ಪ್ರಧಾನಿ ಮೋದಿ 'ಮನ್ ಕಿ ಬಾತ್'ಗೆ ಟಕ್ಕರ್: 'ಸ್ಪೀಕಿಂಗ್ ಫಾರ್ ಇಂಡಿಯಾ' ಪಾಡ್‌ಕಾಸ್ಟ್ ಆರಂಭಿಸಿದ ಎಂಕೆ ಸ್ಟಾಲಿನ್
ಚೆನ್ನೈ, ಸೆಪ್ಟೆಂಬರ್ 02: ತಮಿಳುನಾಡು ಮುಖ್ಯಮಂತ್ರಿ ಮತ್ತು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಅಧ್ಯಕ್ಷ ಎಂಕೆ ಸ್ಟಾಲಿನ್ ಅವರು ಗುರುವಾರ 'ಸ್ಪೀಕಿಂಗ್ ಫಾರ್ ಇಂಡಿಯಾ' ಶೀರ್ಷಿಕೆಯಡಿ ಪಾಡ್‌ಕಾಸ್ಟ್ ಸರಣಿಯನ್ನು ಘೋಷಿಸಿದ್ದಾರೆ. ಈ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಲೋಕಸಭಾ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದ್ದಾರೆ.
ಈ ಕುರಿತಾಗಿ ವಿಡಿಯೊವೊಂದನ್ನು ಹಂಚಿಕೊಂಡಿರುವ ಸ್ಟಾಲಿನ್, 'ನಾವು ಭಾರತದ ಒಳಿತಿಗಾಗಿ ಮಾತನಾಡುವ ಅವಶ್ಯಕತೆಯಿದೆ. ಬಿಜೆಪಿ ಮತ್ತು ಅದರ ಆಡಳಿತವು ದೇಶವನ್ನು ಹೇಗೆ ನಾಶಮಾಡಿತು ಎಂಬದನ್ನು ಜನರಿಗೆ ಹೇಳಿಬೇಕಿದೆ' ಎಂದು ತಿಳಿಸಿದ್ದಾರೆ.

'ನಾವು ಇಡೀ ಭಾರತಕ್ಕಾಗಿ ಮಾತನಾಡಲು ಬಯಸುತ್ತೇವೆ. ಕಳೆದ ವರ್ಷಗಳಲ್ಲಿ ಬಿಜೆಪಿ ಆಡಳಿತವು ಭಾರತವನ್ನು ಹೇಗೆ ನಾಶಪಡಿಸಿತು ಎಂಬುದನ್ನು ಹೇಳಲು ಇಚ್ಛಿಸುತ್ತೇವೆ. ಭವಿಷ್ಯದಲ್ಲಿ ನಾವು ಸಮಾನತೆಯ, ಸಾಮರಸ್ಯದ ಭಾರತವನ್ನು ಹೇಗೆ ನಿರ್ಮಿಸಲಿದ್ದೇವೆ ಎಂಬುದರ ಕುರಿತು ಅರಿವು ಮೂಡಿಸಲು ಸಿದ್ದರಾಗಿದ್ದೇವೆ. ನಾನು ದಕ್ಷಿಣದಿಂದ ಭಾರತಕ್ಕಾಗಿ ಮಾತನಾಡಲಿದ್ದೇನೆ. ಪಾಡ್‌ಕಾಸ್ಟ್ ಸರಣಿಯಲ್ಲಿ ಈ ಎಲ್ಲ ವಿಚಾರಗಳ ಕುರಿತು ಹೇಳಲಿದ್ದೇನೆ' ಎಂದು ಸ್ಟಾಲಿನ್ ತಿಳಿಸಿದ್ದಾರೆ
ಹೆಚ್ಚಿನ ಜನರನ್ನು ತಲುಪುವ ಪ್ರಯತ್ನದಲ್ಲಿ, ಸ್ಟಾಲಿನ್ ಅವರ ಆಡಿಯೊ ಸರಣಿಯನ್ನು ಇಂಗ್ಲಿಷ್ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ.
