ನೈಋತ್ಯ ಮುಂಗಾರು; ಈ ಬಾರಿ ವಾಡಿಕೆಗಿಂತ ಅಧಿಕ ಮಳೆ
ನವದೆಹಲಿ, ಮೇ 31: ದೇಶದ ರೈತರಿಗೆ ಭಾರತೀಯ ಹವಾಮಾನ ಇಲಾಖೆ ಸಿಹಿ ಸುದ್ದಿ ನೀಡಿದ್ದು, ಈ ಬಾರಿಯ ಮುಂಗಾರು ಋತುವಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗುತ್ತದೆ ಎಂದು ಹೇಳಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಿಂದ ಅನ್ನದಾತರಲ್ಲಿ ಸಂತಸ ಮೂಡಿದೆ. ಮತ್ತು ಕೃಷಿ ಉತ್ಪನ್ನ ಹೆಚ್ಚುವ ಮೂಲಕ ಹಣದುಬ್ಬರ ನಿಯಂತ್ರಣದ ಭರವಸೆ ಮೂಡಿಸಿದೆ.
"ಈ ಮಾನ್ಸೂನ್ ಋತುವಿನಲ್ಲಿ ಬೀಳುವ ಸರಾಸರಿ ಮಳೆ ಪ್ರಮಾಣ ಶೇ 103ರಷ್ಟು ಆಗಿರುತ್ತದೆ" ಎಂದು ಭಾರತೀಯ ಹವಾಮಾನ ಇಲಾಖೆ ಮಹಾನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ಮಾಹಿತಿ ನೀಡಿದ್ದಾರೆ.
ಏಪ್ರಿಲ್ ತಿಂಗಳಿನಲ್ಲಿ ಭಾರತೀಯ ಹವಾಮಾನ ಇಲಾಖೆ ಭಾರತದಲ್ಲಿ ಈ ಋತುವಿನಲ್ಲಿ ಸಾಮಾನ್ಯ ಮಳೆಯಾಗುತ್ತದೆ ಎಂದು ಹೇಳಿತ್ತು. ಭಾರತದಲ್ಲಿ 1971-2020 ಅವಧಿಯಲ್ಲಿ ಸರಾಸರಿ 87 ಸೆಂ. ಮೀ. ಮಳೆಯಾಗುತ್ತಿದೆ. ಆದರೆ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಸತತ ನಾಲ್ಕನೇ ವರ್ಷ ಭಾರತವು ಸಾಮಾನ್ಯ ಮಳೆಗಾಲವನ್ನು ನೋಡುವ ಸಾಧ್ಯತೆಯಿದೆ. ಇದಕ್ಕೂ ಮುನ್ನ ದೇಶವು 2005-08 ಮತ್ತು 2010-13ರಲ್ಲಿ ಸಾಮಾನ್ಯ ಮಳೆಗಾಲಕ್ಕೆ ಸಾಕ್ಷಿಯಾಗಿತ್ತು.

ಗುಜರಾತ್‌ನಿಂದ ಒಡಿಶಾವರೆಗೆ ಮುಂಗಾರು ಉತ್ತಮ
ಕೃಷಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯನ್ನೇ ಅವಲಂಬಿಸಿರುವ ಗುಜರಾತ್‌ನಿಂದ ಒಡಿಶಾದವರೆಗಿನ ರಾಜ್ಯಗಳಲ್ಲಿ ಈ ಮಾನ್ಸೂನ್ ಋತುವಿನಲ್ಲಿ ಶೇಕಡಾ 106ಕ್ಕಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಮಹಾಪಾತ್ರ ತಿಳಿಸಿದ್ದಾರೆ.
ಮಧ್ಯ ಭಾರತ ಮತ್ತು ದಕ್ಷಿಣ ಭಾರತದ ಪೆನಿನ್ಸುಲಾದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಅವರು ಹೇಳಿದರು. ಈಶಾನ್ಯ ಮತ್ತು ವಾಯುವ್ಯ ಪ್ರದೇಶಗಳಲ್ಲಿ ಸಾಮಾನ್ಯ ಮಳೆಯಾಗುವ ಸಾಧ್ಯತೆಯಿದೆ ಎಂದಿದ್ದಾರೆ.

