ನಾಲ್ಕು ರಾಜ್ಯದ ಫಲಿತಾಂಶ ದತ್ತ ಎಲ್ಲರ ಚಿತ್ತ
ನವದೆಹಲಿ, ಡಿ. 7 : ಲೋಕಸಭಾ ಚುನಾವಣೆ ದಿಕ್ಸುಚಿ ಎಂದು ಪರಿಗಣಿಸಲಾಗಿರುವ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಭಾನುವಾರ ಪ್ರಕಟಗೊಳ್ಳಲಿದೆ. ನರೇಂದ್ರ ಮೋದಿ ನಾಲ್ಕು ರಾಜ್ಯಗಳಲ್ಲಿ ಮೋಡಿ ಮಾಡಿದ್ದಾರೆಯೇ?, ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಜಯದ ರೂವಾರಿ ಆಗಿಲಿದ್ದಾರೆಯೇ? ಎಂಬ ಪ್ರಶ್ನೆಗಳಿಗೆ ಭಾನುವಾರ ಮಧ್ಯಾಹ್ನ 1 ಗಂಟೆ ವೇಳೆಗೆ ಉತ್ತರ ದೊರೆಯಲಿದ್ದು, ಎಲ್ಲಾ ಕುತೂಹಲಗಳಿಗೆ ತೆರೆ ಬೀಳಲಿದೆ.
ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಚುನಾವಣೆ ನಡೆದ ನವದೆಹಲಿ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢ್ ರಾಜ್ಯದ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಳ್ಳಲು ಕ್ಷಣಗಣನೆ ಆರಂಭವಾಗಿದೆ. ಭಾನುವಾರ ಬೆಳಗ್ಗೆ ಎಂಟು ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, ಮಧ್ಯಾಹ್ನ 1 ಗಂಟೆ ವೇಳೆಗೆ ಫಲಿತಾಂಶದ ಸ್ಪಷ್ಟ ಚಿತ್ರಣ ದೊರೆಯುವ ಸಾಧ್ಯತೆ ಇದೆ. ನಾಲ್ಕು ರಾಜ್ಯಗಳಲ್ಲಿಯೂ ಉತ್ತಮ ದಾಖಲೆ ಮತದಾನವಾಗಿದ್ದು, ಫಲಿತಾಂಶ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.
ರಾಜಸ್ಥಾನಕ್ಕೆ ವಸುಂಧರಾ ರಾಜೇ ಅರಸ್ ರಾಣಿ ಯಾಗುವರೇ?, ಛತ್ತೀಸ್ ಗಢ್ ರಾಜ್ಯದಲ್ಲಿ ರಮಣ್ ಸಿಂಗ್ ಗೆ ವಿಜಯ ಲಕ್ಷ್ಮೀ ಒಲಿಯುತ್ತದೆಯೇ?, ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಹ್ಯಾಟ್ರಿಕ್ ಸಾಧಿಸುತ್ತಾರೆಯೇ?, ದೆಹಲಿಯಲ್ಲಿ ಶೀಲಾ ದೀಕ್ಷಿತ್ ಅವರಿಗೆ ಆಮ್ ಆದ್ಮಿ ಪಕ್ಷದ ನೇತಾರ ಅರವಿಂದ್ ಕೇಜ್ರೀವಾಲ್ ಸೋಲುಣಿಸುತ್ತಾರೆಯೇ ಎಂಬ ಕುತೂಹಲಗಳಿಗೆ ಭಾನುವಾರ ತೆರೆ ಬೀಳಲಿದೆ. ಒನ್ ಇಂಡಿಯಾ ಕನ್ನಡ ಬೆಳಗ್ಗೆಯಿಂದಲೇ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶದ live ಚಿತ್ರಣವನ್ನು ಓದುಗರಿಗೆ ನೀಡಲಿದೆ.

ದೆಹಲಿ ಮೇಲೆ ಭಾರೀ ನಿರೀಕ್ಷೆ
ಒಟ್ಟು 70 ಸ್ಥಾನಗಳನ್ನು ಹೊಂದಿರುವ ನವದೆಹಲಿ ವಿಧಾನಸಭೆ ಡಿ.4ರಂದು ಚುನಾವಣೆ ನಡೆದಿದೆ. ಕಾಂಗ್ರೆಸ್, ಬಿಜೆಪಿ, ಆಮ್ ಆದ್ಮಿ ಪಕ್ಷದ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ. ರಾಜ್ಯದಲ್ಲಿ ಬಹುಮತ ಪಡೆಯಲು 36 ಸ್ಥಾನಗಳನ್ನು ಗೆಲ್ಲಬೇಕಾಗಿದೆ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಜಯ ಸಾಧಿಸಲಿವೆ ಎಂದು ಭವಿಷ್ಯ ನುಡಿದಿವೆ. ಆಮ್ ಆದ್ಮಿ ಪಕ್ಷ ಚೊಚ್ಚಲ ಚುನಾವಣೆ ಎದುರಿಸಿದ್ದು, ಅರವಿಂದ್ ಕೇಜ್ರೀವಾಲ್ ಸಾಧನೆ ಏನು ಎಂಬುದು ಭಾನುವಾರದ ಫಲಿತಾಂಶ ಬಹಿರಂಗಪಡಿಸಲಿದೆ.