2019 ರ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನ 39 ಲೋಕಸಭಾ ಸ್ಥಾನಗಳಲ್ಲಿ 38 ಸ್ಥಾನಗಳನ್ನು ಗೆಲ್ಲುವ ಮೂಲಕ ಡಿಎಂಕೆ ಭಾರತದ ಮೂರನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಈ ಕುರಿತು ಮಾತನಾಡಿರುವ ಸ್ಟಾಲಿನ್, ನಾವು ಮೂರನೇ ದೊಡ್ಡ ಪಕ್ಷವಾಗಿದ್ದೇವೆ. ನಮ್ಮ ಪಕ್ಷವನ್ನು ಮಹಾನಾಯಕರು ಕಟ್ಟಿ ಬೆಳೆಸಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಅಣ್ಣಾ ದೊರೈ, ಎಂಕೆ ಕರುಣಾನಿಧಿಗಳಂತಹ ನಾಯಕರು ಡಿಎಂಕೆಯನ್ನು ಬೆಳೆಸಿದ್ದಾರೆ. ಜನರ ಮೇಲಿನ ಅವರ ಪ್ರಭಾವವು ಅಗಾಧವಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿಯು ಭಾರತದ ಪರಿಕಲ್ಪನೆಯನ್ನು ನಾಶ ಮಾಡಿದೆ ಎಂದು ಆರೋಪಿಸಿದ್ದಾರೆ.
ಎಂಕೆ ಸ್ಟಾಲಿನ್ ಅವರ ಈ ಪಾಡ್‌ಕಾಸ್ಟ್ ಅನ್ನು ಪ್ರಧಾನಿ ಮೋದಿ ಅವರ 'ಮನ್ ಕಿ ಬಾತ್' ಕಾರ್ಯಕ್ರಮಕ್ಕೆ ಪರ್ಯಾಯವಾಗಿ ನೋಡಲಾಗುತ್ತಿದೆ.
ಪ್ರತಿಪಕ್ಷಗಳು ನಿರ್ಮಿಸಿರುವ 'ಇಂಡಿಯಾ' ಮೈತ್ರಿಕೂಟದಲ್ಲಿ ಸ್ಟಾಲಿನ್ ಅವರು ಪ್ರಮುಖ ಪಾತ್ರವಹಿಸಿದ್ದಾರೆ. ಅವರು ಬಿಜೆಪಿಯ ಸೈದ್ದಾಂತಿಕ ವಿರೋಧಿಯಾಗಿದ್ದು ದ್ರಾವಿಡ ಚಳುವಳಿಯ ಪ್ರತಿಪಾದಕರೂ ಆಗಿದ್ದಾರೆ. ಆರ್‌ಎಸ್‌ಎಸ್ ಹಾಗೂ ಬಿಜೆಪಿಯನ್ನು ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಳ್ಳುವ ಭಾರತದ ನಾಯಕರಲ್ಲಿ ಅವರೂ ಸಹ ಒಬ್ಬರು.
ಮೂಲಗಳ ಪ್ರಕಾರ, ಪಾಡ್‌ಕಾಸ್ಟ್ ಪರಿಕಲ್ಪನೆಯನ್ನು ಪಾಪ್ಯುಲಸ್ ಎಂಪವರ್‌ಮೆಂಟ್ ನೆಟ್‌ವರ್ಕ್ (ಪಿಇಎನ್) ನೀಡಿದೆ. ಇದು ಡಿಎಂಕೆಗೆ ಚುನಾವಣಾ ಕಾರ್ಯತಂತ್ರದ ಭಾಗವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಲಾಗುತ್ತದೆ. ಪಾಡ್‌ಕಾಸ್ಟ್ ಸರಣಿಯನ್ನು ಪ್ರತಿ ಹದಿನೈದು ದಿನಗಳಿಗೊಮ್ಮೆ ವಿನ್ಯಾಸಗೊಳಿಸಲಾಗಿದೆ.
'ಪಾಡ್‌ಕಾಸ್ಟ್ ಸಂದೇಶವು ಹಿಂದಿನ ಡಿಎಂಕೆ ಆಡಳಿತದ ರಾಜಕೀಯ ಮತ್ತು ಸಾಮಾಜಿಕ-ಸಾಧನೆಗಳ ಸಂಕಲನವಾಗಿದೆ. ಸ್ಟಾಲಿನ್ ಅವರ ಸಂದೇಶವು ಪ್ರಸ್ತುತ ವಿದ್ಯಮಾನಗಳನ್ನು ಒಳಗೊಂಡಿರುತ್ತದೆ. ದ್ರಾವಿಡ-ಮಾದರಿ ಆಡಳಿತದೊಂದಿಗೆ ಬಿಜೆಪಿ ಆಡಳಿತದ ತುಲನಾತ್ಮಕ ವಿಶ್ಲೇಷಣೆ ಇರಲಿದೆ. ಬಿಜೆಪಿಯ ಪ್ರಚಾರಕ್ಕೆ ಪ್ರತ್ಯುತ್ತರವನ್ನು ಸಹ ಒಳಗೊಂಡಿದೆ' ಎಂದು ಮೂಲಗಳು ತಿಳಿಸಿವೆ.












Click it and Unblock the Notifications