿರಲಿ, ಹೆಸರು ಒಂದೇ ಆಗಿರುತ್ತದೆ' ಎಂದು ಭಾಗವತ್ ಹೇಳಿದರು.
'ಭಾರತ' ಎಂಬುದು ಅಸಂಖ್ಯಾತ ತಲೆಮಾರುಗಳಿಂದ ಬಂದ ರಾಷ್ಟ್ರದ ಹೆಸರಾಗಿದೆ. ಭಾಷೆಯ ವ್ಯತ್ಯಾಸವನ್ನು ಲೆಕ್ಕಿಸದೆ ಜನರು ಇದನ್ನು ಭಾರತವೆಂದು ಕರೆಯಲು ಆರಂಭಿಸಬೇಕು. ಎಲ್ಲಾ ಪ್ರಾಯೋಗಿಕ ಕ್ಷೇತ್ರಗಳಲ್ಲಿ ಇಂಡಿಯಾದ ಹೆಸರನ್ನು ಬದಲಿಸಬೇಕು. ಈ ಬಗ್ಗೆ ಜಾಗೃತಿ ಮೂಡಿಸುವುದು ಮುಖ್ಯವಾಗಿದೆ ಎಂದು ಅವರು ತಿಳಿಸಿದರು.
'ಕೆಲವೊಮ್ಮೆ ನಾವು ಇಂಗ್ಲಿಷ್‌ನಲ್ಲಿ ಮಾತನಾಡುವಾಗ ಇಂಡಿಯಾ ಎಂದು ಬಳಸಬೇಕಾಗುತ್ತದೆ. ಅದನ್ನು ಇತರ ವ್ಯಕ್ತಿಗೆ ಅರ್ಥವಾಗಲೆಂದು ನಾವು ಹೀಗೆ ಬಳಸುತ್ತೇವೆ. ಇನ್ನು ಮುಂದೆ ಹಾಗೆ ಮಾಡುವ ಅಗತ್ಯವಿಲ್ಲ. ಭಾಷೆಯ ಆಧಾರದ ಮೇಲೆ ವಿಶೇಷ ಹೆಸರುಗಳನ್ನು ಬದಲಾಯಿಸಲಾಗುವುದಿಲ್ಲ. ಪ್ರಪಂಚದಾದ್ಯಂತ ಇದನ್ನು ಎಲ್ಲಿಯೂ ಮಾಡಲಾಗಿಲ್ಲ' ಎಂದು ಅವರು ಹೇಳಿದರು.

ಇದೇ ವೇಳೆ, ಏಕತೆ ಮತ್ತು ಒಳಗೊಳ್ಳುವಿಕೆಯಲ್ಲಿನ ಶಕ್ತಿಯನ್ನು ಭಾಗವತ್ ಒತ್ತಿಹೇಳಿದರು. ಜಾಗತಿಕ ವೇದಿಕೆಯಲ್ಲಿ ಭಾರತವು ಒಗ್ಗೂಡಿಸುವ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರತಿಪಾದಿಸಿದರು.
ಭಾರತದ ಶೈಕ್ಷಣಿಕ ವ್ಯವಸ್ಥೆಯ ಮೇಲೆ ಬ್ರಿಟಿಷ್ ವಸಾಹತುಶಾಹಿ ಪ್ರಭಾವವಿದೆ. ಹೊಸ ಶಿಕ್ಷಣ ನೀತಿಯು ಮಕ್ಕಳಲ್ಲಿ ದೇಶಭಕ್ತಿಯನ್ನು ತುಂಬಲು ಪ್ರಯತ್ನಿಸುತ್ತದೆ ಎಂದು ಅವರು ತಿಳಿಸಿದರು.
ಮಕ್ಕಳಿಗೆ ಭಾರತೀಯ ಸಾಂಸ್ಕೃತಿಕ ಮೌಲ್ಯಗಳು, ಸಂಪ್ರದಾಯಗಳು ಮತ್ತು ಕುಟುಂಬ ತತ್ವಗಳನ್ನು ತಿಳಿಸಲು ಪೋಷಕರನ್ನು ಮೋಹನ್ ಭಾಗವತ್ ಕೇಳಿಕೊಂಡರು.
ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ ' ಇಂಡಿಯಾ ' ಎಂದು ಹೆಸರಿಸಲಾಗಿದೆ. ಕಾಂಗ್ರೆಸ್ ನೇತೃತ್ವದಲ್ಲಿ ಈ ಮೈತ್ರಿಕೂಟವನ್ನು ರಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್ ನಾಯಕ ಮೋಹನ್ ಭಾಗವತ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇಂಡಿಯಾ ಮೈತ್ರಿಕೂಟವು ಈಗಾಗಲೇ ಮೂರನೇ ಸಭೆ ನಡೆಸಿದೆ. ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎಯನ್ನು ಸೋಲಿಸಲು ಶತಾಯಗತಾಯ ಪ್ರಯತ್ನಿಸುತ್ತಿದೆ.












Click it and Unblock the Notifications