Train Timings: ಯುಗಾದಿ ಹಬ್ಬಕ್ಕೆ ಭರ್ಜರಿ ಸುದ್ದಿ, ಪ್ರಯಾಣಿಕರಿಗೆ ವಿಶೇಷ ರೈಲು ವ್ಯವಸ್ಥೆ!
ಯುಗಾದಿ ಹಬ್ಬದ ಸಂಭ್ರಮ ಮುಗಿಲು ಮುಟ್ಟಿದೆ, ಕರ್ನಾಟಕ & ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಯುಗಾದಿ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ಈ ಹಬ್ಬವನ್ನ ಕನ್ನಡಿಗರು & ತೆಲುಗು ಭಾಷಿಕರು ಹೊಸವರ್ಷ ಎಂದು ಪರಿಗಣಿಸಿ ಆಚರಿಸುತ್ತಾರೆ. ಹಾಗೇ ಯುಗಾದಿ ಹಬ್ಬಕ್ಕೆ ಬೇವು & ಬೆಲ್ಲ ತಿಂದು ಸಂಭ್ರಮಿಸುತ್ತಾರೆ. ಹೀಗಿದ್ದಾಗ ತಮ್ಮ ತಮ್ಮ ಊರುಗಳಿಗೆ ಜನರು ಹೋಗುವುದು ಮಾಮೂಲಿ, ಹೀಗೆ ಯುಗಾದಿ ಹಬ್ಬಕ್ಕೆ ಊರಿಗೆ ಹೋಗುವ ಪ್ರಯಾಣಿಕರಿಗೆ ಅಂತಾನೇ ಇದೀಗ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ.
ಯುಗಾದಿ ಹಬ್ಬಕ್ಕೆ ಪ್ರಯಾಣಿಕರ ದಟ್ಟಣೆ ಹೆಚ್ಚಾಗುವ ಸಂಭವವಿದ್ದು, ಹೀಗಾಗಿ ದಕ್ಷಿಣ ಮಧ್ಯ ರೈಲ್ವೆಯು ಗುಂಟೂರು ಮತ್ತು ಎಸ್‌ಎಸ್‌ಎಸ್ ಹುಬ್ಬಳ್ಳಿ ನಡುವೆ ವಿಶೇಷ ರೈಲು ಸಂಚರಿಸಲು ವ್ಯವಸ್ಥೆ ಮಾಡಿದೆ. ಪ್ರಮುಖವಾಗಿ, ಯುಗಾದಿ ವಿಶೇಷ ರೈಲು ಸಂಖ್ಯೆ 07271 ಗುಂಟೂರು ಟು ಎಸ್ಎಸ್ಎಸ್ ಹುಬ್ಬಳ್ಳಿ ನಡುವೆ ಸಂಚಾರ ಮಾಡಲಿದೆ. ವಿಶೇಷ ರೈಲು 2025ರ ಮಾರ್ಚ್ 31ಕ್ಕೆ ರಾತ್ರಿ 8 ಗಂಟೆಗೆ ಗುಂಟೂರಿನಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 9 ಗಂಟೆ 20 ನಿಮಿಷಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿ ತಲುಪಲಿದೆ.

ಯಾವ ಯಾವ ನಿಲ್ದಾಣದಲ್ಲಿ ನಿಲುಗಡೆ?
ಹಾಗೇ ರೈಲು ಸಂಖ್ಯೆ 07272 ಎಸ್ಎಸ್ಎಸ್ ಹುಬ್ಬಳ್ಳಿ ಟು ಗುಂಟೂರು ವಿಶೇಷ ರೈಲು ಏಪ್ರಿಲ್ 1, 2025ಕ್ಕೆ ಬೆಳಗ್ಗೆ 11 ಗಂಟೆಗೆ SSS ಹುಬ್ಬಳ್ಳಿಯಿಂದ ಹೊರಟು, ಮರುದಿನವೇ ಬೆಳಗಿನ ಜಾವ 3 ಗಂಟೆಗೆ ಗುಂಟೂರು ರೈಲು ನಿಲ್ದಾಣವನ್ನು ತಲುಪಲಿದೆ ಎಂದು ಮಾಹಿತಿ ನೀಡಲಾಗಿದೆ.
ಇನ್ನು ಈ ವಿಶೇಷ ರೈಲುಗಳು 2 ಮಾರ್ಗದಲ್ಲಿ ನರಸರಾವ್ ಪೇಟೆ, ವಿನುಕೊಂಡ, ಮಾರ್ಕಾಪುರ ರೋಡ್, ಕುಂಬಂ ಸೇರಿದಂತೆ ಗಿಡ್ಡಲೂರು, ನಂದ್ಯಾಳ, ಧೋಣೆ, ಗುಂತಕಲ್, ಬಳ್ಳಾರಿ & ತೋರಣಗಲ್ಲು, ಹೊಸಪೇಟೆ, ಮುನಿರಾಬಾದ್, ಕೊಪ್ಪಳ, ಭಾನಾಪುರ ಮತ್ತು ಬನ್ನಿ ಕೊಪ್ಪ, ಗದಗ ಮತ್ತು ಅಣ್ಣಿಗೇರಿ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ.
ವಿಶೇಷ ರೈಲಿನಲ್ಲಿ 22 ಬೋಗಿಗಳು
ಯುಗಾದ ಹಬ್ಬದ ವಿಶೇಷವಾಗಿ ಸಂಚಾರ ಮಾಡಲಿರುವ ಈ ವಿಶೇಷ ರೈಲಿನಲ್ಲಿ ಒಟ್ಟು 22 ಬೋಗಿಗಳ ವ್ಯವಸ್ಥೆ ಮಾಡಲಾಗಿದೆ. ಹಾಗೇ ಒಟ್ಟಾರೆ 22 ಬೋಗಿಗಳ ಪೈಕಿ 16 ಸಾಮಾನ್ಯ & ದ್ವಿತೀಯ ದರ್ಜೆ, 4 ಚೇರ್ ಕಾರ್ ಮತ್ತು 2 ಸೆಕೆಂಡ್ ಲಗೇಜ್ ಕಮ್ ಬ್ರೇಕ್ ವ್ಯಾನ್‌ಗಳು ಸೇರಿವೆ. ಈ ಮೂಲಕ ಯುಗಾದ ಹಬ್ಬಕ್ಕೆ ತೆರಳಬೇಕಿರುವ ಪ್ರಯಾಣಿಕರಿಗೆ ಸಾಕಷ್ಟು ಲಾಭವಾಗಲಿದ್ದು, ಪ್ರಯಾಣಿಕರಿಗೆ ಅನುಕೂಲ ಆಗುವಂತೆ ರೈಲ್ವೆ ಅಧಿಕಾರಿಗಳು ಈ ವ್ಯವಸ್ಥೆ ಮಾಡಿದ್ದಾರೆ.












Click it and Unblock the Notifications