ಕೈತಪ್ಪುತ್ತಾ ರಾಜಸ್ಥಾನ
ಕಳೆದ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಸೋಲಿಸಿ ಅಧಿಕಾರಕ್ಕೆ ಏರಿದ್ದ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಅಧಿಕಾರ ಕೈ ತಪ್ಪಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಒಟ್ಟು 200 ಸ್ಥಾನಗಳಿಗಾಗಿ ರಾಜ್ಯದಲ್ಲಿ ಡಿ.1ರಂದು ಚುನಾವಣೆ ನಡೆದಿದ್ದು, ಬಹುಮತಕ್ಕೆ 101 ಸ್ಥಾನಗಳ ಅಗತ್ಯವಿದೆ. ಆಡಳಿತ ವಿರೋಧಿ ಅಲೆಯನ್ನು ಬಳಸಿಕೊಂಡು ವಸುಂಧರಾ ರಾಜೇ ಅಧಿಕಾರ ಹಿಡಿಯಲಿದ್ದಾರೆ ಎಂಬುದು ಅಭಿಪ್ರಾಯ ಫಲಿತಾಂಶ ಭಾನುವಾರ ಪ್ರಕಟಗೊಳ್ಳಲಿದೆ.

ಮಧ್ಯಪ್ರದೇಶದಲ್ಲಿ ಬಿಜೆಪಿ ಹ್ಯಾಟ್ರಿಕ್?
ಒಟ್ಟು 230 ಕ್ಷೇತ್ರಗಳಿಗೆ ಮಧ್ಯಪ್ರದೇಶದಲ್ಲಿ ನ.25ರಂದು ಚುನಾವಣೆ ನಡೆದಿದೆ. ಸದ್ಯ ಮಧ್ಯಪ್ರದೇಶದ ಬಿಜೆಪಿ ಹಿಡಿತದಲ್ಲಿದೆ. ಭಾನುವಾರ ಪ್ರಕಟವಾಗುವ ಫಲಿತಾಂಶದಲ್ಲಿ ಬಿಜೆಪಿ ಜಯಭೇರಿ ಬಾರಿಸಿದರೆ, ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹ್ಯಾಟ್ರಿಕ್ ಸಾಧಿಸಲಿದ್ದಾರೆ. ರಾಜ್ಯದಲ್ಲಿ ಬಹುಮತಕ್ಕೆ 116 ಸ್ಥಾನಗಳ ಅಗತ್ಯವಿದೆ. ಆದರೆ, ಸಮೀಕ್ಷೆಗಳ ಪ್ರಕಾರ ಬಿಜೆಪಿ 141 ಸ್ಥಾನಗಳನ್ನು ಪಡೆದು ಶಕ್ತಿಶಾಲಿಯಾಗಿ ಹೊರಹೊಮ್ಮಲಿದೆ. ಭಾನುವಾರ ಮಧ್ಯಾಹ್ನ 1 ಗಂಟೆ ವೇಳೆಗೆ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.

ಛತ್ತೀಸ್ ಗಢದಲ್ಲಿ ಕಮಲ ಅರಳುವುದೇ?
ಮಧ್ಯಪ್ರದೇಶದಿಂದ ಸಿಡಿದು ಹೊಸ ರಾಜ್ಯವಾಗಿರುವ ಛತ್ತಿಸ್ ಗಢದಲ್ಲಿ 90 ಸ್ಥಾನಗಳಿಗೆ ನ.11 ಮತ್ತು 19ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆದಿದೆ. ರಾಜ್ಯದಲ್ಲಿ ಬಹುಮತ ಪಡೆಯಲು 46 ಸ್ಥಾನಗಳ ಅಗತ್ಯವಿದೆ. ಭಾನುವಾರ ಪ್ರಕಟಗೊಳ್ಳುವ ಫಲಿತಾಂಶದಲ್ಲಿ ಬಿಜೆಪಿ ಜಯಭೇರಿ ಬಾರಿಸಿದರೆ, ಸಿಎಂ ರಮಣ್ ಸಿಂಗ್ ಮೂರನೇ ಬಾರಿ ರಾಜ್ಯದಲ್ಲಿ ಕಮಲ ಅರಳಲು ಕಾರಣವಾಗಲಿದ್ದಾರೆ. ಸಮೀಕ್ಷೆಗಳು ಇಲ್ಲಿಯೂ ಬಿಜೆಪಿಯ ಪರವಾಗಿವೆ.

ಮೋದಿ, ರಾಹುಲ್ ಯಾರಿಗೆ ಗೆಲುವು?
ನಾಲ್ಕು ರಾಜ್ಯಗ ಚುನಾವಣೆಯ ಫಲಿತಾಂಶವನ್ನು ಮುಂದಿನ ಲೋಕಸಭೆ ಚುನಾವಣೆಯ ದಿಕ್ಸೂಚಿ ಎಂದು ಪರಿಗಣಿಸಲಾಗಿದೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ನಾಲ್ಕು ರಾಜ್ಯಗಳಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ಇತ್ತ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಹ ಕಾಲಿಗೆ ಚಕ್ರ ಕಟ್ಟಿಕೊಡಂತೆ ನಾಲ್ಕು ರಾಜ್ಯಗಳನ್ನು ಸುತ್ತಿ ಪಕ್ಷದ ಪರವಾಗಿ ಪ್ರಚಾರ ಮಾಡಿದ್ದಾರೆ. ಇಬ್ಬರಲ್ಲಿ ಯಾರಿಗೆ ಗೆಲುವು? ಯಾರ ಪ್ರತಿಷ್ಠೆ ಮಣ್ಣು ಪಾಲಾಗುತ್ತದೆ ಎಂದು ಕಾದು ನೋಡಬೇಕು.












Click it and Unblock the Notifications