ವೈಜ್ಞಾನಿಕವಾಗಿ ವರದಿ ನೀಡಿದ್ದೇವೆ
ಕೇರಳದಲ್ಲಿ ಮಾನ್ಸೂನ್ ಆರಂಭದ ಬಗ್ಗೆ ಭಾರತೀಯ ಹವಾಮಾನ ಇಲಾಖೆ ನೀಡಿದ ಮಾಹಿತಿ ಬಗ್ಗೆ ಟೀಕೆಗಳು ಬಂದ ಕುರಿತು ಕೇಳಿದಾಗ, "ಮುಂಗಾರು ಆರಂಭ ಮತ್ತು ಪ್ರಗತಿಯ ಬಗ್ಗೆ ಮಾಹಿತಿ ನೀಡಲು ಹವಾಮಾನ ಇಲಾಖೆ ವೈಜ್ಞಾನಿಕ ಪ್ರಕ್ರಿಯೆಯನ್ನು ಅನುಸರಿಸಿದೆ" ಎಂದು ಹೇಳಿದರು.
"ಕೇರಳದ ಶೇಕಡ 70 ರಷ್ಟು ಹವಾಮಾನ ಕೇಂದ್ರಗಳು ವ್ಯಾಪಕ ಮಳೆಯನ್ನು ವರದಿ ಮಾಡಿದೆ ಮತ್ತು ಬಲವಾದ ಪಶ್ಚಿಮ ಮಾರುತಗಳು ಮತ್ತು ಪ್ರದೇಶದ ಮೇಲೆ ಮೋಡದ ರಚನೆಗೆ ಸಂಬಂಧಿಸಿದ ವರದಿ ನೀಡಲು ನಿಯತಾಂಕಗಳನ್ನು ಪೂರೈಸಲಾಗಿದೆ" ಎಂದು ಅವರು ಹೇಳಿದರು.

ಜೂನ್‌ನಲ್ಲಿ ಕಡಿಮೆ ತಾಪಮಾನ
ಸಮಭಾಜಕ ಪೆಸಿಫಿಕ್ ಪ್ರದೇಶದಲ್ಲಿ ಚಾಲ್ತಿಯಲ್ಲಿರುವ ಲಾನಿನಾ ಪರಿಸ್ಥಿತಿಗಳು ಆಗಸ್ಟ್‌ವರೆಗೆ ಮುಂದುವರಿಯುವ ನಿರೀಕ್ಷೆಯಿದೆ ಮತ್ತು ಭಾರತದಲ್ಲಿ ಮುಂಗಾರು ಮಳೆಗೆ ಉತ್ತಮ ಮುನ್ಸೂಚನೆ ನೀಡುತ್ತದೆ ಎಂದು ಮಹಾಪಾತ್ರ ಹೇಳಿದರು.
ಪಶ್ಚಿಮ ಹಿಂದೂ ಮಹಾಸಾಗರದಲ್ಲಿ ಸಾಮಾನ್ಯ ಸಮುದ್ರದ ಮೇಲ್ಮೈ ತಾಪಮಾನಕ್ಕಿಂತ ತಂಪಾಗಿರುವ ಋಣಾತ್ಮಕ ಬೆಳವಣಿಗೆಯಿಂದ ಕೇರಳದ ಕೆಲವು ಭಾಗಗಳು ಸೇರಿ ನೈಋತ್ಯ ಪರ್ಯಾಯ ದ್ವೀಪದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಬಹುದು ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರ, ಲಡಾಖ್, ಉತ್ತರಾಖಂಡ ಮತ್ತು ಅರುಣಾಚಲ ಪ್ರದೇಶವನ್ನು ಹೊರತುಪಡಿಸಿ ದೇಶದ ಹೆಚ್ಚಿನ ಭಾಗಗಳು ಜೂನ್‌ನಲ್ಲಿ ಸಾಮಾನ್ಯ ಗರಿಷ್ಠ ತಾಪಮಾನಕ್ಕಿಂತ ಕಡಿಮೆ ತಾಪಮಾನ ದಾಖಲಾಗುವ ನಿರೀಕ್ಷೆ ಇದೆ ಎಂದು ಮಹಾಪಾತ್ರ ಹೇಳಿದ್ದಾರೆ.

ಅನ್ನದಾತರಿಗೆ ಸಂತಸ
ವಾಡಿಕೆಗಿಂತ ಹೆಚ್ಚಿನ ಮಳೆಯಿಂದ ಭಾರತದ ಕೃಷಿ ಉತ್ಪಾದನೆ ಈ ಬಾರಿ ಹೆಚ್ಚಾಗುವ ಸಾಧ್ಯತೆ ಇದೆ. ಕಳೆದ ಬಾರಿ ಅತಿವೃಷ್ಠಿ, ಅನಾವೃಷ್ಠಿಯ ಹೊಡೆತಕ್ಕೆ ಸಿಲುಕಿ ರೈತರು ನಷ್ಟ ಅನುಭವಿಸಿದ್ದರು. ಈ ಬಾರಿಯೂ ಉತ್ತರ ಭಾರತದಲ್ಲಿ ಬಿಸಿ ಗಾಳಿ, ಅಧಿಕ ತಾಪಮಾನದಿಂದ ಗೋಧಿ ಇಳುವರಿ ಕುಸಿದಿತ್ತು.
ದೇಶದಲ್ಲಿ ಆಹಾರ ಧಾನ್ಯ, ತರಕಾರಿ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಮುಂಗಾರು ಉತ್ತಮವಾದರೆ, ಅತಿವೃಷ್ಠಿಯಂತ ಅನಾಹುತ ಸಂಭವಿಸದೇ ಹೋದರೆ, ಈ ಬಾರಿ ಅನ್ನದಾತರು ಬಂಪರ್ ಬೆಳೆ ತೆಗೆಯುವ ಸಾಧ್ಯತೆ ಇದೆ.












Click it and Unblock the Notifications