ಮತ್ತೊಂದು ಗಡಿ ದಾಟಿದ ಪ್ರೇಮಕಥೆ: ಆಂಧ್ರದ ಯುವಕನನ್ನು ಮದುವೆಯಾದ ಶ್ರೀಲಂಕಾದ ಯುವತಿ
ಅಮರಾವತಿ, ಜುಲೈ. 31: ಇತ್ತೀಚೆಗೆ ಗಡಿ ದಾಟುವ ಪ್ರೇಮ ಕಥೆಗಳು ಹೆಚ್ಚಾಗಿವೆ. ಪಾಕಿಸ್ತಾನದಿಂದ ಇಲ್ಲಿಗೆ ಒಬ್ಬರು ಬಂದರೆ, ಇಲ್ಲಿಂದ ಪಾಕಿಸ್ತಾನಕ್ಕೆ ಹೋದವರು ಒನ್ನೊಬ್ಬರು. ಇವುಗಳ ನಡುವೆ ಮತ್ತೊಂದು ಗಡಿಯಾಚೆಗಿನ ಪ್ರೇಮಕಥೆ ವರದಿಯಾಗಿದೆ. ಶ್ರೀಲಂಕಾದ ಮಹಿಳೆಯೊಬ್ಬರು ಫೇಸ್‌ಬುಕ್‌ನಲ್ಲಿ ಭೇಟಿಯಾದ ಭಾರತೀಯ ಯುವಕನನ್ನು ಮದುವೆಯಾಗಲು ಪ್ರವಾಸಿ ವೀಸಾದ ಮೂಲಕ ಭಾರತಕ್ಕೆ ಬಂದಿದ್ದಾರೆ.
ವಿಘ್ನೇಶ್ವರಿ ಶಿವಕುಮಾರ ಎಂಬ 25 ವರ್ಷದ ಶ್ರೀಲಂಕಾ ಯುವತಿ ಪ್ರವಾಸಿ ವೀಸಾದಲ್ಲಿ ದೇಶಕ್ಕೆ ಭೇಟಿ ನೀಡಿದ್ದಾರೆ. ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಆಂಧ್ರ ಪ್ರದೇಶದ ವೆಂಕಟಗಿರಿಕೋಟಾ ಪಟ್ಟಣದ 28 ವರ್ಷದ ಗೆಳೆಯ ಲಕ್ಷ್ಮಣ್‌ರನ್ನು ಮದುವೆಯಾಗಿದ್ದಾರೆ. ಜುಲೈ 8 ರಂದು ಆಂಧ್ರಪ್ರದೇಶಕ್ಕೆ ಬಂದಿಳಿದ ಆಕೆ, ಜುಲೈ 20 ರಂದು ದೇವಸ್ಥಾನದಲ್ಲಿ ಮದುವೆ ನಡೆದಿತ್ತು.

ವಿಘ್ನೇಶ್ವರಿ ಮತ್ತು ಲಕ್ಷ್ಮಣ್ ಇಬ್ಬರಿಗೂ 2017 ರಲ್ಲಿ ಫೇಸ್‌ಬುಕ್‌ನಲ್ಲಿ ಪರಿಚಯವಾಗಿತ್ತು. ಪರಿಚಯ ಪ್ರೇಮಕ್ಕೆ ತಿರುಗಿತ್ತು. ಹೀಗಾಗಿ ಭಾರತಕ್ಕೆ ಬಂದಿದ್ದ ಇವರು ತಮ್ಮ ಪ್ರೇಮಿಯನ್ನು ಮದುವೆಯಾಗಿದ್ದಾರೆ. ಲಕ್ಷ್ಮಣ್ ಅವರ ಮನೆಯವರ ಆಶೀರ್ವಾದದೊಂದಿಗೆ ದಂಪತಿ ವಿವಾಹವಾಗಿದ್ದಾರೆ. ಆದರೆ, ಅವರು ಪ್ರವಾಸಿ ವೀಸಾದ ಮೇಲೆ ಭಾರತಕ್ಕೆ ಬಂದಿದ್ದು, ವೀಸಾ ಆಗಸ್ಟ್ 15 ರಂದು ಮುಕ್ತಾಯಗೊಳ್ಳುತ್ತದೆ. ವಲಸೆ ನಿಯಮಗಳಿಗೆ ಅನುಸಾರವಾಗಿ, ಚಿತ್ತೂರು ಜಿಲ್ಲಾ ಪೊಲೀಸರು ವಿಘ್ನೇಶ್ವರಿ ಅವರಿಗೆ ನೋಟಿಸ್ ನೀಡಿದ್ದಾರೆ.
ಶ್ರೀಲಂಕಾದ ಯುವತಿ ಶಾಶ್ವತವಾಗಿ ಭಾರತದಲ್ಲಿ ಉಳಿಯುವ, ಭಾರತೀಯ ಪೌರತ್ವದ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ ಮತ್ತು ಅವರ ವೀಸಾವನ್ನು ವಿಸ್ತರಿಸುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ. ಭವಿಷ್ಯದಲ್ಲಿ ಸಂಭವನೀಯ ಕಾನೂನು ಸಂಕೀರ್ಣತೆಗಳನ್ನು ತಪ್ಪಿಸಲು, ಔಪಚಾರಿಕವಾಗಿ ವಿವಾಹವನ್ನು ನೋಂದಾಯಿಸಿಕೊಳ್ಳುವಂತೆ ಪೊಲೀಸರು ದಂಪತಿಗೆ ಸಲಹೆ ನೀಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೈ ರಿಶಾಂತ್ ರೆಡ್ಡಿ ಅವರು ಭಾರತೀಯ ಪೌರತ್ವವನ್ನು ಪಡೆಯುವ ವಿಧಾನ ಮತ್ತು ಮಾನದಂಡಗಳ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದಾರೆ. ಭಾರತೀಯ ಪೌರತ್ವ ಪಡೆಯುವ ವಿಧಾನ ಮತ್ತು ಮಾನದಂಡಗಳ ಬಗ್ಗೆ ವಿಘ್ನೇಶ್ವರಿಗೆ ತಿಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೈ ರಿಶಾಂತ್ ರೆಡ್ಡಿ ಹಂಚಿಕೊಂಡಿದ್ದಾರೆ. ಭಾರತೀಯ ಪ್ರಜೆಯೊಂದಿಗಿನ ವಿವಾಹದ ಆಧಾರದ ಮೇಲೆ ಆಕೆಯ ವೀಸಾದ ವಿಸ್ತರಣೆಯನ್ನು ಪಡೆಯುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications