ಸೆಪ್ಟೆಂಬರ್ 18 ರಿಂದ 22ರವರೆಗೆ ವಿಶೇಷ ಅಧಿವೇಶನ: ಅವಧಿಗೂ ಮುನ್ನವೇ ನಡೆಯುತ್ತಾ ಲೋಕಸಭಾ ಚುನಾವಣೆ?

ಅಚ್ಚರಿಯ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ವಿಶೇಷ ಅಧಿವೇಶನ ನಡೆಸಲು ತೀರ್ಮಾನಿಸಿದ್ದು, ಸೆಪ್ಟೆಂಬರ್ 18-22 ರವರೆಗೆ ಸಂಸತ್ತಿನ ವಿಶೇಷ ಅಧಿವೇಶನ ನಡೆಸುವುದಾಗಿ ಹೇಳಿದೆ. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಗುರುವಾರ ಈ ಘೋಷಣೆ ಮಾಡಿದ್ದಾರೆ.

ಇದನ್ನು ಅಮೃತ ಕಾಲ ಅಧಿವೇಶನ ಎಂದು ಕರೆಯಲಾಗಿದೆ. ಈ ಅಧಿವೇಶನದಲ್ಲಿ ರಾಷ್ಟ್ರದ ಜನತೆಗೆ ಹಲವು ಅಚ್ಚರಿಯ ಪ್ಯಾಕೇಜ್‌ಗಳನ್ನು ಘೋಷಣೆ ಮಾಡುವ ಸಾಧ್ಯತೆ ಕೂಡ ಇದೆ ಎಂದು ಹೇಳಲಾಗಿದೆ. ಅಲ್ಲದೆ, ಅವಧಿಗೂ ಮುನ್ನವೇ ಚುನಾವಣೆಗೆ ಹೋಗಲು ಬಿಜೆಪಿ ಸಿದ್ಧತೆ ಮಾಡಿಕೊಳ್ಳುತ್ತಿದೆಯಾ ಎನ್ನುವ ಅನುಮಾನ ಕೂಡ ವ್ಯಕ್ತವಾಗಿದೆ.

special-parliament-session

ಸಚಿವ ಪ್ರಹ್ಲಾದ್ ಜೋಶಿ ಟ್ವೀಟ್ ಮಾಡಿದ್ದು, "ಸಂಸತ್ತಿನ ವಿಶೇಷ ಅಧಿವೇಶನವನ್ನು (17ನೇ ಲೋಕಸಭೆಯ 13ನೇ ಅಧಿವೇಶನ ಮತ್ತು ರಾಜ್ಯಸಭೆಯ 261ನೇ ಅಧಿವೇಶನ) ಸೆಪ್ಟೆಂಬರ್ 18ರಿಂದ 22ರವರೆಗೆ ಅಧಿವೇಶನಗಳನ್ನು ಕರೆಯಲಾಗುತ್ತಿದೆ. ಅಮೃತಕಾಲದ ಸಂದರ್ಭದಲ್ಲಿ ಸಂಸತ್ತಿನಲ್ಲಿ ಫಲಪ್ರದ ಚರ್ಚೆಗಳು ಮತ್ತು ವಾದಗಳನ್ನು ನಡೆಸಲು ಎದುರು ನೋಡುತ್ತಿದ್ದೇವೆ" ಎಂದು ತಿಳಿಸಿದ್ದಾರೆ. ಆದರೆ, ಅಧಿವೇಶನ ಏಕೆ ಕರೆಯಲಾಗಿದೆ ಎಂದು ಸಚಿವರು ಹೇಳಿಲ್ಲ.

ಅವಧಿಗೂ ಮುನ್ನವೇ ಚುನಾವಣೆ?

ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಅವಧಿಗೂ ಮುನ್ನವೇ ಚುನಾವಣೆಗೆ ಹೋಗುವ ನಿರ್ಧಾರ ಮಾಡುತ್ತಾ ಎನ್ನುವ ಅನುಮಾನ ಕೂಡ ವ್ಯಕ್ತವಾಗಿದೆ. ವಿಪಕ್ಷಗಳ ಹಲವು ಮುಖಂಡರು ಕೂಡ ಈ ಬಗ್ಗೆ ಆಗಾಗ ಪ್ರಸ್ತಾಪಿಸುತ್ತಿರುತ್ತಾರೆ. ಬಿಜೆಪಿ ಸರ್ಕಾರ ಅವಧಿಗೂ ಮುನ್ನ ಲೋಕಸಭಾ ಚುನಾವಣೆ ನಡೆಸಲು ತಯಾರಿ ಮಾಡಿಕೊಳ್ಳುತ್ತಿದೆ ಎಂದು ಹೇಳಿದ್ದರು. ಈಗ ಅಧಿವೇಶನ ಕರೆದಿರುವುದು ಚುನಾವಣೆ ದೃಷ್ಟಿಯಿಂದ ಕೂಡ ಕುತೂಹಲ ಕೆರಳಿಸಿದೆ.

ಪ್ರಮುಖ ಪ್ಯಾಕೇಜ್ ಘೋಷಣೆ

ಇನ್ನು ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ರಾಷ್ಟ್ರದ ಜನತೆಗೆ ವಿಶೇಷ ಪ್ಯಾಕೇಜ್‌ಗಳನ್ನು ಘೋಷಣೆ ಮಾಡುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ. ಬಿಜೆಪಿ ಸರ್ಕಾರದ ಈವರೆಗಿನ ಸಾಧನೆಗಳ ಪಟ್ಟಿ ಕೊಡುವ ಸಾಧ್ಯತೆ ಕೂಡ ಇದೆ. ರಕ್ಷಾ ಬಂಧನದ ದಿನವೇ ಗ್ಯಾಸ್ ಸಿಲಿಂಡರ್ ಗೆ 200 ರೂಪಾಯಿ ಸಬ್ಸಿಡಿ ಘೋಷಣೆ ಮಾಡುವ ಮೂಲಕ ಬಿಜೆಪಿ ಲೋಕಸಭಾ ಚುನಾವಣೆ ತಯಾರಿಯ ಸಂದೇಶ ನೀಡಿದೆ.

ಇದೇ ವರ್ಷ ಮಧ್ಯಪ್ರದೇಶ, ಛತ್ತಿಸ್ ಗಢ, ರಾಜಸ್ಥಾನ, ತೆಲಂಗಾಣ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಕೂಡ ಸಮೀಪಿಸುತ್ತಿದೆ. ಚುನಾವಣಾ ಪೂರ್ವ ಸಮೀಕ್ಷೆಗಳು ಈ ಬಾರಿ ಬಿಜೆಪಿ ಮಧ್ಯಪ್ರದೇಶದಲ್ಲಿ ಅಧಿಕಾರ ಕಳೆದುಕೊಳ್ಳಲಿದೆ ಎಂದು ಹೇಳಿರುವುದು ಕೇಸರಿ ಪಾಳಯದಲ್ಲಿ ಆತಂಕ ಮೂಡಿಸಿದೆ.

ಅಲ್ಲದೆ ವಿಪಕ್ಷಗಳು ಇಂಡಿಯಾ ಹೆಸರಿನಲ್ಲಿ ಒಗ್ಗಟ್ಟಾಗಿದ್ದು ಬಿಜೆಪಿಯನ್ನು ಸೋಲಿಸಲು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿವೆ. ಮುಂಬೈನಲ್ಲಿ ವಿಪಕ್ಷಗಳ ಒಕ್ಕೂಟ ಕೊನೆಯ ಹಂತದ ಸಭೆ ನಡೆಯುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ವಿಶೇಷ ಅಧಿವೇಶನ ನಡೆಸಲು ಘೋಷಣೆ ಮಾಡಿರುವುದು ಅಚ್ಚರಿ ಮೂಡಿಸಿದೆ. ಇದು ವಿಪಕ್ಷಗಳನ್ನು ಕಟ್ಟಿ ಹಾಕಲು ಬಿಜೆಪಿ ಮಾಡಿರುವ ರಾಜಕೀಯ ತಂತ್ರವಾ ಅಥವಾ ದೇಶದ ಜನತೆಗೆ ವಿಶೇಷ ಪ್ಯಾಕೇಜ್ ನೀಡುವ ಉದ್ದೇಶವಾ? ಎನ್ನುವುದು ಶೀಘ್ರದಲ್ಲೇ ತಿಳಿಯಲಿದೆ.

ಮಮತಾ ಬ್ಯಾನರ್ಜಿ ಹೇಳಿದ್ದೇನು?

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಈಗಾಗಲೇ ಬಿಜೆಪಿ ಅವಧಿಗೆ ಮುನ್ನ ಚುನಾವಣೆ ನಡೆಸಲು ಸಜ್ಜಾಗುತ್ತಿದೆ ಎಂದು ಆರೋಪಿಸಿದ್ದರು. 2023ರ ಡಿಸೆಂಬರ್ ತಿಂಗಳಿನಲ್ಲೇ ಲೋಕಸಭಾ ಚುನಾವಣೆ ನಡೆಯಬಹುದು, ಬಿಜೆಪಿ ಈಗಾಗಲೇ ಹೆಲಿಕಾಪ್ಟರ್ ಗಳನ್ನು ಬುಕ್ ಮಾಡಿಕೊಂಡಿದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದರು.

ಇಂಡಿಯಾಗೆ ಹೆದರಿತಾ ಎನ್‌ಡಿಎ?

ಈಗಾಗಲೇ ಲೋಕಸಭಾ ಚುನಾವಣೆ ಬಗ್ಗೆ ಹಲವು ಸಮೀಕ್ಷೆಗಳನ್ನು ನಡೆಸಲಾಗಿದ್ದು ಎಲ್ಲಾ ಸಮೀಕ್ಷೆಗಳಲ್ಲಿ ಕೂಡ ಎನ್‌ಡಿಎ ಅಧಿಕಾರಕ್ಕೆ ಬರುತ್ತದೆ ಎಂದು ಸ್ಪಷ್ಟವಾಗಿ ಹೇಳಿದ್ದರು, ಪ್ರತಿ ಬಾರಿ ಸಮೀಕ್ಷೆ ನಡೆಸಿದಾಗ ಇಂಡಿಯಾ ಒಕ್ಕೂಟ ಪಡೆಯುವ ಸೀಟುಗಳ ಹೆಚ್ಚಳ ಬಿಜೆಪಿಯ ನಿದ್ದೆಕೆಡಿಸಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಅವಧಿಗೂ ಮುನ್ನ ಲೋಕಸಭಾ ಚುನಾವಣೆ ನಡೆಸಲು ಯೋಜನೆ ರೂಪಿಸಿದ್ದರೂ ಅಚ್ಚರಿಯಿಲ್ಲ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+